ಬೆಂಗಳೂರು: ಕಾಂಗ್ರೆಸ್‌ನಲ್ಲಿ ಈಗ ಆರಂಭವಾಗಿರುವ ಪೂರ್ಣಾವಧಿ-ಅಲ್ಪಾವಧಿ ಮುಖ್ಯಮಂತ್ರಿ (Karnataka CM) ಚರ್ಚೆಯು ಬಿರುಸು ಪಡೆದುಕೊಂಡಿದೆ. ಮುಂದಿನ 5 ವರ್ಷಗಳವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಅಧಿಕಾರವನ್ನು ಮುಂದುವರಿಸಲಿದ್ದಾರೆ ಎಂಬ ಸಚಿವ ಎಂ.ಬಿ. ಪಾಟೀಲ್ ಹೇಳಿಕೆಗೆ ವಿಚಾರವಾಗಿ ವಾದ-ಪ್ರತಿವಾದಗಳು ಶುರುವಾಗಿವೆ. ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಗರಂ ಆಗಿದ್ದ ಬೆನ್ನಲ್ಲೇ ಮಧ್ಯ ಪ್ರವೇಶ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಯಾರೂ ಕೂಡ ಅನಗತ್ಯ ಹೇಳಿಕೆ ನೀಡಬಾರದು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಣದವರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಣದೀಪ್ ಸಿಂಗ್ ಸುರ್ಜೆವಾಲ, ಯಾರೂ ಕೂಡ ಅನಗತ್ಯ ಹೇಳಿಕೆ ನೀಡಬಾರದು. ಸಿಎಂ, ಡಿಸಿಎಂ ನಡುವಿನ ಮಾತುಕತೆಗಳು ನಾಲ್ಕು ಗೋಡೆಯ ಮಧ್ಯೆ ನಡೆದಿರುವುದು. ಯಾರೂ ಕೂಡ ಗೊಂದಲ ಮೂಡಿಸುವ ಹೇಳಿಕೆ ನೀಡಬೇಡಿ. ಎಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: Karnataka CM: ನಾನು ತೀಕ್ಷ್ಣವಾಗಿ ಮಾತನಾಡಬಲ್ಲೆ, ಆದರೆ ಬೇಡವೆಂದ ಡಿಕೆಸು; ಎಐಸಿಸಿ ಅಧ್ಯಕ್ಷರು ನೋಡ್ಕೋತಾರೆ ಅಂದ್ರು ಡಿಕೆಶಿ
ಎಲ್ಲವನ್ನೂ ಗಮನಿಸುತ್ತೇವೆ: ಸುರ್ಜೆವಾಲ
ಗೊಂದಲ ಮೂಡಿಸುವ ಹೇಳಿಕೆ ನೀಡಿದರೆ ಎಐಸಿಸಿ ಎಲ್ಲವನ್ನೂ ಗಮನಿಸುತ್ತದೆ. ಯಾವುದೇ ತೀರ್ಮಾನಗಳಿದ್ದರೂ ಎಐಸಿಸಿ ನಾಯಕರೇ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಹೇಳಿಕೆ ನೀಡುವ ಮೂಲಕ ಈಗ ಹುಟ್ಟಿರುವ ಚರ್ಚೆಗೆ ತೆರೆ ಎಳೆಯಲು ಪ್ರಯತ್ನ ಮಾಡಿದ್ದಾರೆ.
ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಆಗಿದೆ ಅಂದರೆ ಏನರ್ಥ?
ಯಾರೂ ಕೂಡ ಅನಗತ್ಯ ಹೇಳಿಕೆ ನೀಡಬಾರದು. ಸಿಎಂ, ಡಿಸಿಎಂ ನಡುವಿನ ಮಾತುಕತೆಗಳು ನಾಲ್ಕು ಗೋಡೆಯ ಮಧ್ಯೆ ನಡೆದಿರುವುದು ಎಂದು ರಣದೀಪ್ ಸಿಂಗ್ ಸುರ್ಜೆವಾಲ ನೀಡಿರುವ ಹೇಳಿಕೆ ಈಗ ಮುಖ್ಯಮಂತ್ರಿ ಗಾದಿಯ ಅಧಿಕಾರ ಹಂಚಿಕೆಗೆ ಪುಷ್ಟಿ ನೀಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಂದರೆ, ನಾಲ್ಕು ಗೋಡೆಯ ಮಧ್ಯೆ ಈ ಬಗ್ಗೆ ಚರ್ಚೆ ನಡೆದಿದ್ದು, ಏನು ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂಬುದನ್ನು ಮಾತ್ರ ಅವರು ಬಹಿರಂಗಗೊಳಿಸಿಲ್ಲ.
ಎಐಸಿಸಿ ಅಧ್ಯಕ್ಷರು ನೋಡ್ಕೋತಾರೆ ಅಂದ್ರು ಡಿಕೆಶಿ
ಈ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಯೂ ಹೆಚ್ಚಿನ ಗಮನವನ್ನು ಸೆಳೆದಿದೆ. ಎಂ.ಬಿ. ಪಾಟೀಲ್ ಹೇಳಿಕೆ ವಿಚಾರವಾಗಿ ಮಾಧ್ಯಮದವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿದಾಗ, ಯಾರು ಏನೇ ಹೇಳಿಕೆ ಕೊಡಲಿ. ಎಐಸಿಸಿ ಸಮಿತಿ ಇದೆ, ಎಐಸಿಸಿ ಅಧ್ಯಕ್ಷರಿದ್ದಾರೆ. ಈ ವಿಷಯವನ್ನು ಅವರು ನೋಡಿಕೊಳ್ಳುತ್ತಾರೆ. ನಾನು ಈ ಬಗ್ಗೆ ಯಾವುದೇ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆ.ಸಿ. ವೇಣುಗೋಪಾಲ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೋಡಿಕೊಳ್ಳುತ್ತಾರೆ ಎಂದು ಪರೋಕ್ಷ ಸಂದೇಶವನ್ನು ನೀಡಿದ್ದಾರೆ.
ಎಂ.ಬಿ. ಪಾಟೀಲ್ ಹೇಳಿದ್ದೇನು?
ಮೈಸೂರಿನ ಸುತ್ತೂರು ಮಠಕ್ಕೆ ಸೋಮವಾರ ಭೇಟಿ ನೀಡಿದ್ದ ಎಂ.ಬಿ. ಪಾಟೀಲ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಲೋಕಸಭಾ ಚುನಾವಣೆ ಬಳಿಕ ಪಕ್ಷದಲ್ಲಿ ಯಾವುದೇ ಬದಲಾವಣೆಯಿಲ್ಲ. ಮುಂದಿನ 5 ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದು ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿ ಮಾಡಿದೆ. ಈ ನಡುವೆ ಇದರ ಬಗ್ಗೆ ಮಂಗಳವಾರ ಪುನಃ ಸ್ಪಷ್ಟೀಕರಣ ನೀಡಿರುವ ಸಚಿವ ಎಂ.ಬಿ. ಪಾಟೀಲ್, ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ನಾನು ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: Karnataka CM: ಸಿದ್ದು ಪೂರ್ಣಾವಧಿ ಸಿಎಂ; ವರಿಷ್ಠರು ಹೇಳಿದ್ದನ್ನೇ ಹೇಳಿದ್ದು ಎಂದ ಎಂಬಿಪಿ; ಡಿಸ್ಟರ್ಬ್ ಆದ್ರಾ ಡಿಕೆಶಿ?
ಈ ಬಗ್ಗೆ ಮಾತನಾಡಿರುವ ಎಂ.ಬಿ. ಪಾಟೀಲ್, ನಾನು ಪದೇ ಪದೆ ಈ ಬಗ್ಗೆ ಮಾತನಾಡಲ್ಲ. ನಿನ್ನೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ. ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಎಂದು ನಮ್ಮ ನಾಯಕರಾದ ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಅವರು ಏನು ಹೇಳಿದ್ದರೋ ನಾನೂ ಅದನ್ನೇ ಹೇಳಿದ್ದೇನೆ. ಅಧಿಕಾರ ಹಂಚಿಕೆ ಇಲ್ಲ, ಅದೇನಿದ್ದರೂ ಜನರ ಜತೆ ಮಾತ್ರ ಎಂದು ಹೇಳಿದ್ದರು. ಇದರಲ್ಲಿ ನನ್ನದು ಯಾವುದೇ ಹೇಳಿಕೆ ಇಲ್ಲ. ನಾನು ವೈಯಕ್ತಿಕವಾಗಿ ಮಾತನಾಡಿಲ್ಲ. ಎಐಸಿಸಿ ಪ್ರದಾನ ಕಾರ್ಯದರ್ಶಿ ವೇಣುಗೋಪಾಲ್ ಹೇಳಿದ್ದನ್ನು ಮಾತ್ರವೇ ನಾನು ಹೇಳಿದ್ದೇನೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಮುಂದುವರಿಯುತ್ತಾರೆ ಎಂದು ಹೇಳಿದ್ದರು. ನಾನೂ ಅದನ್ನೇ ಹೇಳಿದ್ದೇನೆ ಎಂದು ತಿಳಿಸಿದರು.
ಹೈಕಮಾಂಡ್ 100% ಸ್ಟ್ರಾಂಗ್ ಇದೆ- ಕುಣಿಗಲ್ ಶಾಸಕ ರಂಗನಾಥ್
ಬಡವರ ನೋವು ತೆಗೆಯಲು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲಾಗಿದೆ. ಸಿಎಂ ಸಿದ್ದರಾಮಯ್ಯ ಒಳ್ಳೆಯ ಆಡಳಿತ ಕೊಡಲು ಮುಂದಾಗಿದ್ದಾರೆ. ಯಾವುದೇ ರೀತಿಯ ಗೊಂದಲ ನಮ್ಮಲ್ಲಿ ಇಲ್ಲ. ಅಧಿಕಾರ ಹಂಚಿಕೆ ಪಕ್ಷದ ಆಂತರಿಕ ವಿಚಾರ. ಅದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ವರಿಷ್ಠರು ನಮಗೇನೂ ಹೇಳಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಒಳ್ಳೆಯ ಆಡಳಿತ ಕೊಡಲು ಮುಂದಾಗಿದ್ದಾರೆ. ಸಿಎಂ ಆಗುವ ಮುನ್ನ ಮಾತುಕತೆ ಆಗಿದೆ. ಹೈಕಮಾಂಡ್ ಕೊಟ್ಟ ಆದೇಶವನ್ನು ನಾವು ಪಾಲಿಸುತ್ತೇವೆ. ಸಚಿವ ಎಂ.ಬಿ. ಪಾಟೀಲ್ ಅವರ ಹೇಳಿಕೆ ವೈಯಕ್ತಿಕವಾಗಿದೆ. ಹೈಕಮಾಂಡ್ 100% ಸ್ಟ್ರಾಂಗ್ ಇದೆ ಎಂದು ವಿಸ್ತಾರ ನ್ಯೂಸ್‌ಗೆ ಕುಣಿಗಲ್ ಶಾಸಕ ರಂಗನಾಥ್ ಹೇಳಿಕೆ ನೀಡಿದ್ದಾರೆ.
ಅಧಿಕಾರದ ಹಂಚಿಕೆ ಸೂತ್ರ ವಿಚಾರ ನನಗೆ ಗೊತ್ತಿಲ್ಲ- ಅಶೋಕ್ ಪಟ್ಟಣ್
ಅಧಿಕಾರದ ಹಂಚಿಕೆ ಸೂತ್ರ ವಿಚಾರ ನನಗೆ ಗೊತ್ತಿಲ್ಲ. 50:50 ಸೂತ್ರ ಆಗಿರುವುದು ಯಾವ ಶಾಸಕರಿಗೂ ಗೊತ್ತಿಲ್ಲ. ಏನೇ ಇದ್ದರೂ ಹೈಕಮಾಂಡ್ ಲೆವೆಲ್‌ನಲ್ಲಿ ಆಗಿದೆ. ಹಿರಿಯ ನಾಯಕರ ಕೇಳಿ ಸ್ಪಷ್ಟೀಕರಣ ಕೊಡುತ್ತಾರೆ. ಸಿದ್ದರಾಮಯ್ಯ 5 ವರ್ಷ ಇರೋದು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಶಾಸಕ ಅಶೋಕ್ ಪಟ್ಟಣ್ ಹೇಳಿದ್ದಾರೆ.
ಈಗಲೇ ಇಂತಹ ಹೇಳಿಕೆ ಸರಿಯಲ್ಲ- ರಿಜ್ವಾನ್ ಅರ್ಷದ್
ನಮ್ಮ ಸರ್ಕಾರ ಈಗಷ್ಟೇ ಕಾರ್ಯಾರಂಭ ಮಾಡಿದೆ. ಈಗಲೇ ಇಂತಹ ಹೇಳಿಕೆ ಸರಿಯಲ್ಲ. ಪಕ್ಷದ ಕಾರ್ಯಕರ್ತನಾಗಿ ಪಕ್ಷದಿಂದ ಏನು ಘೋಷಣೆಯಾಗಿದೆ ಅನ್ನೋದು ಗೊತ್ತಿದೆ. ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಆಗಿದ್ದಾರೆ. ಪಕ್ಷದೊಳಗೆ ಕಂಡೀಷನ್ ಆಗಿದೆ ಎಂಬ ಮಾಹಿತಿ ನನಗೆ ಇಲ್ಲ. ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಸಲೀಂ ಅಹಮದ್ ವಿರೋಧ
ಸಚಿವ ಎಂ.ಬಿ. ಪಾಟೀಲ್ ಹೇಳಿಕೆಯನ್ನು ನಾನು ನೋಡಿಲ್ಲ. ಆದರೆ, ಏನೇ ಮಾತುಕತೆ ಆಗಿದ್ದರೂ ಅದು ನಾಲ್ವರು ನಾಯಕರ ಮಧ್ಯೆ ಆಗಿರುವುದು. ಎಐಸಿಸಿ ಅಧ್ಯಕ್ಷರು, ರಾಜ್ಯ ಉಸ್ತುವಾರಿ ಹಾಗೂ ಇಬ್ಬರು ನಾಯಕರ ನಡುವೆ ಆಗಿರುವ ಮಾತುಕತೆಯಾಗಿದೆ. ಏನೇ ಇದ್ದರೂ ಅದು ಅವರಿಗೆ ಮಾತ್ರ ಗೊತ್ತಿದೆ. ನಮಗೆ ಸರ್ಕಾರವನ್ನು ಚೆನ್ನಾಗಿ ನಡೆಸಬೇಕು, ಜನರ ನಿರೀಕ್ಷೆ ಈಡೇರಿಸಬೇಕು ಎಂಬ ಇಚ್ಛೆ ಇದೆ. ವರಿಷ್ಠರ ತೀರ್ಮಾನದಂತೆ ಎಲ್ಲವೂ ನಡೆಯುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Heart Attack: ಹೃದಯಾಘಾತಕ್ಕೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಬಲಿ, ಏನು ಕಾರಣ?
ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ
ಒಳಗೆ ನಡೆದಿರುವ ಚರ್ಚೆ ಕೇವಲ ನಾಲ್ಕು ಜನರಿಗೆ ಬಿಟ್ಟು ಯಾರಿಗೂ ಗೊತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಸುರ್ಜೆವಾಲ, ವೇಣುಗೋಪಾಲ್ ಅವರಿಗೆ ಮಾತ್ರ ಮಾಹಿತಿ ಇದೆ. ಅಧಿಕಾರ ಹಂಚಿಕೆ ಬಗ್ಗೆ ಮಾತುಕತೆ ಈಗ ಅಪ್ರಸ್ತುತವಾಗಿದೆ. ಶಾಸಕಾಂಗ ಸಭೆಯಲ್ಲಿ ಅಧಿಕಾರದ ಅವಧಿ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.