Site icon Vistara News

Illicit Relationship : ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ, ಪುರುಷನ ಶವ ಕೆರೆಯಲ್ಲಿ ಪತ್ತೆ; ಅವನು ಆಗಷ್ಟೇ ಜೈಲಿನಿಂದ ಬಂದಿದ್ದ!

Shira dead body

ಶಿರಾ (ತುಮಕೂರು ಜಿಲ್ಲೆ): ಶಿರಾ (Tumkur News) ನಗರದ ಚಿಕ್ಕಕೆರೆಯ ಹಿಂಭಾಗದಲ್ಲಿರುವ ಬಾವಿಯೊಂದರಲ್ಲಿ ಒಬ್ಬ ಪುರುಷ ಮತ್ತು ಮಹಿಳೆಯ ಶವ ಪತ್ತೆಯಾಗಿದೆ (dead body found). ಶಿರಾ ನಗರದ ಚಿಕ್ಕಕೆರೆ ಹಿಂಭಾಗದಲ್ಲಿ ಬರುವ ಬೋಪ್ಪಾಜ್ಜ ಅವರಿಗೆ ಸೇರಿದ ಬಾವಿಯಲ್ಲಿ ಈ ಶವಗಳು ಪತ್ತೆಯಾಗಿವೆ. ಈ ಸಾವಿಗೆ ಸಂಬಂಧಿಸಿ ಹಲವಾರು ಕಥೆಗಳು (Illicit Relationship) ಕೇಳಿಬರುತ್ತಿವೆ.

ಶವವಾಗಿ ಪತ್ತೆಯಾದವರನ್ನು ತುಮಕೂರಿನ ಟಿಪ್ಪು ನಗರದ ನಿವಾಸಿಯಾಗಿರುವ ಅಮ್ಜದ್‌ ಪಾಷಾ (42) ಮತ್ತು ವುರಸ್‌ ಕಾಲೊನಿ ನಿವಾಸಿ ಹಾಜಿರಾಬಿ (40) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕಳೆದ 13 ವರ್ಷಗಳಿಂದ ಅಕ್ರಮ ಸಂಬಂಧದಲ್ಲಿದ್ದರು ಎನ್ನುವುದನ್ನು ಸ್ಥಳೀಯರು ಮತ್ತು ಮನೆಯವರು ಒಪ್ಪಿಕೊಳ್ಳುತ್ತಾರೆ. ಇದೀಗ ಅವರು ಶವವಾಗಿದ್ದೇಕೆ ಎಂಬ ಪ್ರಶ್ನೆ ಎದುರಾಗಿದೆ.

ಗುರುವಾರ ಸಂಜೆ 3 ಗಂಟೆಗೆ ಹಾಜಿರಾಬಿ ಮತ್ತು ಅಮ್ಜದ್‌ ಜತೆಯಾಗಿ ಶಿರಾ ನಗರಕ್ಕೆ ಹೋಗಿದ್ದು ಬಳಿಕ ಮನೆಗೆ ಬಂದಿರಲಿಲ್ಲ. ಗುರುವಾರ ರಾತ್ರಿ 8.45ರ ಸುಮಾರಿಗೆ ದಾರಿಯಲ್ಲಿ ಹೋಗುತ್ತಿದ್ದವರು ಬಾವಿಯಲ್ಲಿ ಶವ ಇರುವುದನ್ನು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ರಾತ್ರಿಯೇ ಶವಗಳನ್ನು ಮೇಲೆತ್ತಲಾಗಿದೆ. ಘಟನೆಯ ಬಗ್ಗೆ ಹಲವು ಅನುಮಾನಗಳಿದ್ದು ಘಟನಾ ಸ್ಥಳಕ್ಕೆ ಶಿರಾ ನಗರ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಾಜಿರಾಬಿಗೆ ಆರು ಜನ ಮಕ್ಕಳು

ಈಗ 40 ವರ್ಷದ ಹಾಜಿರಾಬಿಗೆ ಚಾಂದ್‌ ಪಾಷಾ ಎಂಬಾತನ ಜತೆ ಮದುವೆಯಾಗಿ ಆರು ಮಕ್ಕಳಿದ್ದಾರೆ. ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳು. ಎರಡನೇ ಮಗ ಈಗ ತನ್ನ ತಾಯಿಯ ಸಾವಿನ ಬಗ್ಗೆ ದೂರು ನೀಡಿದ್ದು, ಅವನಿಗೆ 24 ವರ್ಷ.

ಹಾಜಿರಾಬಿಗೆ ಮದುವೆಯಾಗಿ ಅದೆಷ್ಟೋ ವರ್ಷಗಳ ನಂತರ ಟಿಪ್ಪು ನಗರದ ಅಮ್ಜದ್‌ ಪಾಷಾನ ಪರಿಚಯವಾಗಿ ಅದು ಸ್ನೇಹಕ್ಕೆ ತಿರುಗುತ್ತದೆ. ಅಮ್ಜದ್‌ ಪಾಷಾನಿಗೂ ಆಗಲೇ ಮದುವೆಯಾಗಿ ಮಕ್ಕಳಿದ್ದಾರೆ. 2010-11ರಿಂದಲೇ ಅವರಿಬ್ಬರು ಪರಿಚಿತರಾಗಿದ್ದು ಅಮ್ಜದ್‌ ಪಾಷಾ ಯಾವಾಗಲೂ ಮನೆಗೆ ಬರುತ್ತಿದ್ದ. ಅವರಿಬ್ಬರ ಅಕ್ರಮ ಸಂಬಂಧವನ್ನು ಊರಿನವರು ಮತ್ತು ಮನೆಯವರು ಕೂಡಾ ಒಪ್ಪಿಕೊಂಡಿದ್ದರು. ಹಾಜಿರಾಬಿಯ ಗಂಡ ಚಾಂದ್‌ ಪಾಷಾನಿಗೆ ಈ ವಿಚಾರದಲ್ಲಿ ಅಕ್ರೋಶವಿತ್ತಾದರೂ ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ನಡುವೆ ನಾಲ್ಕು ವರ್ಷದ ಹಿಂದಿನಿಂದ ಆತ ಮನೆಗೆ ಬರುವುದನ್ನೇ ಬಿಟ್ಟಿದ್ದ.

ಹಾಜಿರಾಬಿ ಮಗಳ ಮೇಲೇ ಕಣ್ಣು ಹಾಕಿದ್ದ ಅಮ್ಜದ್‌ ಪಾಷಾ

ಇದು ಒಂದು ಕಥೆಯಾದರೆ ಇದೇ ಪ್ರಕರಣದಲ್ಲಿ ಇನ್ನೊಂದು ಟ್ವಿಸ್ಟ್‌ ಇದೆ. ಅಮ್ಜದ್‌ ಪಾಷಾ ತಾಯಿ ಹಾಜಿರಾಬಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದಲ್ಲದೆ, ಆಕೆಯ ದೊಡ್ಡ ಮಗಳ ಮೇಲೂ ಕಣ್ಣು ಹಾಕಿದ್ದ. ಅದೊಂದು ದಿನ ಆಕೆಯ ಮೇಲೆ ಆತ ಲೈಂಗಿಕ ದೌರ್ಜನ್ಯ ನಡೆಸಿದ್ದನ್ನು ನೋಡಿದ ಹಾಜಿರಾಬಿ ಸಿಟ್ಟಿಗೆದ್ದಿದ್ದಳು.

ಈ ಘಟನೆ ನಡೆದಿದ್ದು 2014ರಲ್ಲಿ. ಆಗಿನ್ನೂ ಆ ಬಾಲಕಿಗೆ 16 ವರ್ಷವೂ ಆಗಿರಲಿಲ್ಲ. ಸಿಟ್ಟಿಗೆದ್ದ ಹಾಜಿರಾಬಿ ಅಮ್ಜದ್‌ ಪಾಷಾನ ಮೇಲೆ ದೂರು ನೀಡಿದ್ದಳು. ಪೋಕ್ಸೋ ಪ್ರಕರಣವಾಗಿದ್ದರಿಂದ ಅಮ್ಜದ್‌ ಪಾಷಾನಿಗೆ ಕಠಿಣ ಶಿಕ್ಷೆಯಾಗಿ ಆತ ಪರಪ್ಪನ ಅಗ್ರಹಾರ ಜೈಲು ಸೇರಿದ್ದ.

ಇದನ್ನೂ ಓದಿ: Illicit Relationship : ಈ ಪೋಲೀಸಪ್ಪನಿಗೆ ಅಕ್ರಮ ಸಂಬಂಧ ಒಂದಲ್ಲ, ಎರಡಲ್ಲ!; ಪತ್ನಿ ದೂರಿಗೆ ಇನ್ನೊಬ್ಬಳ ಬೆಂಬಲ!

ಏಳು ದಿನದ ಹಿಂದಷ್ಟೇ ಜೈಲಿನಿಂದ ಬಂದಿದ್ದ

ಇತ್ತ ಅಮ್ಜದ್‌ ಪಾಷಾ ಜೈಲಿಗೆ ಹೋದ ಮೇಲೆ ಹಾಜಿರಾಬಿಯ ಜೀವನ ಒಂದು ರೀತಿಯಲ್ಲಿ ಸಾಗುತ್ತಿತ್ತು. 2018ರ ಹೊತ್ತಿಗೆ ಗಂಡ ಚಾಂದ್‌ ಪಾಷಾ ಆಕೆಯನ್ನು, ಮಕ್ಕಳನ್ನು ಬಿಟ್ಟು ಹೋಗಿದ್ದ. ಇತ್ತ ಮಕ್ಕಳು ಸ್ವಲ್ಪ ದೊಡ್ಡದಾಗಿದ್ದರಿಂದ ಸಂಸಾರ ಹೇಗೋ ನಡೆಯುತ್ತಿತ್ತು. ಆದರೆ, ಹೆಣ್ಮಕ್ಕಳ ಮದುವೆ ವಿಚಾರದಲ್ಲಿ ಹಾಜಿರಾಬಿ ತಲೆ ಕೆಡಿಸಿಕೊಂಡಿದ್ದರು.

ಇತ್ತ ಪರಪ್ಪನ ಅಗ್ರಹಾರದಲ್ಲಿದ್ದ ಅಮ್ಜದ್‌ ಪಾಷಾ ಏಳು ದಿನಗಳ ಹಿಂದೆ ಪೆರೋಲ್‌ ಮೇಲೆ ಬಂದಿದ್ದ. ಹಾಗೆ ಬಂದವನೇ ಅಲ್ಲಿ ಇಲ್ಲಿ ತಿರುಗಾಡುತ್ತಿದ್ದ. ಗುರುವಾರ ಮಧ್ಯಾಹ್ನದ ಹೊತ್ತಿಗೆ ಆತ ಹಾಜಿರಾಬಿಯ ಮನೆಗೆ ಬಂದಿದ್ದಾನೆ. ಬಳಿಕ ಮೂರು ಗಂಟೆಯ ಹೊತ್ತಿಗೆ ಆಕೆಯನ್ನೂ ಕರೆದುಕೊಂಡು ಶಿರಾ ಪೇಟೆಗೆ ಬಂದಿದ್ದಾನೆ.

ನಂತರ ಅವರಿಬ್ಬರು ಪತ್ತೆಯಾಗಿದ್ದು ಬಾವಿಯಲ್ಲಿ ಶವವಾಗಿ. ಈ ವಿಷಯವನ್ನು ಹಾಜಿರಾಬಿಯ ಮಗನಿಗೆ ತಿಳಿಸಿದ್ದು ಅಮ್ಜದ್‌ ಪಾಷಾನ ಮಗನೇ. ನಿನ್ನ ತಾಯಿ ಮತ್ತು ನನ್ನ ತಂದೆಯ ಶವ ಬಾವಿಯಲ್ಲಿದೆ ಎಂದು ಆತ ಹೇಳಿದ್ದ.

ಇದೀಗ ಸಾವಿನ ಹಿಂದೆ ಹಲವು ಸಂಶಯಗಳು ಕಾಡಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Exit mobile version