ಗದಗ: ರಾತ್ರಿ ಚಿಕನ್ ಊಟ ಮಾಡಿ ಮನೆ ಮೇಲೆ ಹಾಯಾಗಿ ಮಲಗಿದ್ದ ಇಬ್ಬರು ಯುವಕರನ್ನು ಅವರೊಂದಿಗಿದ್ದ ಮನೆಕೆಲಸದವನೇ ದೊಣ್ಣೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೆರಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಡಬಲ್ ಮರ್ಡರ್‌ನಿಂದ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ.
ಕೆರಳ್ಳಿಯ ಮಹಾಂತೇಶ ಮಾಚೇನಹಳ್ಳಿ(28) ಹಾಗೂ ಫಕೀರೇಶ ಛಬ್ಬಿ(17) ಮೃತರು. ಕೆರಳ್ಳಿ ಪಕ್ಕದ ಅಲಗಿಲವಾಡ ಗ್ರಾಮದ ಮಂಜುನಾಥ ದೇಸಳ್ಳಿ ಕೊಲೆ ಆರೋಪಿ. ಆರೋಪಿ ಮಂಜುನಾಥ, ಮಹಾಂತೇಶ ಅವರ ಕುಟುಂಬದಲ್ಲಿ ಈ ಹಿಂದೆ ಕುರಿಗಾಹಿಯಾಗಿ ಕೂಲಿ ಕೆಲಸ ಮಾಡಿದ್ದ. ವಿಪರೀತ ಕುಡಿತದ ಚಟ ಬೆಳೆಸಿಕೊಂಡಿದ್ದರಿಂದ ಆತನನ್ನು ಮಾಲೀಕರು ಕೆಲಸದಿಂದ ಬಿಡಿಸಿದ್ದರು. ಆದರೆ ಆರೋಪಿ ಮುಂಗಡ ಹೆಚ್ಚಿನ ಹಣ ಪಡೆದಿದ್ದ. ಈ ಹಣ ಕೊಡು ಇಲ್ಲವೆ ಅದು ತೀರುವವರೆಗೆ ಕೆಲಸ ಮಾಡು ಎಂದು ಮಾಲೀಕರು ತಾಕೀತು ಮಾಡಿದ್ದರು. ಹೀಗಾಗಿ ಮಂಜುನಾಥ ಮತ್ತೆ ಕೆಲಸ ಮಾಡುವುದಾಗಿ ತಪ್ಪೊಪ್ಪಿಕೊಂಡು ಬಂದಿದ್ದ.
ಗುರುವಾರ ರಾತ್ರಿ ಊಟ ಮಾಡಿ ಮಾಲೀಕನ ಪುತ್ರ ಮಹಾಂತೇಶ್, ಸ್ನೇಹಿತ ಫಕೀರೇಶ್ ಹಾಗೂ ಆರೋಪಿ ಮಂಜುನಾಥ ಮೂವರೂ ಮನೆಯ ಮೇಲೆ ಮಲಗಿದ್ದರು. ಶುಕ್ರವಾರ ಬೆಳಗಿನ ಜಾವ ಏಕಾಏಕಿ ಮಹಾಂತೇಶ್ ಹಾಗೂ ಫಕೀರೇಶ್‌ನಿಗೆ ಆರೋಪಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ವಿಕೃತಿ ಮೆರೆದಿದ್ದಾನೆ.
ಕೊಲೆ ಮಾಡಿ ಊರಿಗೆಲ್ಲಾ ಕೂಗಿ ಹೇಳಿದ ಆರೋಪಿ
ಮೊದಲು ಮಹಾಂತೇಶ್ ತಲೆಗೆ ಆರೋಪಿ ಮಂಜುನಾಥ್ ಹೊಡೆದಿದ್ದಾನೆ. ಈ ವೇಳೆ ಫಕೀರೇಶ್ ಎದ್ದಿದ್ದಾನೆ. ಅವನಿಗೂ ಅದೇ ದೊಣ್ಣೆಯಿಂದ ಮಂಜುನಾಥ್ ಹೊಡೆದಿದ್ದರಿಂದ ಇಬ್ಬರೂ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕೊಲೆ ಮಾಡಿ ಊರಿನ ಮಂದಿಗೆಲ್ಲಾ ಕೂಗಿ ಕೂಗಿ ಹೇಳಿದ್ದಾನೆ. ನಾನು ಈಗಾಗಲೇ ಇಬ್ಬರ ಕೊಲೆ ಮಾಡಿದ್ದೇನೆ. ಇಲ್ಲಿ ಯಾರಾದರೂ ಬಂದರೆ ಅವರ ಹೆಣವನ್ನೂ ಉರುಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಸ್ಥಳಿಯರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ನಂತರ ಆರೋಪಿಯನ್ನು ಹಿಡಿದು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮದುವೆಯ ತಯಾರಿಯಲ್ಲಿದ್ದ ಮಹಾಂತೇಶ್
ಕೊಲೆಯಾದ ಮಹಾಂತೇಶ್ ಮದುವೆಯಾಗುವ ತಯಾರಿಯಲ್ಲಿದ್ದ. ಶುಕ್ರವಾರ ಕನ್ಯೆ ನೋಡಲು ಹೋಗಬೇಕಿತ್ತು. ಖುಷಿ ಕನಸು ಕಂಡು ಮಲಗಿದವ, ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದರಿಂದ ಕುಟುಂಬಸ್ಥ ಆಕ್ರಂದನ ಮುಗಿಲು ಮುಟ್ಟಿದೆ. ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಗದಗ ಎಸ್‌ಪಿ ಶಿವಪ್ರಕಾಶ್ ದೇವರಾಜ್, ಡಿವೈಎಸ್ಪಿ ವಿಜಯ್ ಬಿರಾದಾರ್ ಹಾಗೂ ಇನ್ನಿತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸಿ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ | Land slide: ಮಣಿಪುರದಲ್ಲಿ ಭಾರಿ ಕುಸಿತ, ಏಳು ಸಾವು, 23 ಮಂದಿ ಇನ್ನೂ ಮಣ್ಣಿನೊಳಗೆ