Site icon Vistara News

BY Vijayendra : ಹೆದರಬೇಡಿ ನಾನಿದ್ದೇನೆ; ಬಿಜೆಪಿ ಕಾರ್ಯಕರ್ತರ ಬೆನ್ನಿಗೆ ನಿಂತ ಬಿ.ವೈ. ವಿಜಯೇಂದ್ರ!

BY Vijayendra

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ಕಾರ್ಯಕರ್ತರ (BJP Activist) ಬೆನ್ನಿಗೆ ನಿಂತಿದ್ದಾರೆ. ತಮ್ಮ ಕಾರ್ಯಕರ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ವಹಿಸುವುದಾಗಿ ಅವರು ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾ (Social Media) ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ವಿಜಯೇಂದ್ರ, ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಮ್ಮ ಕಾರ್ಯಕರ್ತರಿಗೆ ಪೊಲೀಸರು ಅನಗತ್ಯವಾಗಿ ಕಿರುಕುಳ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಾವು ಅವರ ರಕ್ಷಣೆಗೆ ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಸಮಸ್ಯೆ ಆದಲ್ಲಿ 24X7 ಕಂಟ್ರೋಲ್ ರೂಂ ತೆರೆಯಲು ನಿರ್ಧಾರ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ಪಕ್ಷದ ಕಾರ್ಯಕರ್ತರ ರಕ್ಷಣೆಗೆ ರಾಜ್ಯ ಬಿಜೆಪಿ (BJP Karnataka) ಸದಾ ಬದ್ಧವಾಗಿರುತ್ತದೆ ಎಂಬ ಸಂದೇಶವನ್ನು ನೀಡಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು, ಸದಾ ಒಂದಲ್ಲ ಒಂದು ವಿವಾದಗಳಿಗೆ ತುತ್ತಾಗುತ್ತಲೇ ಬಂದಿದೆ. ಈ ನಡುವೆ ಕಾಂಗ್ರೆಸ್‌ ಸರ್ಕಾರದ ಹಾಗೂ ಮಂತ್ರಿ ಮಂಡಲದ ವಿರುದ್ಧ ಬಿಜೆಪಿ ಕಾರ್ಯಕರ್ತರ ಸಹಿತ ಹಲವರು ಪೋಸ್ಟರ್‌ಗಳನ್ನು, ವಿಡಿಯೊಗಳನ್ನು ಇಲ್ಲವೇ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ಸೋಷಿಯಲ್‌ ಮೀಡಿಯಾಗಳಲ್ಲಿ ಈ ಕುರಿತು ಪೋಸ್ಟ್‌ಗಳನ್ನು ಮಾಡುತ್ತ ಬಂದಿದ್ದಾರೆ. ಇಂಥವರ ಮೇಲೆ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಬಗ್ಗೆ ಬಿ.ವೈ. ವಿಜಯೇಂದ್ರ ಅವರಿಗೆ ಸಾಕಷ್ಟು ದೂರುಗಳು ಬಂದಿವೆ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಟ್ವೀಟ್‌ ಮಾಡುವ ಮೂಲಕ ಕಾರ್ಯಕರ್ತರ ಬೆನ್ನಿಗೆ ನಿಲ್ಲುವುದಾಗಿ ಹೇಳಿದ್ದಾರೆ.

ವಿಜಯೇಂದ್ರ ಟ್ವೀಟ್‌ನಲ್ಲೇನಿದೆ?

“ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಮ್ಮ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಪೊಲೀಸರು ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ವೇದಿಕೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ಧೋರಣೆ ವಿರುದ್ಧ ಹಾಗೂ ಸರ್ಕಾರದ ವೈಫಲ್ಯಗಳ ವಿರುದ್ಧ ದನಿ ಎತ್ತಲು ಕಾರ್ಯಕರ್ತರು ಯಾವುದಕ್ಕೂ ಅಂಜಬೇಕಿಲ್ಲ, ಎದೆಗುಂದ ಬೇಕಿಲ್ಲ.

ಸಂವಿಧಾನ ನಮಗೆ ಕೊಡಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು, ಕಾನೂನು ಪೊಲೀಸರಿಗೆ ಅಧಿಕಾರ ನೀಡಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲೂ ನಮ್ಮ ಕಾರ್ಯಕರ್ತ ಬಂಧುಗಳಿಗೆ ತೊಂದರೆ, ಬೆದರಿಕೆ, ಕಿರುಕುಳಗಳು ಎದುರಾದರೆ ಅವರ ನೆರವಿಗೆ ಪಕ್ಷ ತಕ್ಷಣ ನೆರವಿಗೆ ಬರಲಿದೆ. ಇಷ್ಟರಲ್ಲೇ ರಾಜ್ಯ ಹಾಗೂ ಜಿಲ್ಲೆಯ ಪಕ್ಷದ ಕಛೇರಿಗಳಲ್ಲಿ ಕಾನೂನು ನೆರವಿಗಾಗಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಕಂಟ್ರೋಲ್ ರೂಂ ತೆರೆಯುವ ಬಗ್ಗೆ ನಿರ್ಧರಿಸಲಾಗುವುದು” ಎಂದು ಬಿ.ವೈ. ವಿಜಯೇಂದ್ರ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಬಿಜೆಪಿ ಕಾರ್ಯಕರ್ತರ ಬೆನ್ನಿಗೆ ನಿಂತಿದ್ದಾರೆ.

ಇದನ್ನೂ ಓದಿ: ಮನ್‌ ಕೀ ಬಾತ್‌ನಲ್ಲಿ ಚಾಮರಾಜನಗರದ ವರ್ಷಾ ಎಂಬ ಮಹಿಳೆಯ ನೆನೆದ ಮೋದಿ; ಏನಿವರ ಸಾಧನೆ?

ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂಬ ಸಂದೇಶ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದವರ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಸರ್ಕಾರದ ವಿರುದ್ಧ ಪೋಸ್ಟ್ ಮಾಡಿದವರ ಬಂಧನ ಮಾಡಲಾಗುತ್ತಿದೆ. ಆದರೆ, ಇದಕ್ಕೆ ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂಬ ಸಂದೇಶವನ್ನು ಬಿ.ವೈ. ವಿಜಯೇಂದ್ರ ರವಾನೆ ಮಾಡಿದ್ದಾರೆ.

Exit mobile version