ತುಮಕೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರಗಳೂ ಹೆಚ್ಚುತ್ತಿವೆ. ಈಗ ಮಾಜಿ ಉಪ ಮುಖ್ಯಮಂತ್ರಿ, ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ್ (Dr G Parameshwara) ಅವರ ಸರದಿಯಾಗಿದೆ. ಬಿಜೆಪಿ ವಿರುದ್ಧ ಹರಿಹಾಯ್ದಿರುವ ಅವರು, ತಮ್ಮ ವಿರುದ್ಧ ಸ್ಪರ್ಧೆ ಮಾಡಲು ಯಾರು ಬೇಕಾದರೂ ಬನ್ನಿ ಎಂದು ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಬನ್ರೋ ನನ್ ಮಕ್ಳಾ.. ಯಾರು ಬರ್ತೀರೋ ಬನ್ನಿ.. ಯಾವ ಮೀಸೇನೂ ಇಲ್ಲ.. ಗೀಸೇಗೂ ನಾನು ಹೆದರುವುದಿಲ್ಲ” ಎಂದು ಸವಾಲು ಹಾಕಿದ್ದಾರೆ.
ಕೊರಟಗೆರೆಯಲ್ಲಿ ಸೋಮವಾರ (ಮಾ. 13) ನಡೆದ ಒಕ್ಕಲಿಗ ಮುಖಂಡರ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವ ಮೀಸೇನೂ ಇಲ್ಲ, ಗೀಸೇಗೂ ನಾನು ಹೆದರುವುದಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಅನಿಲ್ ಕುಮಾರ್‌ಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Toll collection : ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರಿಗೆ ಬನ್ನಿ ಎಂದು ಸಾವಿರ ಜನ ಕರೆದರು. ಆದರೆ, ನಾನು ಕೊರಟಗೆರೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ತುಮಕೂರು ಸಂಸದರೇ ಕೊರಟಗೆರೆ ಕ್ಷೇತ್ರಕ್ಕೆ ನಿಮ್ಮ ಅಭಿವೃದ್ಧಿಯ ಕಾಣಿಕೆ ಏನು? ನೀವು ಮಾಡಿದ ಕೆಲಸದ ಬಗ್ಗೆ ಲೆಕ್ಕ ಕೊಡಿ. ಕೊರಟಗೆರೆ ಕ್ಷೇತ್ರದಲ್ಲಿ ನೀವು ಮಾಡಿರುವ ಅಭಿವೃದ್ಧಿಯ ಒಂದು ಕಾಮಗಾರಿಯನ್ನು ತೋರಿಸಿ, ಚುನಾವಣಾ ಪ್ರಚಾರಕ್ಕೆ ಬನ್ನಿ. ಪ್ರಧಾನಿ ನರೇಂದ್ರ ಮೋದಿಯ ಹೆಸರಲ್ಲಿ ಮತ ಕೇಳುತ್ತೀರಾ? ನೀವು ಅಭಿವೃದ್ಧಿಯ ಕೆಲಸವನ್ನೇ ಮಾಡಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.