ಬೆಂಗಳೂರು: ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಎರಡು ತಿಂಗಳಿಗೇ ಸಂಕಷ್ಟ ಶುರುವಾಯಿತಾ? ಎಂಬ ಪ್ರಶ್ನೆ ಮೂಡಿದೆ. ಸ್ವಪಕ್ಷ ಮತ್ತು ವಿಪಕ್ಷ ಎರಡೂ ಕಡೆಯಿಂದ ಏಟು ಬೀಳುತ್ತಿದೆ ಎಂದು ಹೇಳಲಾಗುತ್ತಿದ್ದು, ದೂರಿನ ಮೇಲೆ ದೂರುಗಳು ಬರುತ್ತಿವೆ. ವಿರೋಧ ಪಕ್ಷಗಳ ದೂರಿನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಸರ್ಕಾರಕ್ಕೆ ಈಗ ತಮ್ಮದೇ ಪಕ್ಷದ ಶಾಸಕರು (Congress MLAs) ದೂರು ನೀಡಿರುವುದು ಇರಿಸುಮುರಿಸು ತಂದಿಟ್ಟಿದೆ. 30 ಮಂದಿ ಶಾಸಕರು ಈಗ ಸಚಿವರ ವಿರುದ್ಧ ಸಿಡಿದೆದ್ದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದ ಸದಸ್ಯರ ಮೇಲೆ ಈಗ ದೂರು ಕೇಳಿಬಂದಿದೆ. ಸಿದ್ದರಾಮಯ್ಯಗೆ ಪತ್ರ ಬರೆದಿರುವ ಹಿರಿಯ ಶಾಸಕರು, ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನವನ್ನು (Complaint against ministers) ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸಚಿವರಾಗಿ ಕೆಲಸ ಮಾಡಿದ ಸಚಿವರಿಂದಲೇ ಈಗ ದೂರು ಬಂದಿರುವುದು ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾಬೀತು ಮಾಡಿದೆ.
ಇದನ್ನೂ ಓದಿ: Karnataka Tourism: ಪ್ರವಾಸೋದ್ಯಮ ಸ್ನೇಹಿ ರಾಜ್ಯಕ್ಕಾಗಿ ಹಲವು ಕ್ರಮ: ಸಚಿವ ಎಚ್.ಕೆ. ಪಾಟೀಲ್
ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನದ ವಿಚಾರವನ್ನು ಈ ದೂರಿನ ಮೂಲಕ ಹಿರಿಯ ಶಾಸಕರು ರವಾನೆ ಮಾಡಿದ್ದಾರೆ. ಸಿದ್ದರಾಮಯ್ಯ ಆಪ್ತ ಶಾಸಕರೇ ಈಗ ದೂರು ನೀಡಿರುವುದು ಸಿಎಂಗೆ ತಲೆನೋವು ತಂದೊಡ್ಡಿದೆ.
ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ಪತ್ರ
ಸಚಿವರ ವರ್ತನೆಗೆ ಹಿರಿಯ ಶಾಸಕರು ಗರಂ ಆಗಿದ್ದಾರೆ. ಕೂಡಲೇ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಮಾಜಿ ಸಚಿವ ಬಸವರಾಜ ರಾಯರೆಡ್ಡಿ (Basavaraj Rayareddy) ನೇತೃತ್ವದಲ್ಲಿ ಪತ್ರ ಬರೆಯಲಾಗಿದ್ದು, ಸಚಿವರ ವಿರುದ್ಧ ಬರೆದ ಪತ್ರಕ್ಕೆ 30ಕ್ಕೂ ಅಧಿಕ ಶಾಸಕರು ಸಹಿ ಹಾಕಿದ್ದಾರೆ.
ಈ ಕಾರಣಕ್ಕಾಗಿ ಜುಲೈ 27ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು (Congress Legislature Party meeting) ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ. ಸಚಿವರ ವಿರುದ್ಧ ಹಿರಿಯ ಶಾಸಕರಿಂದ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಸಚಿವರ ವರ್ತನೆ ಸರಿಯಿಲ್ಲ, ಹಿರಿಯರ ಬಗ್ಗೆ ಗೌರವವಿಲ್ಲ. ಮಂತ್ರಿಯಾದ ಮೇಲೆ ಹಿರಿಯ ಶಾಸಕರ ಅಭಿಪ್ರಾಯಗಳನ್ನು ಪರಿಗಣಿಸಿಲ್ಲ. ಹಿರಿಯ ಶಾಸಕರಾದ ಆರ್.ವಿ ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಎಂ ಕೃಷ್ಣಪ್ಪ ಅವರು ಈ ವಿಷಯವಾಗಿ ಆಕ್ರೋಶಗೊಂಡಿದ್ದಾರೆ ಎಂದು ಹೇಳಲಾಗಿದೆ.
ಶಾಸಕರ ವರ್ಗಾವಣೆ ಶಿಫಾರಸು ಪತ್ರಗಳಿಗೆ ಮಾನ್ಯತೆ ನೀಡಿಲ್ಲ. ಕೆಲ ಸಚಿವರು ವರ್ಗಾವಣೆಗೆ ಹಣ ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಂಬಂಧಿಯೊಬ್ಬರ ವರ್ಗಾವಣೆಗೆ ಶಿಫಾರಸು ಪತ್ರ ನೀಡಿದ್ದ ಹಿರಿಯ ಶಾಸಕರಿಗೆ ಹಣದ ಬೇಡಿಕೆ ಇಡಲಾಗಿದೆ. ಶಿಫಾರಸು ಪತ್ರ ಹಿಡಿದು ವರ್ಗಾವಣೆಗೆಂದು ಸಚಿವರನ್ನು ಭೇಟಿ ಮಾಡಿದ್ದ ಅಧಿಕಾರಿ ಬಳಿ ಸಚಿವರೊಬ್ಬರ ಸಹೋದರ ಹಣ ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಾಸಕರಿಗೆ ಗೌರವ ಕೊಡುತ್ತಿಲ್ಲ, ಭೇಟಿ ವೇಳೆ ಸರಿಯಾಗಿ ಸ್ಪಂದನೆ ಇಲ್ಲ. ಹೀಗಾಗಿ ಕೂಡಲೆ ಸಚಿವರಿಗೆ ಸೂಚನೆ ಕೊಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ದೂರಿಗೆ ಸಹಿ ಹಾಕಿರುವ ಶಾಸಕರು ಯಾರ್ಯಾರು?
- ಬಿ.ಆರ್ ಪಾಟೀಲ್
- ಬಸವರಾಜ್ ರಾಯರೆಡ್ಡಿ
- ಯಶವಂತ ರಾಯಗೌಡ ಪಾಟೀಲ್
- ಅಪ್ಪಾಜಿ ನಾಡಗೌಡ
- ಶಿವಲಿಂಗೇಗೌಡ
- ನರೇಂದ್ರಸ್ವಾಮಿ
- ಎಂ. ಕೃಷ್ಣಪ್ಪ
- ಪ್ರಿಯಕೃಷ್ಣ
- ವಿನಯ್ ಕುಲಕರ್ಣಿ
- ವಿಜಯಾನಂದ ಕಾಶಪ್ಪನವರ್
- ಎ.ಆರ್ ಕೃಷ್ಣಮೂರ್ತಿ
- ಅಲ್ಲಮ ಪ್ರಭು ಪಾಟೀಲ್
- ಮಹಾಂತೇಶ್ ಕೌಜಲಗಿ ಸೇರಿದಂತೆ ಸುಮಾರು 30 ಶಾಸಕರು ಸಹಿ ಹಾಕಿದ್ದಾರೆ.
ಅಲರ್ಟ್ ಆದ ಸಿಎಂ
ದೂರು ಬಂದ ಬೆನ್ನಲ್ಲೇ ಅಲರ್ಟ್ ಆದ ಸಿಎಂ ಸಿದ್ದರಾಮಯ್ಯ ಅವರು, ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಇಲ್ಲಿ ಎಲ್ಲ ಶಾಸಕರ ಮನವಿ ಆಲಿಸಲಿದ್ದಾರೆ. ಈ ವೇಳೆ ಕೇಳಿಬಂದ ದೂರು-ದುಮ್ಮಾನಗಳು ಹಾಗೂ ಸಲಹೆಗಳನ್ನು ಪಡೆಯಲಿದ್ದಾರೆ. ಕ್ಯಾಬಿನೆಟ್ ಸಭೆ ಬಳಿಕ ಶಾಸಕರ ಜತೆ ಚರ್ಚೆ ಮಾಡುವ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಬಂದಿದ್ದಾರೆ.
ಯಾರೂ ದೂರು ನೀಡಿಲ್ಲವೆಂದ ಸಿಎಂ
ಆದರೆ, ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಯಾರೂ ಯಾವುದೇ ದೂರನ್ನು ನೀಡಿಲ್ಲ. ನಾವು ಅಧಿವೇಶನ ಸಹಿತ ಕೆಲವೊಂದು ಕೆಲಸದಲ್ಲಿ ಬ್ಯುಸಿಯಾಗಿದ್ದೆವು. ಈಗ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದೇವೆ ಎಂದು ಆರೋಪವನ್ನು ತಳ್ಳಿಹಾಕಿದರು.
ಆಪರೇಶನ್ ಸಿಂಗಾಪುರ ಸಂಕಷ್ಟ
ಇತ್ತ ರಾಜ್ಯ ಸರ್ಕಾರವನ್ನು ಕೆಡವಲು ಬಿಜೆಪಿ, ಜೆಡಿಎಸ್ ನಾಯಕರಿಂದ ವಿದೇಶದಲ್ಲಿ ಪ್ಲ್ಯಾನ್ ನಡೆಯುತ್ತಿದೆ ಎನ್ನಲಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಚೆಕ್‌ಮೇಟ್ ಕೊಡಲು ಬೃಹತ್ ಪ್ಲ್ಯಾನ್ ರೆಡಿಯಾಗುತ್ತಿದೆ. ಸಿಂಗಾಪುರದಿಂದಲೇ ಆಪರೇಷನ್ ಮಾತುಕತೆ ಶುರುವಾಗಿದೆ ಎನ್ನಲಾಗಿದೆ. ಕಾಂಗ್ರೆಸ್‌ನಲ್ಲಿ “ಕರ್ನಾಟಕದ ಅಜಿತ್ ಪವರ್” ಸೃಷ್ಟಿಗೆ ಉಭಯ ಪಕ್ಷಗಳ ನಾಯಕರು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಡಬಲ್ ಸಂಕಷ್ಟ ಎದುರಾದಂತೆ ಆಗಿದೆ. ಅತ್ತ ಹೋದರೆ ಪುಲಿ, ಇತ್ತ ಬಂದರೆ ಧರಿ ಅನ್ನುವಂತಾಗಿದೆ.
ಇದೆಲ್ಲ ಸುಳ್ಳು, ಯಾರೂ ಪತ್ರ ಬರೆದಿಲ್ಲ: ಡಿ.ಕೆ. ಶಿವಕುಮಾರ್
ಕಾಂಗ್ರೆಸ್ ಯಾವ ಶಾಸಕರೂ ಸಚಿವರ ವಿರುದ್ಧವಾಗಿ ಪತ್ರ ಬರೆದಿಲ್ಲ. ಎಲ್ಲರೂ ಅವರವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಲಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ನಮ್ಮ ನಾಯಕರು ಗೆಲ್ಲಲಿ, ಸೋಲಲಿ. ಅವರನ್ನು ಗಮನದಲ್ಲಿ ಇಡಬೇಕು ಎಂದು ಹೇಳಿದ್ದೇವೆ. ಹೀಗಾಗಿ ಶಾಸಕರ ಕಡೆಗಣನೆ ಆಗಿಲ್ಲ. ನಮ್ಮದು ಕೆಲವು ಕಾರ್ಯಕ್ರಮಗಳಿವೆ. ಅಸೆಂಬ್ಲಿ ಇದ್ದ ಕಾರಣ ಚರ್ಚೆ ಮಾಡಲು ಆಗಿಲ್ಲ. ಅದರ ಬಗ್ಗೆ ಚರ್ಚೆ ಮಾಡಬೇಕು ಎಂದು ಹೇಳಿದರು.
ವರ್ಗಾವಣೆಗೆ ಸಮಯ ಮಿತಿ ಇದೆ. ಸಮಯ ಮಿತಿಯಲ್ಲಿ ಮಾಡಲಾಗಿದೆ. ಉಳಿದ ವಿಷಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ: Shakti Scheme : ಬಸ್‌ನಿಂದ ಕೆಳಗೆ ಬಿದ್ದಿದ್ದ ಮಹಿಳೆ ಸಾವು; ಅನಾಥ ಮಕ್ಕಳ ಪರಿಹಾರಕ್ಕೆ ಮೊರೆ
ಎಲ್ಲವೂ ಸರಿ ಇಲ್ಲ ಎಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಮೊದಲ ದಿನದಿಂದಲೇ ಎಲ್ಲವೂ ಸರಿಯಿಲ್ಲ. ಸಿಎಂ ಆಯ್ಕೆಯನ್ನು ಸೀಕ್ರೆಟ್ ಬ್ಯಾಲೆಟ್ ಮೂಲಕ ಮಾಡಿದರು. ಮಂತ್ರಿಮಂಡಲ ಆದ ಮೇಲೂ ಅಸಮಾಧಾನ ಕಂಡುಬಂತು. ಶಾಸಕರಿಗೆ ಯಾವುದೇ ಕೆಲಸ ಆಗುತ್ತಿಲ್ಲ. ಸಿದ್ದರಾಮಯ್ಯ ಗ್ಯಾರಂಟಿಗೆ ಹಣ ಹೊಂದಿಸಲು ಸಾಲ ಮಾಡಿದ್ದಾರೆ. ಅಭಿವೃದ್ಧಿ ಯೋಜನೆಗೆ ಹಣ ಇಲ್ಲ ಎಂದಿದ್ದಾರೆ. ಭ್ರಷ್ಟಾಚಾರವೂ ಇರುವುದರಿಂದ ಅಸಮಾಧನವಿದೆ. ಇದಕ್ಕಾಗಿಯೇ ಶಾಸಕಾಂಗ ಪಕ್ಷದ ಸಭೆಗೆ ಶಾಸಕರು ಪತ್ರ ಬರೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಆರ್‌ಟಿ ನಗರ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ