Site icon Vistara News

lok Sabha Election: ಯುಪಿಎ vs ಎನ್‌ಡಿಎ; ಅಭಿವೃದ್ಧಿಯ ದಾಖಲೆ ನೀಡಿದ ಡಾ.ಸಿ.ಎನ್. ಅಶ್ವತ್ಥನಾರಾಯಣ

Dr CN Ashwath Narayan

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ತಮ್ಮ ಸಾಧನೆಯ ಅಂಕಿ-ಅಂಶಗಳನ್ನು ಶ್ವೇತಪತ್ರದ ಮೂಲಕ ತಿಳಿಸಿದೆ. ಯುಪಿಎ ಅವಧಿಯ ‘ಆಡಳಿತ ರೋಡ್ ಟು ನೋವೇರ್’ ಆಗಿತ್ತು. ರಾಜಕೀಯ ಪ್ರೇರಿತ ಆಡಳಿತ ಅದಾಗಿತ್ತು. ಯುಪಿಎ ಬಿಟ್ಟು ಹೋದ ಆರ್ಥಿಕ ಗೊಂದಲ, ದಿಕ್ಕು ದೆಸೆ ಇಲ್ಲದ ಆಡಳಿತ, ಅವ್ಯವಸ್ಥೆಯನ್ನು ಸರಿಪಡಿಸಿ ಕಷ್ಟದ ಕಾಲದಿಂದ ಒಳ್ಳೆಯ ಕಾಲಕ್ಕೆ ದೇಶವನ್ನು ಒಯ್ದವರು ನರೇಂದ್ರ ಮೋದೀಜಿ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಎನ್‍ಡಿಎ ಸರ್ಕಾರದ ಸಾಧನೆ ಮತ್ತು ಯುಪಿಎ ಸರ್ಕಾರದ ವೈಫಲ್ಯಗಳ ಕುರಿತು ವಿವರಿಸಿದರು.

ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ಸಿಗರು ಮಾತನಾಡುತ್ತಾರೆ. ವಾಜಪೇಯಿ ಅವರ ಆಡಳಿತ ಇದ್ದಾಗ ಹಣದುಬ್ಬರ- ಬೆಲೆ ಏರಿಕೆ ಶೇ 3.9ರಷ್ಟಿತ್ತು. ಕಾಂಗ್ರೆಸ್‍ನ 10 ವರ್ಷಗಳ ಅವಧಿಯಲ್ಲಿ ಅದು ಸರಾಸರಿ ಶೇ 8.2 ಆಗಿತ್ತು. ಕೋವಿಡ್ ಇದ್ದರೂ, ಜಾಗತಿಕ ಹಣಕಾಸಿನ ಬಿಕ್ಕಟ್ಟು, ಯುದ್ಧಗಳಿದ್ದರೂ ಮೋದೀಜಿ ಅವರ ಆಡಳಿತದಲ್ಲಿ ಬೆಲೆ ಏರಿಕೆ ಸರಾಸರಿ ಶೇ 5ರಷ್ಟಿದೆ. ವಿಶ್ವದ ಎಲ್ಲೆಡೆ ಬೆಲೆ ಏರಿಕೆ ಇದೆ. ವಾಸ್ತವವಾಗಿ ಯುಪಿಎ ಅವಧಿಯಲ್ಲಿ ಬೆಲೆ ಏರಿಕೆ ಇದ್ದುದು ಎದ್ದು ಕಾಣುವಂತಿತ್ತು ಎಂದು ವಿವರಿಸಿದರು.

ಇದನ್ನೂ ಓದಿ | PM Narendra Modi: ದೇಶಕ್ಕೆ ಒಂದೇ ಸಂವಿಧಾನ ಕನಸು ಸಾಕಾರ! ಇದು 17ನೇ ಲೋಕಸಭೆಯ ಹೆಗ್ಗಳಿಕೆ

ವಾಜಪೇಯಿ ಅವರ ಕಾಲದಲ್ಲಿ ಶೇ 8ರಷ್ಟು ಜಿಡಿಪಿ ಮೂಲಕ ಅಭಿವೃದ್ಧಿ ಇತ್ತು. ಆದರೆ, ಯುಪಿಎ ಕಾಲದಲ್ಲಿ ಬೆಲೆ ಏರಿಕೆ ಇದ್ದರೂ ಬೆಳವಣಿಗೆ ಕಡಿಮೆ ಇತ್ತು. ಕಾಂಗ್ರೆಸ್ ಅವಧಿಯದು ಶೇ 5ಷ್ಟು ಅಭಿವೃದ್ದಿ ಮಾತ್ರ ಎಂದು ಆರೋಪಿಸಿದ ಅವರು, ಮೋದಿಯವರ ಅವಧಿಯಲ್ಲಿ ಶೇ 8ರಿಂದ 9ರಷ್ಟು ಬೆಳವಣಿಗೆಯನ್ನು ನಾವು ಕಾಣುತ್ತಿದ್ದೇವೆ ಎಂದು ನುಡಿದರು.

ಯುಪಿಎ ಅವಧಿಯಲ್ಲಿ ಸಾರ್ವಜನಿಕ ರಂಗದ ಬ್ಯಾಂಕ್‍ಗಳಿಂದ ಅತಿ ಹೆಚ್ಚು ಸಾಲ ಕೊಡಿಸಿದ್ದರು. ವಾಜಪೇಯಿಯವರ ಕಾಲದಲ್ಲಿ ಲೋನ್ ಎಕ್ಸ್‌ಪೋಜರ್ 6 ಲಕ್ಷ 60 ಸಾವಿರ ಕೋಟಿ ಇದ್ದರೆ, ಯುಪಿಎ ಕಾಲದಲ್ಲಿ ಅದು 39 ಲಕ್ಷ ಕೋಟಿಗೆ ಏರಿತ್ತು ಎಂದು ತಿಳಿಸಿದರು.

ದೇಶದ ಸಾಲ ಮರುಪಾವತಿಗೂ ಸಮಸ್ಯೆ ಇತ್ತು. ಯುಪಿಎ ಸರ್ಕಾರ ನಿರಾಳವಾಗಿ ನಿದ್ರಾಲೋಕದಲ್ಲಿತ್ತು ಎಂದು ಟೀಕಿಸಿದ ಅವರು, ಬ್ಯಾಂಕ್ ಎನ್‍ಪಿಎ ಶೇ. 7 ಇತ್ತು. ಈಗ ಅದು ಶೇ 3.2ರಷ್ಟಿದೆ. ಬ್ಯಾಂಕ್‍ಗಳು ಹಿಂದೆ ಮುಚ್ಚುವಂಥ ಸ್ಥಿತಿಯಲ್ಲಿದ್ದವು. ಈಗ ಮೋದೀಜಿ ಆಡಳಿತದಲ್ಲಿ ಅವು ಬೆಳವಣಿಗೆ ಕಂಡಿವೆ ಎಂದು ಹೇಳಿದರು.

ಯುಪಿಎ ಅವಧಿಯಲ್ಲಿ ಡಾಲರ್ ಬೆಲೆ ಏರಿಕೆಯೂ ಗರಿಷ್ಠ ಪ್ರಮಾಣದಲ್ಲಿತ್ತು. ಕೇವಲ 4 ತಿಂಗಳಿಗೆ ಆಮದಿಗೆ ಸಾಕಾಗುವಷ್ಟು ಮಾತ್ರ ಫಾರಿನ್ ರಿಸರ್ವ್ (290 ಬಿಲಿಯನ್ ಡಾಲರ್) ನಮ್ಮ ದೇಶದಲ್ಲಿತ್ತು. ಈಗ 596 ಬಿಲಿಯನ್ ಡಾಲರ್ ಇದೆ. ಈಗ ಅಭಿವೃದ್ಧಿಯು ಭರವಸೆದಾಯಕವಾಗಿ ನಿರ್ವಹಣೆ ಆಗುತ್ತಿದೆ. ಹಣಕಾಸು ಕೊರತೆ ಗರಿಷ್ಠ ಇತ್ತು. ತೋರಿಸುತ್ತಿದ್ದುದೇ ಒಂದು; ವಾಸ್ತವವಾಗಿ ಇನ್ನೊಂದು ಎಂಬ ಸ್ಥಿತಿ ಇತ್ತು. 1 ಲಕ್ಷದ 90 ಸಾವಿರ ಕೋಟಿ ಆಯಿಲ್ ಬಾಂಡ್ ಬಿಡುಗಡೆ ಮಾಡಿದರು. ಇದನ್ನೆಲ್ಲ ತೋರಿಸಿರಲಿಲ್ಲ. ಇಂಥ ಸಾಲಗಳನ್ನು ಮರುಪಾವತಿ ಮಾಡಲಾಗಿದೆ ಎಂದು ಹೇಳಿದರು.

ಅವರ ಕಾಲದಲ್ಲಿ ಆರ್ಥಿಕ ಸುಸ್ಥಿರತೆ ಇಲ್ಲದೆ ಎಲ್ಲವೂ ಭರವಸೆದಾಯಕವಾಗಿರಲಿಲ್ಲ. ಇವತ್ತು ಎಲ್ಲವೂ ಸುಸ್ಥಿರತೆಯಿಂದ ಸಾಗಿದೆ. ಮೂಲಭೂತ ಸೌಕರ್ಯ, ಆಸ್ತಿ ನಿರ್ಮಿಸುವ ನಿಟ್ಟಿನಲ್ಲಿ ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಮೊತ್ತವು ವಾಜಪೇಯಿ ಅವರ ಕಾಲದಲ್ಲಿ ಶೇ 31 ರಷ್ಟಿತ್ತು. ಕಾಂಗ್ರೆಸ್ ಕಾಲದಲ್ಲಿ ಅದು ಕೇವಲ ಶೇ 16ಕ್ಕೆ ಇಳಿಯಿತು. ಮೋದೀಜಿ ಕಾಲದಲ್ಲಿ ಮತ್ತೆ ಶೇ 28ಕ್ಕೆ ಏರಿಕೆ ಕಂಡಿತು ಎಂದು ಮಾಹಿತಿ ನೀಡಿದರು. ಕಾಂಗ್ರೆಸ್ ಅವಧಿಯಲ್ಲಿ ಮೂಲಭೂತ ಸೌಕರ್ಯಕ್ಕೆ ಕಡಿವಾಣ ಹಾಕಿರುವುದು ಎದ್ದು ಕಾಣುವಂತಿದೆ, ಈ ಎಲ್ಲ ವಿಚಾರಗಳಿಗೆ ಕಾಂಗ್ರೆಸ್ಸಿನವರಲ್ಲಿ ಉತ್ತರ ಇಲ್ಲ ಎಂದು ಟೀಕಿಸಿದರು.

ಸಾಮಾಜಿಕ ಕ್ಷೇತ್ರದಲ್ಲಿ 96 ಸಾವಿರ ಕೋಟಿ ಮೊತ್ತ ಖರ್ಚಾಗದೆ ಉಳಿದಿತ್ತು. ಅದು ಅಸಮರ್ಥ ಆಡಳಿತಕ್ಕೆ ಕೈಗನ್ನಡಿ ಎಂದು ದೂರಿದ ಅವರು, 60-65 ವರ್ಷಗಳ ಕಾಂಗ್ರೆಸ್- ಯುಪಿಎ ಅವಧಿಯಲ್ಲಿ 14.5 ಕೋಟಿ ಎಲ್‍ಪಿಜಿ ಸಿಲಿಂಡರ್ ಸಂಪರ್ಕ ಇದ್ದುದು ಈಗ 31 ಕೋಟಿಗೂ ಹೆಚ್ಚಾಗಿದೆ. ವಿದ್ಯುದ್ದೀಕರಣ ಅವರ ಕಾಲದಲ್ಲಿ ಶೇ 85 ಇದ್ದುದನ್ನು ಈಗ ಶೇ 100ಕ್ಕೆ ತರಲಾಗಿದೆ. ಅವರ ಕಾಲದಲ್ಲಿ 12 ಗಂಟೆ ಸರಾಸರಿ ವಿದ್ಯುತ್ ಲಭ್ಯವಿದ್ದರೆ, ಈಗ 20 ಗಂಟೆಗೂ ಹೆಚ್ಚು ಕಾಲ ಲಭ್ಯತೆ ಇದೆ ಎಂದು ಅಂಕಿ-ಅಂಶಗಳನ್ನು ನೀಡಿದರು.

ಇದನ್ನೂ ಓದಿ | Parliament Session: ಲೋಕಸಭೆಯಲ್ಲಿ ಪ್ರತಿಧ್ವನಿಸಿದ UPA ಅವಧಿಯ ಕಲ್ಲಿದ್ದಲು ಹಗರಣ

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಲವಿಕಾ ಅವಿನಾಶ್, ಮಾಧ್ಯಮ ವಕ್ತಾರ ವೆಂಕಟೇಶ್ ಅವರು ಈ ಸಂದರ್ಭದಲ್ಲಿ ಇದ್ದರು.

Exit mobile version