Site icon Vistara News

ಐಟಿ ಕಂಪನಿಗಳಿಂದ ಒತ್ತುವರಿಯಾಗಿಲ್ಲ, ಬೆಂಗಳೂರಿನ ಪ್ರಗತಿಗೆ ಕಾರಣವಾದ ಅವರನ್ನು ದೂರಬೇಡಿ: ಮೋಹನದಾಸ್‌ ಪೈ

mohandas pai

ಬೆಂಗಳೂರು: ಬೆಂಗಳೂರಿನಲ್ಲಿ ಅತಿವೃಷ್ಟಿಯಿಂದ ಆಗಿರುವ ಅನಾಹುತಕ್ಕೆ ಐಟಿ ಕಂಪನಿಗಳು ಕಾರಣವಲ್ಲ. ಐಟಿ ಕಂಪನಿಗಳು ಬೆಂಗಳೂರಿನ ಅಭಿವೃದ್ಧಿಗೆ ಕಾರಣವಾಗಿವೆ. ಹೀಗಾಗಿ ಅವುಗಳನ್ನು ದೂರುವುದು ಸರಿಯಲ್ಲ ಎಂದು ಐಟಿ ಉದ್ಯಮಿ ಮೋಹನದಾಸ್‌ ಪೈ ಹೇಳಿದ್ದಾರೆ.

ʻವಿಸ್ತಾರ ನ್ಯೂಸ್‌ʼಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ. ಬೆಂಗಳೂರನ್ನು ಹಾಳು ಮಾಡಿದ್ದಾರೆ ಎಂದು ಐಟಿ ಕಂಪನಿಗಳನ್ನು ದೂರಬೇಡಿ. ಒತ್ತುವರಿ ಮಾಡಿರುವವರು ಐಟಿ ಬಿಟಿಯವರಲ್ಲ. ಐಟಿಯವರು ಭೂಮಾಲೀಕರಲ್ಲ. ಹೆಚ್ಚಿನ ಐಟಿ ಕಂಪನಿಯವರು ಬಾಡಿಗೆ ಕಟ್ಟಡಗಳಲ್ಲಿ ಇದ್ದಾರೆ. ಅವರಿಗೆ ಕಟ್ಟಡಗಳನ್ನು ರಾಜಕಾಲುವೆ ಮೇಲೆ ಕಟ್ಟಿಸಿರುವುದು ತಿಳಿದಿರಲು ಸಾಧ್ಯವಿಲ್ಲ. ಐಟಿಯವರ ಮೇಲೆ ಆರೋಪ ಹೊರಿಸುವುದು ತಪ್ಪು. ಇವತ್ತು ಯುವಕರಿಗೆ ಕೆಲಸ ಕೊಡುತ್ತಿರುವವರು ಯಾರು? ಐಟಿಯನ್ನು ಟೀಕಿಸುವವರು ಕೆಲಸ ಕೊಡುವುದಿಲ್ಲ. ಕೆಲಸ ಕೊಡುವವರು ಕಂಪನಿಯವರು. ಇಂದು ಬೆಂಗಳೂರಿಗರು ಬಹಳ ಅದೃಷ್ಟವಂತರು, ಯಾಕೆಂದರೆ ವಿಶ್ವದ ಎಲ್ಲಾ ಕಂಪನಿಗಳು ಬೆಂಗಳೂರಿನಲ್ಲಿವೆ. ಅವರಿಂದ ನಮಗೆ ಟ್ಯಾಕ್ಸ್ ಬರುತ್ತಿದೆ, ಸರ್ಕಾರಕ್ಕೆ ಆದಾಯವಿದೆ. ಹೀಗಾಗಿ ಐಟಿಯನ್ನು ದೂರುವುದು ಸರಿಯಲ್ಲ ಎಂದು ಉದ್ಯಮಿ ಮೋಹನದಾಸ್ ಪೈ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಜನಸಂಖ್ಯೆ 6.50 ಕೋಟಿ. ರಾಜ್ಯದ ಜನಸಂಖ್ಯೆ 20% ಬೆಂಗಳೂರಿನಲ್ಲಿದೆ. ಆದರೆ ಆದಾಯದ 60% ಬೆಂಗಳೂರಿನಿಂದಲೇ ಬರುತ್ತಿದೆ. ಇಷ್ಟು ದೊಡ್ಡ ಮೊತ್ತದ ಆದಾಯ ನೀಡುವ ಊರಿಗೆ ಸರಿಯಾದ ಆಡಳಿತ ವ್ಯವಸ್ಥೆ, ಮೂಲಸೌಕರ್ಯಗಳು ಇರಬೇಕು. ಇದನ್ನು ಸರ್ಕಾರ ಖಾತ್ರಿಪಡಿಸಬೇಕು. 1 ಕೋಟಿ ಜನಸಂಖ್ಯೆಗೆ ಹೋಲಿಸಿದರೆ 60 ಲಕ್ಷ ಜನಸಂಖ್ಯೆಯ ಸಿಂಗಾಪುರ ಅದರದೇ ಆದ ಪ್ರಧಾನಿಯಿಂದ ಹಿಡಿದು ಅಧಿಕಾರಿಗಳವರೆಗೆ ಸಾಕಷ್ಟು ಆಡಳಿತಾತ್ಮಕ ಶಕ್ತಿಯನ್ನು ಹೊಂದಿ ಅಭಿವೃದ್ಧಿ ಕಂಡಿದೆ. ಹಾಗೇ ಬೆಂಗಳೂರು ಕೂಡ ಆಗಬೇಕಿದ್ದರೆ ರಾಜಧಾನಿಯನ್ನು ವಿಕೇಂದ್ರೀಕೃಗೊಳಿಸಿ ಅಭಿವೃದ್ಧಿಪಡಿಸಬೇಕು ಎಂದು ಪೈ ತಮ್ಮ ದೂರದೃಷ್ಟಿಯನ್ನು ಮಂಡಿಸಿದರು.

ಇದನ್ನೂ ಓದಿ | ಅಸಮರ್ಪಕ ಆಡಳಿತ ಸರಿಪಡಿಸಲು ಬೆಂಗಳೂರನ್ನು ಐದು ಭಾಗ ಮಾಡಿ: ಮೋಹನದಾಸ್‌ ಪೈ

Exit mobile version