Site icon Vistara News

DK Shivakumar: ನನ್ನ, ಸಿದ್ದರಾಮಯ್ಯ ಮನೆ ಸುತ್ತೋದು, ಚಾಡಿ ಹೇಳೋದು ಬಿಡಿ; ಡಿಕೆಶಿ ಖಡಕ್‌ ವಾರ್ನಿಂಗ್‌

DK Shivkumar warning

Stomachache For DK Shivakumar; Delhi Travel Cancelled

ಬೆಂಗಳೂರು: ʻʻಇಲ್ಲಿ ವ್ಯಕ್ತಿಗಿಂತಲೂ ಪಕ್ಷ ಮುಖ್ಯ. ನಾವೆಲ್ಲರೂ ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಗಾಂಧಿ ಕುಟುಂಬದವರು, ಮಲ್ಲಿಕಾರ್ಜುನ ಖರ್ಗೆ ಅವರು ಏನು ಹೇಳಿದ್ದಾರೋ ಅದೇ ನಮಗೆ ವೇದ ವಾಕ್ಯʼʼ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಅದರ ಜತೆಗೇ ಇನ್ನೊಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ʻನನ್ನ ಮನೆ, ಸಿದ್ದರಾಮಯ್ಯನವರ (Siddaramaiah) ಮನೆ ಅಂತ ಸುತ್ತಾಡೋದನ್ನು ಬಿಡಿ, ಇಲ್ಲಿದ್ದನ್ನು ಅಲ್ಲಿ, ಅಲ್ಲಿದ್ದನ್ನು ಇಲ್ಲಿ ಹೇಳುವುದನ್ನು ಬಿಡಿʼʼ ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಈ ಮೂಲಕ ಒಬ್ಬರ ವಿಷಯವನ್ನು ಇನ್ನೊಬ್ಬರ ಬಳಿ ಹೇಳಿ ಜಗಳಕ್ಕೆ ಕಾರಣವಾಗುವ ಚಾಳಿಯನ್ನು ಬಿಡಬೇಕು, ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದಿದ್ದಾರೆ.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ (Rajeev Gandhi) ಅವರ ಪುಣ್ಯತಿಥಿ ಸಂದರ್ಭದಲ್ಲಿ ಕೆಪಿಸಿಸಿ ಕಚೇರಿಯ ಇಂದಿರಾ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯ, ಸಚಿವರಾದ ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಚಂದ್ರಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ಭಾಗವಹಿಸಿದ್ದರು. ಗಣ್ಯರು ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ತ್ಯಾಗವನ್ನು ನಾವು ನೆನಪಿಟ್ಟುಕೊಳ್ಳಬೇಕು, ಗಾಂಧಿ ಕುಟುಂಬದ ತ್ಯಾಗವನ್ನು ನಾವು ಯಾವತ್ತೂ ಮರೆಯುವ ಹಾಗಿಲ್ಲ. ಅಂಥ ತ್ಯಾಗವನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಹೇಳಿದರು ಡಿ.ಕೆ. ಶಿವಕುಮಾರ್‌.

ʻʻನನ್ನ ಮತ್ತು ಸಿದ್ದರಾಮಯ್ಯ ಅವರನ್ನು ಕೂರಿಸಿ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ನಮಗೆ ಖರ್ಗೆ ಮತ್ತು ಗಾಂಧಿ ಕುಟುಂಬದವರು ಏನು ಹೇಳಿದ್ದಾರೋ ಅದೇ ವೇದ ವಾಕ್ಯ. ಇಲ್ಲಿ ವ್ಯಕ್ತಿಗಿಂತಲೂ ಪಕ್ಷ ಮುಖ್ಯ. ನಾವು ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಬೇಕುʼʼ ಎಂದು ಶಿವಕುಮಾರ್‌ ನುಡಿದರು.

ಅಧಿಕಾರಕ್ಕಾಗಿ ಸಿದ್ದರಾಮಯ್ಯ ಮತ್ತು ತಮ್ಮ ಮನೆಗೆ ಓಡಾಡುವುದನ್ನು ಬಿಡಿ ಎಂದ ಅವರು, ʻʻತಾಳ್ಮೆಯಿಂದ ಇರಿ.. ಎಲ್ಲರಿಗೂ ಅಧಿಕಾರ ಸಿಗುತ್ತದೆʼʼ ಎಂದರು. ನಮಗೆಲ್ಲರಿಗೂ ಈಗ 2024ರ ಚುನಾವಣೆಯೇ ಮುಖ್ಯ. ಈಗ ಅಧಿಕಾರದ ವಿಚಾರ ಬಿಡಿ, ಮೊದಲು ಬೂತ್‌ ಗಟ್ಟಿ ಮಾಡಿʼʼ ಎಂದು ಕಿವಿ ಮಾತು ಹೇಳಿದರು.

ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಹೇಳೋದನ್ನು ನಿಲ್ಲಿಸಿ. ನಾನು ಯಾರ ಮಾತುಗಳನ್ನೂ ಕಿವಿಗೆ ಹಾಕಿಕೊಳ್ಳುವುದಿಲ್ಲ. 35 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇನೆ. ಯಾರು ಯಾವುದನ್ನು ಯಾಕೆ ಹೇಳುತ್ತಾರೆ ಎಂದು ನನಗೆ ಗೊತ್ತಾಗುತ್ತದೆʼʼ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ನಮಗೆ ಅಧಿಕಾರ ಮುಖ್ಯವಲ್ಲ

ʻʻನನಗೆ ಮತ್ತು ಸಿದ್ದರಾಮಯ್ಯ ಅವರಿಗೆ ಅಧಿಕಾರ ಮುಖ್ಯವಲ್ಲ. ಜನರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಚಾಮುಂಡೇಶ್ವರಿ ತಾಯಿಯ ಮುಂದೆ ಶಕ್ತಿ ಕೊಡಿ ಎಂದು ಬೇಡಿದ್ದೇವೆ. ಒಳ್ಳೆಯ ಸಮಯದಲ್ಲಿ ಸರ್ಕಾರ ರಚನೆ ಆಗಿದೆ. ಚುನಾವಣೆಗೆ ಮುನ್ನ ನೀಡಿದ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಷರತ್ತುಗಳನ್ನು ಮುಂದಿನ ಕ್ಯಾಬಿನೆಟ್ ವೇಳೆಗೆ ನಿರ್ಧಾರ ಮಾಡುತ್ತೇವೆʼʼ ಎಂದು ಹೇಳಿದರು.

ʻʻನಮ್ಮ ಮತ್ತು ಗಾಂಧಿ ಕುಟುಂಬದ ಸಂಬಂಧ ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧʼʼ ಎಂದು ಹೇಳಿದ ಅವರು, ರಾಜೀವ್‌ ಗಾಂಧಿ ಅವರು ಪ್ರಾಣ ಕಳೆದುಕೊಂಡ ಚೆನ್ನೈನ ಶ್ರೀಪೆರಂಬದೂರಿನ ಜಾಗದಲ್ಲಿ ನಡೆಯುವ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ. ಸುಮಾರು 20 ವರ್ಷ ಹೋಗಿದ್ದೇನೆ. ಅವರು ಮೃತಪಟ್ಟ ಸ್ಥಳದಲ್ಲಿ ಈಗಲೂ ಡಿಕೆ ಸುರೇಶ್ ಅವರ ಕಲ್ಲು ಕ್ವಾರಿ ಇದೆʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್‌.

ಇದನ್ನೂ ಓದಿ : Karnataka CM: ಸಿದ್ದರಾಮಯ್ಯ ಪಟ್ಟಾಭಿಷೇಕ ವೈಭವ ಹೇಗಿತ್ತು? ಚಿತ್ರಗಳಲ್ಲಿ ನೋಡಿ

Exit mobile version