ಶಿವಮೊಗ್ಗ: ಕರ್ನಾಟಕದ ಹೆಮ್ಮೆಯ ಕೈಗಾರಿಕೆ, ಭದ್ರಾವತಿಯ ವಿಐಎಸ್ಎಲ್ ಮುಚ್ಚುವ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕೈಗಾರಿಕೆಯನ್ನು ಮುಚ್ಚದಂತೆ ಮನವಿ ಮಾಡಿದ್ದಾರೆ.
ಇದು ದೇಶದ ಅತ್ಯುತ್ತಮ ಸಾರ್ವಜನಿಕ ಉದ್ದಿಮೆಗಳಲ್ಲಿ ಒಂದಾಗಿತ್ತು. ಕೆಲವು ಕೋಟಿ ರೂಪಾಯಿ ಬಂಡವಾಳ ಒದಗಿಸಿದರೆ ಸಂಸ್ಥೆಯನ್ನು ಮತ್ತೆ ಲಾಭದ ಹಳಿಗೆ ತರಬಹುದು. ‘ಆತ್ಮನಿರ್ಭರ ಭಾರತ’ ಯೋಜನೆಯಡಿ ಇದರ ಪುನಶ್ಚೇತನಕ್ಕೆ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ | H D Devegowda : ಚಾಮುಂಡಿ ಬೆಟ್ಟದಲ್ಲಿ ಚಂಡಿಕಾ ಹೋಮ ನೆರವೇರಿಸಿದ ಎಚ್.ಡಿ.ದೇವೇಗೌಡ ದಂಪತಿ
1918ರಲ್ಲಿ ಆರಂಭವಾದ ವಿಐಎಸ್ಎಲ್ ಅನ್ನು ನಾನು ಪ್ರಧಾನಿಯಾಗಿದ್ದ ಅವಧಿಯಲ್ಲಿ 1996ರಲ್ಲಿ ಭಾರತೀಯ ಉಕ್ಕು ಪ್ರಾಧಿಕಾರದ ವ್ಯಾಪ್ತಿಗೆ ತರಲಾಗಿತ್ತು. ಪ್ರಾಧಿಕಾರವು ₹ 650 ಕೋಟಿ ವೆಚ್ಚದಲ್ಲಿ ಕಾರ್ಖಾನೆಯನ್ನು ಆಧುನೀಕರಣಗೊಳಿಸಲು ಪ್ರಸ್ತಾವ ಸಿದ್ಧಪಡಿಸಿತ್ತು. ಆದರೆ, ಅದು ಸಾಕಾರಗೊಳ್ಳಲಿಲ್ಲ. 2016ರಲ್ಲಿ ನೀತಿ ಆಯೋಗವು ಹೂಡಿಕೆ ಹಿಂತೆಗೆತಕ್ಕೆ ಶಿಫಾರಸು ಮಾಡಿತ್ತು. ಆದರೆ, ಅದು ಕೂಡ ಸಫಲವಾಗಲಿಲ್ಲ. ಇದರಿಂದಾಗಿ ಕಾರ್ಖಾನೆಯು ಸಂಕಷ್ಟಕ್ಕೆ ಸಿಲುಕಿದೆ. ವಿಐಎಸ್ಎಲ್ ಅತ್ಯುತ್ತಮ ಗುಣಮಟ್ಟದ ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿದೆ. ಈ ಹಿಂದೆ ಇದೇ ಕಾರ್ಖಾನೆಯು ಅಣುಶಕ್ತಿ ಕೇಂದ್ರಗಳು, ರೈಲ್ವೆ ಇಲಾಖೆ, ಆಟೊಮೊಬೈಲ್ ಕ್ಷೇತ್ರಕ್ಕೆ ಗುಣಮಟ್ಟದ ಉಕ್ಕಿನ ಉತ್ಪನ್ನಗಳನ್ನು ಒದಗಿಸುತ್ತಿತ್ತು. ಈಗ 20,000 ಕುಟುಂಬಗಳು ಕಾರ್ಖಾನೆಯನ್ನು ಅವಲಂಬಿಸಿವೆ. ಮುಚ್ಚುವ ನಿರ್ಧಾರ ಕೈಗೊಂಡಿರುವುದರಿಂದ ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ವಿಐಎಸ್ಎಲ್ ಅನ್ನು ಪುನಶ್ಚೇತನಗೊಳಿಸಿದರೆ ರಕ್ಷಣಾ ಇಲಾಖೆ, ಅಣುಶಕ್ತಿ ಉತ್ಪಾದನಾ ಘಟಕಗಳು, ಆಟೊಮೊಬೈಲ್ ಕ್ಷೇತ್ರ ಹಾಗೂ ರೈಲ್ವೆ ಇಲಾಖೆಗಳಿಗೆ ಪೂರಕವಾಗಿ ಬಳಸಿಕೊಳ್ಳಬಹುದು ಎಂದು ಸಲಹೆ
ನೀಡಿದ್ದಾರೆ.
ಇದನ್ನೂ ಓದಿ | VISL Bhadravati | ವಿಶ್ವೇಶ್ವರಯ್ಯ , ನಾಲ್ವಡಿ ಒಡೆಯರ್ ಸ್ಥಾಪಿಸಿದ್ದ ವಿಐಎಸ್ಎಲ್‌ಗೆ ಕೊನೆಯ ಮೊಳೆ