Site icon Vistara News

Caste Census: ಜಾತಿ ಗಣತಿ ಬಗ್ಗೆ ಅನುಮಾನವಿದೆ; ಸರ್ಕಾರ ಹಠಕ್ಕೆ ಬೀಳಬಾರದು: ಶಾಮನೂರು ಎಚ್ಚರಿಕೆ

Shamanur Shivashankarappa

ದಾವಣಗೆರೆ: ಕಾಂತರಾಜ್ ಅವರ ಜಾತಿ ಗಣತಿ (Caste Census) ವರದಿಯ ಅಂಕಿ – ಅಂಶಗಳ ಬಗ್ಗೆ ಅನುಮಾನವಿದೆ. ಕೆಲವು ಸಮುದಾಯಗಳು ವಿರೋಧ ಮಾಡುತ್ತಿವೆ. ಈ ವಿಚಾರದಲ್ಲಿ ಸರ್ಕಾರ ಹಠಕ್ಕೆ ಬೀಳಬಾರದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ (All India Veerashaiva Lingayat Mahasabha) ಅಧ್ಯಕ್ಷ, ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಸರ್ಕಾರಕ್ಕೆ ಖಡಕ್‌ ಎಚ್ಚರಿಕೆಯನ್ನು ನೀಡಿದ್ದಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಜಾತಿ ಗಣತಿ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಅಶಾಂತಿ ಮೂಡುವಂತೆ ಸರ್ಕಾರ ಮಾಡಬಾರದು ಎಂದು ಹೇಳಿದರು.

ಕೇಂದ್ರ ಸರ್ಕಾರವು ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತರನ್ನು ಸೇರಿಸಬೇಕು. ಈ ಕುರಿತು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಶಿಫಾರಸು ಮಾಡಬೇಕು ಎಂದು ಶಾಮನೂರು ಶಿವಶಂಕರಪ್ಪ ಅವರು ಇದೇ ಸಂದರ್ಭದಲ್ಲಿ ಹೇಳಿದರು.

24ನೇ ಮಹಾ ಅಧಿವೇಶನದಲ್ಲಿ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರು ಎಂಟು ನಿರ್ಣಯಗಳನ್ನು ಮಂಡನೆ ಮಾಡಿದ್ದಾರೆ. ದೇಶದ ಅಖಂಡತೆ, ಏಕತೆ, ಸಮಗ್ರತೆ, ಭದ್ರತೆಯ ರಕ್ಷಣೆಗೆ ಕಟಿಬದ್ಧವಾಗಿರುವುದು, ವಿಶ್ವಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಅಧಿಕೃತವಾಗಿ ಘೋಷಿಸುವುದು, ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತರನ್ನು (Veerashaiva Lingayat) ಸೇರಿಸುವುದು, ಜಾತಿ ಗಣತಿಗೆ (Caste Census) ಸಂಬಂಧಪಟ್ಟಂತೆ ಕಾಂತರಾಜ ವರದಿಯನ್ನು ತಿರಸ್ಕಾರ ಮಾಡುವುದು ಸೇರಿದಂತೆ ಇನ್ನಿತರ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ವೇದಿಕೆಯಲ್ಲಿದ್ದ ಹಾಗೂ ವೇದಿಕೆ ಮುಂಭಾಗದಲ್ಲಿದ್ದ ವೀರಶೈವ ಲಿಂಗಾಯತ ಸಮುದಾಯ ಜನರು ಎದ್ದು ನಿಂತು ಈ ನಿರ್ಣಯಗಳನ್ನು ಅಂಗೀಕರಿಸಿದರು.

ಮಹಾ ಅಧಿವೇಶನದ 8 ನಿರ್ಣಯಗಳು ಇವು

  1. ದೇಶದ ಅಖಂಡತೆ, ಏಕತೆ, ಸಮಗ್ರತೆ, ಭದ್ರತೆಯ ರಕ್ಷಣೆಗೆ “ಮಹಾಸಭೆ’’ ಹಾಗೂ ನಮ್ಮ ಸಮಾಜ ಸದಾ ಕಟಿಬದ್ಧವಾಗಿದ್ದು, ಅಂತಹ ಯಾವುದೇ ಹೋರಾಟ, ಪ್ರಯತ್ನಗಳಿಗೆ ಈ ಹಿಂದಿನಂತೆಯೇ ಪ್ರೋತ್ಸಾಹ, ಬೆಂಬಲ ನೀಡುತ್ತದೆ ಎಂದು ಈ ಮಹಾಧಿವೇಶನವು ಪುನರುಚ್ಚರಿಸುತ್ತದೆ.
  2. ವಿಶ್ವಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು ಎಂದು ಮಹಾಧಿವೇಶನ ಒತ್ತಾಯಿಸುತ್ತದೆ.
  3. ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತರನ್ನು ಸೇರಿಸಬೇಕು. ಒಬಿಸಿ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರವು ಈ ಶಿಫಾರಸನ್ನು ಅಂಗೀಕರಿಸಬೇಕು ಎಂದು ಈ ಮಹಾಧಿವೇಶನ ಒತ್ತಾಯಿಸುತ್ತದೆ.
  4. ಜಾತಿಗಣತಿಗೆ ಸಂಬಂಧಪಟ್ಟ ಕಾಂತರಾಜ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಬೇಕು. ಎಲ್ಲ ಒಳಪಂಗಡಗಳನ್ನು ಒಳಗೊಂಡ ವಾಸ್ತವಿಕ ಮತ್ತು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ಆಧಾರದ ಮೇಲೆ ಸಮೀಕ್ಷೆ ಆಗಬೇಕು. ವೈಜ್ಞಾನಿಕವಾಗಿ ಜಾತಿ ಜನಗಣತಿ ಆಗಬೇಕು ಎಂದು ಈ ಮಹಾಧಿವೇಶನ ಒಕ್ಕೊರಲಿನಿಂದ ಒತ್ತಾಯಿಸುತ್ತದೆ
  5. ಸರ್ಕಾರ ಮುಂದಿನ ದಿನಗಳಲ್ಲಿ ನಡೆಸುವ ಜನ ಗಣತಿಯ ವೇಳೆ ನಮ್ಮ ಸಮಾಜದ ಬಾಂಧವರು ಹಿಂದು ಮತ್ತು ತಮ್ಮ ಉಪ ಜಾತಿಯ ಹೆಸರುಗಳನ್ನು ಬರೆಸಬಾರದು. ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದೇ ಬರೆಸುವಂತೆ ಈ ಮಹಾಧಿವೇಶನ ಮನವಿ ಮಾಡಲು ನಿರ್ಣಯ ಮಾಡಿರುತ್ತದೆ.
  1. ಎಲ್ಲ ರೈತರಿಗೆ ಅನುಕೂಲ ಆಗುವಂತೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಈ ಮಹಾಧಿವೇಶನವು ಸರ್ಕಾರವನ್ನು ಒತ್ತಾಯಿಸುತ್ತದೆ.
  2. ಮಾಜಿ ಸಿಎಂ ಎಸ್ ನಿಜಲಿಂಗಪ್ಪ ಅವರ ನಿವಾಸ ಖರೀದಿ ಮಾಡಲು ನಿರ್ಧಾರ. ಆ ಮನೆಯನ್ನು ಖರೀದಿಸಿ ಕಾರ್ಯಪ್ರವೃತ್ತವಾಗಿ ಶ್ರೀ ನಿಜಲಿಂಗಪ್ಪನವರ ಪುಣ್ಯ ಸ್ಮರಣೆಯ ದಿನವಾದ ಆಗಸ್ಟ್ 8, 2024ರೊಳಗೆ ಸ್ಮಾರಕ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಈ ಮಹಾಧಿವೇಶನ ಒತ್ತಾಯಿಸುತ್ತದೆ.
  1. ಮಹಾಸಭಾದ 24ನೇ ಮಹಾಧಿವೇಶನಕ್ಕೆ ಸಹಕರಿಸಿದ ಎಲ್ಲರಿಗೂ ಈ ಮಹಾಧಿವೇಶನ ತನ್ನ ಕೃತಜ್ಞತೆಯನ್ನು ಸಮರ್ಪಿಸುವ ನಿರ್ಣಯ ಅಂಗೀಕರಿಸುತ್ತದೆ.

ಇದನ್ನೂ ಓದಿ: ಬಿಜೆಪಿಗರು ಬ್ರಿಟಿಷರ ಬೂಟು ನೆಕ್ಕೋರು ಎಂದ ಹರಿಪ್ರಸಾದ್;‌ ನೀವು ಇಟಲಿಯವರ ಬೂಟು ನೆಕ್ಕುತ್ತಿದ್ದೀರಾ ಎಂದ ಬಿಜೆಪಿ!

ಈ ಮೂಲಕ ಮರು ಜಾತಿ ಗಣತಿಯನ್ನು ಮಾಡುವಂತೆ ಒತ್ತಾಯ ಮಾಡಲಾಗಿದೆ. ಅಲ್ಲದೆ, ರೈತರಿಗೆ ಅನುಕೂಲವಾಗುವಂತೆ ನೀರಾವರಿ ಯೋಜನೆಯನ್ನು ರೂಪಿಸಲು ಪ್ರಮುಖವಾಗಿ ಆಗ್ರಹಿಸಲಾಗಿದೆ.

Exit mobile version