Site icon Vistara News

Cylinder Blast | ಎರಡು ಗ್ಯಾಸ್‌ ಸಿಲಿಂಡರ್‌ ಸ್ಫೋಟ: ಮನೆ ಜಖಂ, ಮೂವರು ಕೂದಲೆಳೆ ಅಂತರದಲ್ಲಿ ಪಾರು

Hassana blast

ಹಾಸನ: ವಾಸದ ಮನೆಯ ಹೊರಗೆ ಮತ್ತು ಒಳಗೆ ಇದ್ದ ಎರಡು ಗ್ಯಾಸ್‌ ಸಿಲಿಂಡರ್‌ಗಳು ಕೆಲವೇ ನಿಮಿಷಗಳ ಅಂತರದಲ್ಲಿ ಸ್ಫೋಟಗೊಂಡು (Cylinder Blast) ಮನೆ ಸಂಪೂರ್ಣ ಜಖಂಗೊಂಡಿರುವ ಭಯಾನಕ ಘಟನೆ ಬೇಲೂರು ತಾಲೂಕಿನಲ್ಲಿ ನಡೆದಿದೆ. ಮನೆಯಲ್ಲಿ ಮೂವರು ವಾಸವಾಗಿದ್ದು ಅದೃಷ್ಟವಶಾತ್‌ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ, ನಾಗೇನಹಳ್ಳಿ ಗ್ರಾಮದಲ್ಲಿ ತಡರಾತ್ರಿ ೨.೪೫ರ ಹೊತ್ತಿಗೆ ಈ ದುರ್ಘಟನೆ ನಡೆದಿದೆ. ಶೇಖ್ ಅಲಿ ಎಂಬುವವರ ಮನೆಯಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಸಿಲಿಂಡರ್‌ಗಳು ಸ್ಫೋಟಗೊಂಡಿವೆ.

ಏನಾಯಿತು?
ರಾತ್ರಿ 2.45ರ ಮನೆಯವರೆಲ್ಲ ಮಲಗಿದ್ದರು. ಆಗ ಮನೆಯ ಹೊರಗಿದ್ದ ಗ್ಯಾಸ್ ಸಿಲಿಂಡರ್‌ನಲ್ಲಿ ಲೀಕ್ ಆಗಿ ಸ್ಫೋಟ ಸಂಭವಿಸಿತು. ಮನೆಯ ಹೊರಗಡೆ ಏನೋ ಆಯಿತು. ರಾತ್ರಿ ಅಲ್ವಾ ಹೊರಗೆ ಹೋಗುವುದು ಬೇಡ ಎಂದು ಶೇಖ್‌ ಅಲಿ ಅವರ ಮಗಳು, ಅಳಿಯ ಹಾಗೂ ಮಗು ಸುಮ್ಮನೆ ಮಲಗಿದರು. ಆದರೆ, ಕೇವಲ‌ ಹತ್ತೆ ನಿಮಿಷದಲ್ಲಿ ಮನೆಯ ಒಳಗಿದ್ದ ಅಡಿಷನಲ್ ಗ್ಯಾಸ್ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆ ಶುರುವಾಯಿತು.

ಗ್ಯಾಸ್ ವಾಸನೆಗೆ ಎಚ್ಚೆತ್ತ ದಂಪತಿ ಮನೆಯಿಂದ ಹೊರಗೆ ಓಡಿ ಬಂದರು. ಅವರು ಹೊರಗೆ ಓಡಿ ಬರುತ್ತಿದ್ದಂತೆಯೇ ಮನೆಯ ಒಳಗಿದ್ದ ಸಿಲಿಂಡರ್‌ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ಮನೆಯಲ್ಲಿದ್ದ ವಸ್ತುಗಳಿಗೆ ಸಂಪೂರ್ಣ ಹಾನಿಯಾಗಿದೆ. ಆಗ ಆಸುಪಾಸಿನ ಮನೆಯವರೆಲ್ಲ ಓಡಿಬಂದರು.

ಬೆಂಕಿ ಅಕ್ಕಪಕ್ಕದ ಮನೆಗೆ ವ್ಯಾಪಿಸದಂತೆ ನೀರು, ಮರಳು ಎರಚಿ ಬೆಂಕಿ ನಂದಿಸಲಾಯಿತು. ಗ್ರಾ.ಪಂ. ಸದಸ್ಯ ಹರೀಶ್ ಹಾಗೂ ಸ್ನೇಹಿತರು ಈ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದರು. ನಂತರ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದರು. ಅಗ್ನಿಶಾಮಕ ದಳ ಆಗಮಿಸುವಷ್ಟರಲ್ಲಿ ಗ್ರಾಮಸ್ಥರೇ ಬೆಂಕಿ ಆರಿಸಿದ್ದರು.

ಮನೆಯ ಹೊರಗಿನಿಂದ ಗ್ಯಾಸ್‌ ಕನೆಕ್ಷನ್‌
ಅನಿಲ ಸುರಕ್ಷತೆಯ ಬಗ್ಗೆ ಸಂಪೂರ್ಣ ಅರಿವಿದ್ದ ಈ ಕುಟುಂಬ ಹೊರಗಿನಿಂದಲೇ ಅಡುಗೆ ಅನಿಲ ಸಂಪರ್ಕ ಮಾಡಿತ್ತು. ಆದರೂ ಈ ದುರಂತ ಸಂಭವಿಸಿದೆ. ಮನೆಯ ಹೊರಗಿನ ಮಾತ್ರವಲ್ಲ ಒಳಗಿನ ಸಿಲಿಂಡರ್‌ ಕೂಡಾ ಸ್ಫೋಟಗೊಂಡಿದೆ.

ಸ್ಫೋಟದ ರಭಸಕ್ಕೆ ಮನೆಯ ಗೋಡೆ ಕುಸಿದಿದ್ದು ಹೆಂಚುಗಳು ಹಾರಿಹೋಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Cylinder blast | ಮೈಸೂರಿನ ಅಗ್ನಿಶಾಮಕ ವಸತಿಗೃಹದಲ್ಲೇ ಸಿಲಿಂಡರ್‌ ಸ್ಫೋಟ: 10 ಮಂದಿಗೆ ಗಾಯ

Exit mobile version