Site icon Vistara News

Dr D Veerendra Heggade : ಸೌಜನ್ಯ ಪ್ರಕರಣದಲ್ಲಿ ಮೌನ ಮುರಿದ ಡಾ. ಹೆಗ್ಗಡೆ; ವೈಯಕ್ತಿಕ ನಿಂದನೆ ನಿಲ್ಲಿಸಿ ಎಂದು ಎಚ್ಚರಿಕೆ

Dr D Veerendra Heggade

ಮಂಗಳೂರು: ಸೌಜನ್ಯ ಸಾವಿನ ಪ್ರಕರಣಕ್ಕೆ (Sowjanya death case) ಸಿಬಿಐ ತನಿಖೆಗೆ (CBI Investigation) ಒಪ್ಪಿಸಿ ಎಂದು ಮೊದಲು ಹೇಳಿದ್ದೇ ನಾನು. ಹಾಗಿರುವಾಗ ಈ ಪ್ರಕರಣದಲ್ಲಿ ಕ್ಷೇತ್ರದ ವತಿಯಿಂದ ರಕ್ಷಣೆ ಮಾಡಲಾಗುತ್ತಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ (Shree Kshetra Dharmasthala) ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ (Dr. D Veerendra Heggade) ಸ್ಪಷ್ಟಪಡಿಸಿದ್ದಾರೆ. ಅದೇ ಹೊತ್ತಿಗೆ ವೈಯಕ್ತಿಕವಾಗಿ ಅಪಮಾನ ಮಾಡುವುದನ್ನು ಸಹಿಸಲಾಗದು, ಅದನ್ನು ನಿಲ್ಲಿಸಲೇಬೇಕು ಎಂಬ ಎಚ್ಚರಿಕೆಪೂರ್ವಕ ಸಂದೇಶ ನೀಡಿದ್ದಾರೆ.

11 ವರ್ಷಗಳ ಹಿಂದೆ ನಡೆದ ಸೌಜನ್ಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಸಿಬಿಐ, ಈ ಕೇಸಿನಲ್ಲಿ ಪೊಲೀಸರು ಆರೋಪಿ ಎಂದು ಗುರುತಿಸಿದ್ದ ಸಂತೋಷ್‌ ರಾವ್‌ನನ್ನು ದೋಷಮುಕ್ತಗೊಳಿಸಿತ್ತು. ಪೊಲೀಸರು ಗುರುತಿಸಿದ್ದ ಆರೋಪಿ ಕೊಲೆಗಾರ ಅಥವಾ ಅತ್ಯಾಚಾರಿ ಅಲ್ಲ ಎಂದಾದರೆ ಸೌಜನ್ಯಗಳನ್ನು ಕೊಲೆ ಮಾಡಿದ್ದು ಯಾರು ಎನ್ನುವ ಪ್ರಶ್ನೆಯೊಂದಿಗೆ ಕೆಲವರು ಮತ್ತೆ ಧರ್ಮಸ್ಥಳದ ಆಡಳಿತ ವ್ಯವಸ್ಥೆಯನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ. ಈ ಹಂತದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರು ಮಾತನಾಡಿದ್ದಾರೆ.

ಶ್ರೀ ಕ್ಷೇತ್ರದ ಧರ್ಮಸ್ಥಳದ ಎಲ್ಲ ವಿಭಾಗಗಳ ವಿಭಾಗೀಯ ಮುಖ್ಯಸ್ಥರ ಸಭೆ ನಡೆಸಿದ ಡಾ. ವೀರೇಂದ್ರ ಹೆಗ್ಗಡೆ ಅವರು ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾತನಾಡಿದರು. ಕೆಲವರು ಕ್ಷೇತ್ರದ ಬಗ್ಗೆ ದೋಷಾರೋಪ ಮಾಡುತ್ತಿದ್ದಾರೆ. ಹಾಗಿದ್ದರೂ ಹೆಗ್ಗಡೆಯವರು ಯಾಕೆ ಮಾತನಾಡುತ್ತಿಲ್ಲ ಎಂಬ ಸಂಶಯ ನಿಮಗಿರಬಹುದು. ಅದನ್ನು ನಿವಾರಣೆ ಮಾಡುವುದಕ್ಕಾಗಿ ನಾನು ನಿಮ್ಮ ಬಳಿ ಮಾತನಾಡುತ್ತಿದ್ದೇನೆ. ಅವರು ಮಾಡುವ ಆರೋಪಗಳಿಗೆ ನಾವು ಉತ್ತರ ಕೊಡುತ್ತಾ ಹೋದರೆ ಸಂಭಾಷಣೆ ಬೆಳೆಯುತ್ತಲೇ ಹೋಗುತ್ತದೆ ಬಿಟ್ಟು ಬೇರೇನೂ ಆಗುವುದಿಲ್ಲ. ಹೀಗಾಗಿ ಉತ್ತರ ಕೊಟ್ಟಿಲ್ಲ. ನಿಮ್ಮ ಮುಂದೆ ಹೇಳುತ್ತಿದ್ದೇನೆ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದ್ದೇನು?

  1. ಕ್ಷೇತ್ರದಲ್ಲಿ 60 ವರ್ಷಗಳಲ್ಲಿ ಬಹಳ ಬದಲಾವಣೆ ಆಗಿದೆ, ಹಲವು ಸೇವೆ ಮಾಡಿಕೊಂಡು ಬಂದಿದ್ದೇವೆ. ಜನರಿಗೆ ಇದರಿಂದ ಲಾಭ ಆಗಿದೆ. ಒಳ್ಳೆಯ ಕೆಲಸ ಅನ್ನೋದು ಎರಡು ರೀತಿಯ ಕತ್ತಿ ಇದ್ದ ಹಾಗೆ. ಅದು ಎರಡೂ ಕಡೆಯಿಂದ ಕೊಯ್ತದೆ, ಪ್ರಚಾರದ ದೃಷ್ಟಿಯಲ್ಲಿ ಒಳ್ಳೆಯದು ಹಾಗೂ ದ್ವೇಷ ಕೂಡ ಉಂಟು ಮಾಡುತ್ತದೆ.
  2. ನಮಗೆ ಕೋಟ್ಯಾಂತರ ಅಭಿಮಾನಿಗಳ ಬಳಗ ಇದೆ. ಕೆಲವರಿಗೆ ಇದರಿಂದ ಮತ್ಸರ ಉಂಟಾಗುತ್ತದೆ. ಕೆಲವರಿಗೆ ದ್ವೇಷಕ್ಕೆ ಕಾರಣವಾಗಿದೆ. ಅವರ ದ್ವೇಷ ಮತ್ತು ಅಸೂಯೆಗೆ ಕಾರಣ ಧರ್ಮಸ್ಥಳದ ಹೆಸರಲ್ಲಿ ಒಳ್ಳೆಯ ಕೆಲಸ ಆಗುತ್ತಿದೆ ಎನ್ನುವುದು.
  3. ಕ್ಷೇತ್ರದ ಸಂಪತ್ತನ್ನು ಹೇಗೆ ಬಳಸ್ತೀವಿ ಅನ್ನುವುದರ ಮೇಲೆ ಅದರ ಪರಿಣಾಮ ಇದೆ.
  4. ಈಗ ಅವರು ಮಾತನಾಡುವ ವಿಷಯಗಳಿಗೂ (ಸೌಜನ್ಯ ಸಾವು) ನಮಗೂ ಸಂಬಂಧವೇ ಇಲ್ಲ. ಈ ವಿಚಾರದಲ್ಲಿ ತನಿಖೆ ಮಾಡಲು ಮೊದಲು ಸರ್ಕಾರಕ್ಕೆ ಮೊದಲು ಪತ್ರ ಬರೆದಿದ್ದೇ ನಾನು. ಸಿಬಿಐಗೆ ಒಪ್ಪಿಸಿ ಅಂತ ಮುಖ್ಯಮಂತ್ರಿಗಳಿಗೆ ಹೇಳಿದ್ದು ನಾನೇ. ಮತ್ತಷ್ಟು ತನಿಖೆ, ಸಂಶೋಧನೆ ಮಾಡಲಿ ಅದರಿಂದ ನಮಗೆ ತೊಂದರೆ ಇಲ್ಲ.
  5. ಈ ವಿಷಯದಲ್ಲಿ ಕ್ಷೇತ್ರದ ಹೆಸರನ್ನು ಯಾಕೆ ಎಳೆದು ತರುತ್ತಾರೆ ಎಂದು ಗೊತ್ತಾಗುತ್ತಿಲ್ಲ. ಇದರ ಹಿಂದೆ ಅಮಾಯಕ ಹುಡುಗಿಯ ಸಾವಿನ ವಿಚಾರ ಇಲ್ಲ, ಕ್ಷೇತ್ರಕ್ಕೆ ಅಪಮಾನ ಮಾಡಬೇಕು, ತೊಂದರೆ ಮಾಡಬೇಕು ಎಂಬ ವಿಚಾರ ಇದೆ.
  6. ಈ ರೀತಿಯ ಆಪಾದನೆಗಳಿಗೆ ಸಂಬಂಧಿಸಿ ನನಗೆ ಯಾವುದೇ ಭಯ, ಸಂಕೋಚ ಹಾಗೂ ಸಂದೇಹ ಇಲ್ಲ. ಆದರೆ ಶತ್ರುತ್ವಕ್ಕೆ ಕಾರಣ ಏನು ಅನ್ನೋದೇ ನಮಗೆ ಇರುವ ಸಮಸ್ಯೆ.
  7. ನಮ್ಮ ಸಿಬ್ಬಂದಿಗಳಿಗೆ ಈ ಸತ್ಯ ಗೊತ್ತಿರಬಹುದು. ಆದರೆ, ನಾವು ಯಾಕೆ ಸುಮ್ಮನಿದ್ದೇವೆ ಎನ್ನುವ ಪ್ರಶ್ನೆ ನಮ್ಮ ಸಿಬ್ಬಂದಿಗಳಿಗೆ ಇರಬಹುದು. ನಾವು ಸುಮ್ಮನಿರೋದು ಸಂಭಾಷಣೆ ಆರಂಭವಾಗಬಾರದು ಅಂತ. ಅವರೇನೋ ಹೇಳುತ್ತಾರೆ ಅಂತ ನಾವು ಉತ್ತರ ಕೊಡುತ್ತಾ ಹೋದರೆ ಮಾತಷ್ಟೇ ಬೆಳೆಯುತ್ತಾ ಹೋಗುತ್ತದೆ.
  8. ಅನೇಕರು ಬಂದು ನನ್ನನ್ನು ಭೇಟಿಯಾಗಿ ಕಣ್ಣೀರು ಹಾಕುತ್ತಿದ್ದಾರೆ. ನಿಮಗೆ ಹೀಗಾದರೆ ಹೇಗೆ ತಡೆಯೋದು ಅಂತ. ಇಂಥ ಸಂದರ್ಭದಲ್ಲೇ ನಮಗೆ ನಮ್ಮವರು ಯಾರು, ಅನ್ಯರು ಯಾರು ಎನ್ನುವುದು ಗೊತ್ತಾಗುವುದು. ಪ್ರೀತಿ ಯಾರಿಗಿದೆ ಮತ್ತು ದ್ವೇಷ ಯಾರಿಗಿದೆ ಅಂತ ಗೊತ್ತಾಗುತ್ತಿದೆ.
  9. ನಮ್ಮ ಆತ್ಮ ಮತ್ತು ವ್ಯವಹಾರ ಎಲ್ಲವೂ ಸ್ವಚ್ಛವಾಗಿದೆ. ಹಾಗಾಗಿ ನಾವು ಯಾವುದೇ ರೀತಿಯಲ್ಲೂ ಬೇಸರ ಮಾಡುವ ಪ್ರಶ್ನೆಯಿಲ್ಲ.

ಇದು ಮಧ್ಯದಲ್ಲಿ ಬಂದ ಮೋಡವಷ್ಟೇ, ಸರಿದು ಹೋಗುತ್ತದೆ

ಇವತ್ತು ಧರ್ಮಸ್ಥಳದಲ್ಲಿ ಎಲ್ಲವೂ ಸರಿಯಾದ ರೀತಿಯಲ್ಲಿ ನಡೆಯುತ್ತಿದೆ, ಒಳ್ಳೆಯ ಹೆಸರು ಬರುತ್ತಿದೆ ಎಂಬ ಕಾರಣಕ್ಕಾಗಿ ಕೆಲವರು ಟಾರ್ಗೆಟ್‌ ಮಾಡುತ್ತಿದ್ದಾರೆ. ಆದರೆ, ಈ ಒಳ್ಳೆಯ ಕೆಲಸದ ಹಿಂದಿರುವುದು ನಾನಲ್ಲ. ನೀವು, ಈ ಕ್ಷೇತ್ರದ ಸಿಬ್ಬಂದಿ. ಹೀಗಾಗಿ ನೀವು ಯಾವುದೇ ರೀತಿಯಲ್ಲೂ ಬೇಸರ ಮಾಡಿಕೊಳ್ಳಬೇಕಾಗಿಲ್ಲ. ನೀವೆಲ್ಲ ನಿಮ್ಮ ವಿಭಾಗದ ಸಿಬ್ಬಂದಿಯನ್ನು ಕರೆದು ಗಟ್ಟಿಯಾಗಿ ಹೇಳಿ. ನಮ್ಮ ಒಳ್ಳೆಯ ಕಾರ್ಯಕ್ರಮಗಳು ಕೆಲವರ ಕಣ್ಣು ಕುಕ್ಕುತ್ತಿದೆ. ಈಗ ಸೂರ್ಯನಿಗೆ ಮೋಡ ಬಂದಂತೆ ಆಗಿದೆ. ಮೋಡ ದಾಟಿ ಹೋಗಬೇಕು, ಪರದೆ ತೆಗೆಯಬೇಕು. ಅದನ್ನು ದೇವರು ತೆಗೆಯುತ್ತಾನೆ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ವೈಯಕ್ತಿಕ ಅಪಮಾನ ಸರಿಯಲ್ಲ, ಆದರೆ, ಯಾರೂ ಸಂಯಮ ಮೀರಬೇಡಿ

ನನಗೆ ಯಾವ ಭಯವೂ ಇಲ್ಲ. ನಾನು ಯಾರಿಗೂ ಯಾವ ಅನ್ಯಾಯಕ್ಕೂ ಸಹಕಾರ ಕೊಟ್ಟಿಲ್ಲ, ಕೊಡುವುದೂ ಇಲ್ಲ ಎಂದು ಹೇಳಿದ ಡಾ. ಹೆಗ್ಗಡೆಯವರು, ನಿಮ್ಮ ಶಿಸ್ತು ಮತ್ತು ನಿಯಮ ಬಿಡಬೇಡಿ ಎಂದು ಸಿಬ್ಬಂದಿಗೆ ಮನವಿ ಮಾಡಿದರು.

ಹಾಗಂತ ವೈಯಕ್ತಿಕ ಅವಮಾನ ಮತ್ತು ನಿಂದನೆ ಸರಿಯಲ್ಲ, ಅದನ್ನು ಸಹಿಸಲಾಗದು, ಅದನ್ನು ನಿಲ್ಲಿಸಲೇಬೇಕು. ನಮ್ಮ ಅಭಿಮಾನಿಗಳು ಏನಾದರೂ ಮಾಡಲಿಕ್ಕೂ ಸಿದ್ಧರಿದ್ದಾರೆ. ಆದರೆ, ನಾನೇ ಏನೂ ಮಾಡಬೇಡಿ ಎಂಂದು ಹೇಳಿದ್ದೇನೆ. ನಮ್ಮ ನೈತಿಕ ಶಕ್ತಿ ದೊಡ್ಡದು. ಅದನ್ನೇ ಪ್ರದರ್ಶಿಸೋಣ ಎಂದು ಹೆಗ್ಗಡೆಯವರು ಹೇಳಿದರು.

ಇದನ್ನೂ ಓದಿ: Soujanya muder case : ಧರ್ಮಸ್ಥಳದ ಸೌಜನ್ಯ ಕೊಲೆ, ಅತ್ಯಾಚಾರ ಪ್ರಕರಣ; ಸಂತೋಷ್‌ ರಾವ್‌ ಖುಲಾಸೆ

Exit mobile version