ಮಂಗಳೂರು: ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೊಸ ವ್ಯಾಖ್ಯಾನವೊಂದನ್ನು ನೀಡಿದ್ದಾರೆ. ಇವರದ್ದು ಡಬಲ್ ಎಂಜಿನ್ ಸರ್ಕಾರ, ಸಿಂಗಲ್ ಎಂಜಿನ್ ಅಂದರೆ 40 ಪರ್ಸೆಂಟ್ ಕಮಿಷನ್ ಸರ್ಕಾರವಾಗಿದ್ದು, ಡಬಲ್ ಎಂಜಿನ್ ಅಂದರೆ 80 ಪರ್ಸೆಂಟ್ ಸರ್ಕಾರವಾಗಿದೆ. ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಸಂಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಅನ್ನು ಗೆಲ್ಲಿಸಬೇಕು ಎಂದು ಕೋರಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಮಗೆ 150 ಸ್ಥಾನವನ್ನು ಗೆಲ್ಲಿಸಿ ಕೊಡಿ, ಒಂದೆರಡು ಕಳ್ಳತನ ಆದರೂ ನಾವು ಉಳಿಯಬೇಕು. ಈಗ ಪ್ರಜಾಪ್ರಭುತ್ವದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಬೇರೆ ಬೇರೆ ರಾಜ್ಯದಲ್ಲಿ ನಮ್ಮವರ ಕಳ್ಳತನ ಆಗಿದೆ. ಇ.ಡಿ., ಐಟಿ ಎಲ್ಲವೂ ಅವರ ಕೈಯಲ್ಲಿದೆ. ಹಾಗಾಗಿ ಕಳ್ಳತನ ಆಗುತ್ತಲಿದೆ. ಬಿಜೆಪಿಯವರೇ ಎಲ್ಲ ಕಡೆ ಎಟಿಎಂ ಇಟ್ಟಿದ್ದಾರೆ. ದುಡ್ಡಿನ ಮೇಲೆ ಬಿಜೆಪಿ ಚುನಾವಣೆಯನ್ನು ನಡೆಸುತ್ತಾ ಇದೆ. ಮನಿ ಮತ್ತು ಮಸಲ್ ಪವರ್ ಬಳಸುತ್ತಾ ಇದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Yogi Adityanath: ‘ಸಿಎಂ ಯೋಗಿಯನ್ನು ಶೀಘ್ರವೇ ಕೊಲ್ಲುತ್ತೇನೆ’; ಯುಪಿ ಮುಖ್ಯಮಂತ್ರಿಗೆ ಮತ್ತೆ ಜೀವ ಬೆದರಿಕೆ
ಈ ಬಾರಿಯ ವಿಧಾನಸಭಾ ಚುನಾವಣೆ ಸಂಬಂಧ ಕಾಂಗ್ರೆಸ್‌ನಿಂದ 185 ಕ್ಷೇತ್ರಗಳಿಗೆ ನಾವು ಮೊದಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೆವು. ಕೆಲವು ಕಡೆ ನಾಯಕರ, ಆಕಾಂಕ್ಷಿಗಳ ಬೇಡಿಕೆ ಹೆಚ್ಚಾಗಿದ್ದರಿಂದ ವಿಳಂಬವಾಯಿತು ಎಂದು ಹೇಳಿದರು.
ಗಳಗಳನೆ ಅತ್ತಿದ್ದ ಯೋಗಿ ಆದಿತ್ಯನಾಥ್
ರಾಜ್ಯದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಖರ್ಗೆ, ನನಗೆ ಯಾವ ಸ್ವಾಮಿಗಳಿಗೆ ಎಷ್ಟು ಪ್ರಭಾವ ಇದೆ ಅಂತ ಗೊತ್ತಿಲ್ಲ. ಯೋಗಿ ಆದಿತ್ಯನಾಥ್ ನಮ್ಮ ಜತೆ ಸಂಸತ್ತಿನಲ್ಲಿ ಇದ್ದರು. ಆಗ ಅವರು ಜೋರಾಗಿ ಅತ್ತರು. ನಾವು ಅವರಿಗೆ ಸಮಾಧಾನ ಮಾಡಿದೆವು. ಇದೆಲ್ಲ ಬಿಟ್ಟು ಒಬ್ಬ ಸ್ವಾಮೀಜಿಯಾಗಿ ಸಮಾಜ ಸೇವೆ ಮಾಡಿ ಅಂದಿದ್ದೆವು ಎಂದು ಪ್ರತಿಕ್ರಿಯೆ ನೀಡಿದರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ತಮಗೆ ದೊರೆಯಬೇಕಿದ್ದ ಟಿಕೆಟ್ ಮಾರಾಟವಾಗಿದೆ ಎಂದು ಆರೋಪ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಖರ್ಗೆ, ಸೀಟ್ ಸಿಗದೆ ಇದ್ದವರೆಲ್ಲರೂ ಈಗ ಆರೋಪ ಮಾಡುತ್ತಾರೆ. ಅದಕ್ಕೆಲ್ಲ ಈಗ ಪ್ರತಿಕ್ರಿಯೆ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Karnataka Election : ಶೆಟ್ಟರ್ ಕೋ ಕಭೀ ಮಾಫ್ ನಹೀ ಕರನಾ: ಅಮಿತ್ ಶಾ ಕಠಿಣ ಸಂದೇಶ
ಬೆಂಗಳೂರಿನಿಂದ ವಾರಣಾಸಿಗೆ ಈಚೆಗೆ ಒಂದು ರೈಲನ್ನು ಬಿಟ್ಟರು. ನಾನು ರೈಲ್ವೇ ಸಚಿವನಾಗಿದ್ದಾಗ 30ಕ್ಕೂ ಅಧಿಕ ರೈಲನ್ನು ನಿಯೋಜಿಸಿದ್ದೆ. ಇವರು ಈಗ ಒಂದು ರೈಲನ್ನು ಬಿಟ್ಟು ಅದನ್ನೇ ಸುದ್ದಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.