Site icon Vistara News

Dowry Case | ಕೆಜಿಗಟ್ಟಲೇ ಚಿನ್ನಾಭರಣ, ಕೋಟಿಗಟ್ಟಲೇ ವರದಕ್ಷಿಣೆ ಕೊಟ್ಟರೂ ನಿಲ್ಲದ ಧನದಾಹ, ವಿಕೃತಿ!

bengaluru dowry case

ಬೆಂಗಳೂರು: ಪ್ರೀತಿಯ ಮಗಳು ಖುಷಿ ಖುಷಿಯಾಗಿರಲಿ ಎಂದು ಕೆಜಿಗಟ್ಟಲೇ ಚಿನ್ನಾಭರಣ ಹಾಗೂ ಕೋಟಿಗಟ್ಟಲೇ ವರದಕ್ಷಿಣೆ ಕೊಟ್ಟು ಅದ್ಧೂರಿಯಾಗಿ ವಿವಾಹ ಮಾಡಿ ಕೊಟ್ಟರೂ ಆತನ ಧನದಾಹ ನಿಂತಿಲ್ಲ. ದಿನೇದಿನೆ ವಿಕೃತಿ ಮುಂದುವರಿಯುತ್ತಿದ್ದರಿಂದ ಸಹಿಸಲಾಗದೇ ಈಗ ಪತ್ನಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ವರದಕ್ಷಿಣೆ ಕಿರುಕುಳ (Dowry Case) ಹಾಗೂ ಜೀವಬೆದರಿಕೆ ಅಡಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಬಸವನಗುಡಿ ನಿವಾಸಿ ಸಂದೀಪ್ ಎಂಬಾತ 2021 ರ ಜನವರಿಯಲ್ಲಿ ಹೈದರಾಬಾದ್ ಮೂಲದ ಯುವತಿಯನ್ನು ವರಿಸಿದ್ದ. ಆದರೆ, ಆತನ ಧನದಾಹ ಹಾಗೂ ವಿಕೃತಿಯಿಂದ ಜೀವನ ಮಾಡಲು ಆಗುತ್ತಿಲ್ಲ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಖ್ಯಾತ ಬಟ್ಟೆ ಕಂಪನಿ ಉದ್ಯಮಿ ಮಗಳು

ಆಕೆ ಹೈದರಾಬಾದ್‌ನ ಖ್ಯಾತ ಬಟ್ಟೆ ತಯಾರಿಕಾ ಕಂಪನಿ ಮಾಲೀಕನ ಮಗಳಾಗಿದ್ದು, ಅವರ ತಂದೆ 30 ವರ್ಷಗಳಿಂದ ಕಂಪನಿ ನಡೆಸುತ್ತಿದ್ದಾರೆ. ಇನ್ನು ಹೈದರಾಬಾದ್, ಬೆಂಗಳೂರು ಸೇರಿ ಹಲವು ಮಹಾನಗರದಲ್ಲಿ ಇವರ ಮಾಲೀಕತ್ವದ ಬಟ್ಟೆ ಶೋ ರೂಂಗಳಿವೆ. ಈ ಹಿನ್ನೆಲೆಯಲ್ಲಿ ಮದುವೆಯ ನಂತರ ಅಳಿಯನಿಗೆ ಇಷ್ಟೆಲ್ಲ ವರದಕ್ಷಿಣೆ ಜತೆಗೆ ಎರಡು ಶೋ ರೂಂನ ಲಾಭಾಂಶವನ್ನು ಸಹ ಕೊಟ್ಟಿದ್ದರು.

ಇದನ್ನೂ ಓದಿ | Indore ragging | ರ‍್ಯಾಗಿಂಗ್ ಹೆಸರಿನಲ್ಲಿ ಅಸಹಜ ಸೆಕ್ಸ್‌ಗೆ ಒತ್ತಾಯ: ಇಂದೋರ್‌ ವಿದ್ಯಾರ್ಥಿಗಳ ದೂರು

ಭಾರಿ ವರದಕ್ಷಿಣೆ

6 ಕೋಟಿ ರೂಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿ ಕೊಡಲಾಗಿತ್ತು. ಜತೆಗೆ 200 ಕೆಜಿ ಬೆಳ್ಳಿ, 4 ಕೆಜಿ ಚಿನ್ನ, 55 ಲಕ್ಷದ ಕೂಪರ್ ಕಾರು ನೀಡಿದ್ದರ ಜತೆಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಿಸಿಕೊಡಲಾಗಿತ್ತು.

ಹಲ್ಲೆ, ತಲೆ ಮೇಲೆ ಮೂತ್ರ ವಿಸರ್ಜನೆ
ಮಾವನ ಮನೆಯಿಂದ ಇಷ್ಟೆಲ್ಲ ವರದಕ್ಷಿಣೆ ಪಡೆದುಕೊಂಡರೂ ಆತನ ಧನದಾಹ ಹಾಗೂ ವಿಕೃತಿ ನಿಂತಿಲ್ಲ. ಪ್ರತಿನಿತ್ಯ ಕುಡಿದು ಮನೆಗೆ ಬರುತ್ತಿದ್ದ ಈತ ಪತ್ನಿಗೆ ದೈಹಿಕ ಹಲ್ಲೆ ನಡೆಸಿದ್ದಾನೆ. ಮನೆಯಲ್ಲಿ ಗೆಳೆಯರ ಜತೆ ಡ್ರಗ್ಸ್ ಪಾರ್ಟಿ ಮಾಡಿ ಪತ್ನಿಗೆ ಅಶ್ಲೀಲವಾಗಿ ಬೈಯುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಮದ್ಯದ ನಶೆಯಲ್ಲಿ ಪತ್ನಿಯ ತಲೆ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆಯುತ್ತಿದ್ದ ಎಂದು ನೊಂದ ಮಹಿಳೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಕೆಯ ದೂರಿನನ್ವಯ ವರದಕ್ಷಿಣೆ ಕಿರುಕುಳ ಹಾಗೂ ಜೀವಬೆದರಿಕೆ ಅಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ | ವರದಕ್ಷಿಣೆ ಕಿರುಕುಳ: ಒಂಬತ್ತು ತಿಂಗಳ ಮಗುವಿನೊಂದಿಗೆ ಗೃಹಿಣಿ ಆತ್ಮಹತ್ಯೆ

Exit mobile version