ಬೆಂಗಳೂರು: ಕೋರಮಂಗಲದ ಉದ್ಯಮಿ ರಾಜಗೋಪಾಲ ರೆಡ್ಡಿ ಮನೆಯಲ್ಲಿ ಶನಿವಾರ (ಡಿ.೧೭) ನಡೆದಿದ್ದ ಜೋಡಿ ಕೊಲೆ (Double Murder) ಮತ್ತು ದರೋಡೆ ಕೇಸ್ಗೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಸೆಕ್ಯುರಿಟಿ ಗಾರ್ಡ್ ಹಾಗೂ ಮನೆಗೆಲಸದವನನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದರು. ಮೊದಲು ಸೆಕ್ಯುರಿಟಿ ಗಾರ್ಡ್ ಕೊಂದು, ಮನೆಯೊಳಗಿದ್ದ ಕೆಲಸದವನಿಗಾಗಿ ರಾತ್ರಿ ಇಡೀ ಬಾಗಿಲ ಮುಂದೆ ಕುಳಿತಿದ್ದ ಹಂತಕರು ಬೆಳಗ್ಗೆ ಆತ ಬಾಗಿಲು ತೆಗೆಯುತ್ತಿದ್ದಂತೆ ಹತ್ಯೆ ಮಾಡಿದ್ದರು.
ಆರೋಪಿಗಳಾದ ಜಗದೀಶ ಹಾಗೂ ಸುನೀಲ್ ಬಂಧಿತ ಆರೋಪಿಗಳಾಗಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಗದೀಶ ಕಳೆದ ಕೆಲವು ವರ್ಷದಿಂದ ಗೋಪಾಲರೆಡ್ಡಿ ಮನೆಯಲ್ಲಿ ಕಾರು ಚಾಲಕನಾಗಿದ್ದ. ರಾಜಗೋಪಾಲ ರೆಡ್ಡಿ ಮತ್ತು ಕುಟುಂಬದವರೆಲ್ಲ ಮದುವೆಗಾಗಿ ಅನಂತಪುರಕ್ಕೆ ಹೋಗಿದ್ದಾಗ ಈತ ತನ್ನ ಸಂಗಡಿಗನ ಜತೆ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಕಳೆದ ಎರಡೂವರೆ ತಿಂಗಳ ಹಿಂದೆ ಗೋಪಾಲರೆಡ್ಡಿ ಅವರ ಬೆಲೆಬಾಳುವ ಕಾರನ್ನು ಜಗದೀಶ್ ಶೋಕಿಗಾಗಿ ಒಬ್ಬನೇ ತೆಗೆದುಕೊಂಡು ಹೋಗಿದ್ದ. ಈ ವೇಳೆ ಕಾರು ಅಪಘಾತವಾಗಿತ್ತು. ಈ ಮಾಹಿತಿ ತಿಳಿದ ಗೋಪಾಲರೆಡ್ಡಿ ಸಿಟ್ಟಿಗೆದ್ದು, ಜಗದೀಶನ ಮನೆಯವರನ್ನು ಠಾಣೆಗೆ ಕರೆಸಿ ಜಗದೀಶನ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಮಾಡಿ, ಪೊಲೀಸರಿಂದ ಎಚ್ಚರಿಕೆ ಕೊಡಿಸಿ ಕಳುಹಿಸಿದ್ದರು.
ಇದನ್ನೂ ಓದಿ | Domestic violence | ಕೌಟುಂಬಿಕ ಕಲಹದ ಹಿನ್ನೆಲೆ: ಮಗುವನ್ನು ಕೆರೆಗೆ ಎಸೆದು ತಾಯಿ ಆತ್ಮಹತ್ಯೆ
ನಂತರ ಜಗದೀಶನನ್ನು ಕೆಲಸದಿಂದ ತೆಗೆದುಹಾಕಿ ಬೇರೆ ಕಾರು ಚಾಲಕನನ್ನು ನೇಮಿಸಿಕೊಂಡಿದ್ದರು. ಇದೇ ವೇಳೆ ಜಗದೀಶ ಗೋಪಾಲರೆಡ್ಡಿಯ ಹೊಸ ಚಾಲಕನ ಜತೆ ಮಾತುಕತೆ ಮುಂದುವರಿಸಿದ್ದ. ಹೀಗೆ ಡಿ.15ರಂದು ಗೋಪಾಲರೆಡ್ಡಿ ಚಾಲಕನಿಗೆ ಕಾಲ್ ಮಾಡಿದ್ದ ಜಗದೀಶನಿಗೆ ಮನೆಯವರೆಲ್ಲ ಹೊರಗಡೆ ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಗೋಪಾಲರೆಡ್ಡಿ ಅವರು ತಮ್ಮ ಕುಟುಂಬದವರ ಜತೆ ಆಂಧ್ರಪ್ರದೇಶದ ಮದುವೆ ಸಮಾರಂಭಕ್ಕೆ ಬಂದಿದ್ದೇವೆ ಎಂದು ಚಾಲಕ ಮಾಹಿತಿ ನೀಡಿದ್ದ.
ದರೋಡೆಗೆ ಸ್ಕೆಚ್
ಗೋಪಾಲರೆಡ್ಡಿ ಕುಟುಂಬದವರು ಆಂಧ್ರಕ್ಕೆ ಹೋಗಿದ್ದಾರೆಂದು ತಿಳಿಯುತ್ತಿದ್ದಂತೆ ಜಗದೀಶ ದರೋಡೆಗೆ ಸ್ಕೆಚ್ ಹಾಕಿದ್ದಾನೆ. ಇದಕ್ಕಾಗಿ ಲಗ್ಗೆರೆಯಲ್ಲಿರುವ ಸ್ನೇಹಿತ ಸುನೀಲ್ ಎಂಬಾತನ ಬಳಿ ಸಹಾಯ ಕೇಳಿದ್ದ. ಆತನ ಜತೆಗೂಡಿ ಗೋಪಾಲರೆಡ್ಡಿ ಮನೆ ಕಡೆ ಬಂದಿದ್ದ. ಸುನೀಲ್ ಆಟೋದಲ್ಲಿ ಜಗದೀಶನನ್ನು ಗೋಪಾಲರೆಡ್ಡಿ ಮನೆಗೆ ಕರೆದುಕೊಂಡು ಬಂದಿದ್ದ. ಅಲ್ಲದೆ, ಆ ಮನೆಯ ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾ ಇದೆ ಎನ್ನುವುದು ಜಗದೀಶನಿಗೆ ತಿಳಿದಿತ್ತು.
ಮನೆ ಹಿಂಬಾಗಲಿಂದ ಪ್ರವೇಶ
ಮನೆಯ ಹಿಂಭಾಗ ಸಿಸಿ ಕ್ಯಾಮೆರಾ ಇಲ್ಲದ ಕಡೆಯಲ್ಲಿ ಸ್ಟೂಲ್ ಬಳಸಿ ಜಿಗಿದು ಬಂದಿದ್ದ ಜಗದೀಶ ಮತ್ತು ಸಂಗಡಿಗ, ಮನೆಯ ಸೆಲ್ಲಾರ್‌ಗೆ ಮೊದಲು ಪ್ರವೇಶ ಮಾಡಿದ್ದ. ಆಗ ಸೆಕ್ಯೂರಿಟಿ ರೂಂನಲ್ಲಿದ್ದ ಸೆಕ್ಯುರಿಟಿ ದಿಲ್ ಬಹದ್ದೂರ್ ಮೇಲೆ ದಾಳಿ ಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಸಂಪ್‌ಗೆ ಎಸೆದಿದ್ದ. ಇಷ್ಟಾದ ಬಳಿಕ ಜಗದೀಶ್‌ನನ್ನು ಸೆಲ್ಲಾರ್‌ಗೆ ಕರೆಸಿಕೊಂಡಿದ್ದ. ಇಷ್ಟೆಲ್ಲ ಕೃತ್ಯವನ್ನು ರಾತ್ರಿ ಮಾಡಿದ್ದಾರೆ. ಆದರೆ, ಮನೆಯ ಒಳಗಡೆ ಮನೆಗೆಲಸದ ಕರಿಯಪ್ಪ ಇರುವುದು ಗೊತ್ತಾಗಿದೆ. ಹೀಗಾಗಿ ರಾತ್ರಿ ಇಡೀ ಇಬ್ಬರೂ ಮನೆಯ ಬಾಗಿಲಿನಲ್ಲೇ ಕುಳಿತು ಕಾದಿದ್ದರು.
ಬೆಳಗ್ಗೆ ಕರಿಯಪ್ಪ ಮನೆ ಬಾಗಿಲು ತೆರೆಯುತ್ತಿದ್ದಂತೆ ಆತನನ್ನು ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ನಂತರ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಇಬ್ಬರೂ ಪರಾರಿಯಾಗಿದ್ದಾರೆ. ಬಂದ ಆಟೋದಲ್ಲೇ ಇಬ್ಬರೂ ಹೋಗಿದ್ದಾರೆ. ತನಿಖೆ ಕೈಗೊಂಡಿದ್ದ ಕೋರಮಂಗಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ | Road accident | ರಿಪ್ಪನ್‌ಪೇಟೆ ಸಮೀಪ ಕಾರು ಪಲ್ಟಿ: ನಾಲ್ವರು ಯಾತ್ರಿಕರು ಅಪಾಯದಿಂದ ಪಾರು, ಜೀವ ಉಳಿಸಿದ ಏರ್ ಬ್ಯಾಗ್