ಬೆಂಗಳೂರು/ಬಳ್ಳಾರಿ: ಹೊಸ ವರ್ಷಕ್ಕೆ (New year Murder) ಕಾಲಿಡುತ್ತಿದ್ದಂತೆಯೇ ಮೊದಲ ದಿನವೇ ಡಬಲ್ ಮರ್ಡರ್ (Double murder) ನಡೆದಿದೆ. ಬೆಂಗಳೂರಿನ ಶ್ರೀನಿವಾಸನಗರ ಮತ್ತು ಬಳ್ಳಾರಿಯಲ್ಲಿ ಇಬ್ಬರು ಯುವಕರನ್ನು ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಇದು ಹೊಸ ವರ್ಷದ ಕುಡಿತದ ಮತ್ತಿನಲ್ಲಿ ನಡೆದ ಕೊಲೆಗಳಲ್ಲ. ಬದಲಾಗಿ, ಹಿಂದಿನ ದ್ವೇಷವನ್ನು ತೀರಿಸಿಕೊಳ್ಳಲು ಹೊಸ ವರ್ಷದ ಪರ್ವ ಕಾಲವನ್ನು ಮುಹೂರ್ತವಾಗಿ ಇಟ್ಟಂತೆ ಕಾಣಿಸುತ್ತಿದೆ.
ಚೂರಿಯಿಂದ ಇರಿದು ಎಸೆದು ಹೋದ ದುಷ್ಕರ್ಮಿಗಳು
ಬೆಂಗಳೂರಿನ ಹನುಮಂತ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀನಿವಾಸ ನಗರದಲ್ಲಿ ಭಾನುವಾರ ರಾತ್ರಿ ಯುವಕನ ಕೊಲೆಯಾಗಿದೆ. ಬನಶಂಕರಿ ಮೂಲದ ವಿಜಯ(21)ಹತ್ಯೆಯಾದ ಯುವಕ. ಆತನನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ ದುಷ್ಕರ್ಮಿಗಳು ರಸ್ತೆ ಬದಿ ಎಸೆದು ಪರಾರಿಯಾಗಿದ್ದಾರೆ.
ಭಾನುವಾರ ರಾತ್ರಿ 1 ಗಂಟೆ ಸುಮಾರಿಗೆ ಈ ಕೊಲೆ ನಡೆದಿದೆ. ವಿಜಯ್ ಅವರನ್ನು ಸ್ನೇಹಿತರೇ ಹತ್ಯೆಯಾಗಿರುವ ಶಂಕೆ ಇದೆ. ಅವರೆಲ್ಲ ಸೇರಿ ವಿಜಯ್ನನ್ನು ಕೊಂದು ಶ್ರೀನಿವಾಸ್ ನಗರ ಬಸ್ ನಿಲ್ದಾಣದ ಮುಂದೆ ಬಿಸಾಕಿ ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: New Year 2024: ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಮೋದಿ; ವಿಶ್ ಹೀಗಿದೆ
ಕೇಕ್ ತರಲು ತೆರಳಿದ್ದ ವ್ಯಕ್ತಿ ಕೊಲೆ: ಮತ್ತೋರ್ವನಿಗೆ ಗಂಭೀರ ಗಾಯ
ಬಳ್ಳಾರಿ: ವರ್ಷದ ಅಂತ್ಯ ದಿನದಂದೇ ಕ್ಷುಲಕ ಕಾರಣಕ್ಕೆ ಚಾಕು ಇರಿದು ಓರ್ವ ಕೊಲೆಯಾದ ಘಟನೆ ನಗರದ ವಡ್ಡರಬಂಡೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಹೊಸ ವರ್ಷದ ಆಚರಣೆಗಾಗಿ ಕೇಕ್ ತರಲು ಹೋದಾಗ ಬೇಕರಿವೊಂದರ ಬಳಿ ಎರಡು ಗುಂಪು ನಡುವೆ ನಡೆದ ಘಟನೆಯಲ್ಲಿ ಆರ್.ಕೆ.ಕಾಲೋನಿಯ ನಿವಾಸಿ ಸೈಯದುಲ್ಲಾ (24) ಮೃತಪಟ್ಟಿದ್ದು, ಮತ್ತೋರ್ವ ಬಾಪೂಜಿ ನಗರದ ನಿವಾಸಿ ರಜಾಕ್ ವಲಿ (26) ತೀವ್ರ ಗಾಯಗೊಂಡಿದ್ದು, ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಕೇಕ್ ತರಲು ಹೋಗಿದ್ದ ವೇಳೆ ಪಾರ್ಕಿಂಗ್ ಮಾಡಿದ್ದ ಬೈಕ್ ಗೆ ಕೊಲೆಯಾದವರ ಬೈಕ್ ತಗುಲಿದ ಪರಿಣಾಮ ಪರಸ್ಪರ ಕೈ ಕೈ ಮಿಲಾಯಿಸುವ ಮೂಲಕ ಜಗಳ ತೀವ್ರ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಢದಿದ್ದಾರೆ. ಈ ಬಗ್ಗೆ ಬ್ರೂಸ್ ಪೇಟೆ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.