Site icon Vistara News

Karnataka Election: ಕಲ್ಲೇಟಿನಿಂದ ಗಾಯಗೊಂಡಿದ್ದ ಪರಮೇಶ್ವರ್‌ ಚೇತರಿಕೆ; ಡ್ರಾಮಾ ಎಂದ ಎಚ್‌ಡಿಕೆ

Dr G Parameshwara recovers from stone injury, H D Kumaraswamy calls it drama

ತುಮಕೂರು: ಚುನಾವಣಾ ಪ್ರಚಾರದ (Karnataka Election) ವೇಳೆ ಕಲ್ಲೆಸೆತದಿಂದ ಗಾಯಗೊಂಡಿದ್ದ ಕೊರಟಗೆರೆ ಕ್ಷೇತ್ರದ ಶಾಸಕ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು ಚೇತರಿಕೆಯಾಗಿದ್ದು, ವೈದ್ಯರು ಒಂದು ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಮತ್ತೊಂದೆಡೆ ಕಲ್ಲೆಸೆತ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು, ಇದೆಲ್ಲ ಡ್ರಾಮಾ ಎಂದು ಟೀಕಿಸಿದ್ದಾರೆ. ಇದಕ್ಕೆ ಕಿಡಿಕಾರಿರುವ ಪರಮೇಶ್ವರ್‌, ಡ್ರಾಮಾ ಮಾಡಿ ಅವರಿಗೆ ಅಭ್ಯಾಸ ಇರಬೇಕು ವಾಗ್ದಾಳಿ ನಡೆಸಿದ್ದಾರೆ.

ಹೂವಿನಲ್ಲಿ ಕಲ್ಲು ಬಂದಿದ್ದಲ್ಲ, ಯಾರೋ ದುಷ್ಕರ್ಮಿಗಳು ಹಾಕಿದ್ದಾರೆ: ಪರಮೇಶ್ವರ್‌

ಯಾರೋ ದುಷ್ಕರ್ಮಿಗಳು ರಾಜಕೀಯ ಉದ್ದೇಶಕ್ಕೆ ಕಲ್ಲೆಸೆದಿದ್ದಾರೆ. ನಾನು 35 ವರ್ಷ ರಾಜಕೀಯ ಮಾಡಿದ್ದೇನೆ. ನನಗೆ ಶತ್ರುಗಳು ಕಡಿಮೆ. ನಾನು ಮಾಡಿರುವ ಕೆಲಸವನ್ನು ಜನರ ಮುಂದಿಟ್ಟು ಮತ ಕೇಳುತ್ತೇನೆ. ಒಂದು ವೇಳೆ ದ್ವೇಷವಿದ್ದರೆ ಈ ರೀತಿ ಮಾಡಲು ಹೋಗಬಾರದು. ಹೂವಿನಲ್ಲಿ ಕಲ್ಲು ಬಂದಿದ್ದಲ್ಲ. ಯಾರೋ ದುಷ್ಕರ್ಮಿಗಳು ಹಾಕಿದ್ದಾರೆ. ಈ ಬಗ್ಗೆ ತನಿಖೆ ಮಾಡುವಂತೆ ನಾನು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದೇನೆ ಎಂಬುವುದಾಗಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಕೊರಟಗೆರೆ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಕಲ್ಲೆಸೆತ ಪ್ರಕರಣದ ಬಗ್ಗೆ ತುಮಕೂರು ನಗರದ ಹೊರವಲಯದಲ್ಲಿರುವ ಸಿದ್ಧಾರ್ಥ ನಗರ ನಿವಾಸದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ | Karnataka Election 2023: ಚಿಕ್ಕಪೇಟೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಆರೋಪ; ಕೆಜಿಎಫ್ ಬಾಬುಗೆ ಚಿಕನ್ ಲೆಗ್ ಪೀಸ್ ಕೊಟ್ಟ ಉದಯ್‌ ಗರುಡಾಚಾರ್!‌

ಪರಮೇಶ್ವರ್ ಡ್ರಾಮಾ ಮಾಡುತ್ತಿದ್ದಾರೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡ್ರಾಮಾ ಮಾಡಿ ಅವರಿಗೆ ಅಭ್ಯಾಸ ಇರಬೇಕು. ಏಟು ತಿಂದವನು ನಾನು, ನೋವು ನನಗೆ ಗೊತ್ತು. ನನಗೆ ಡ್ರಮಾ ಮಾಡೋ ಅಗತ್ಯ ಇಲ್ಲ. ಜನರ ಮುಂದೆ ಹೋಗುತ್ತೇನೆ, ಅವರು ಏನು ಉತ್ತರ ಕೊಡುತ್ತಾರೋ ಅದನ್ನು ಸ್ವೀಕರಿಸುತ್ತೇನೆ. ನಾನು ಎರಡು ಬಾರಿ ಸೋತು, ನಾಲ್ಕು ಬಾರಿ ಗೆದ್ದಿದ್ದೇನೆ. ನಾನು ಸ್ಪೋರ್ಟ್ಸ್ ಮ್ಯಾನ್ ಆಗಿದ್ದವನು, ನನಗೆ ಸೋಲು ಗೆಲುವು ಎಲ್ಲಾ ಗೊತ್ತು, ಎಲ್ಲವನ್ನೂ ಅನುಭವಿಸಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ಕೊರಟಗೆರೆ ಕ್ಷೇತ್ರ ಭೈರೇನಹಳ್ಳಿ ಕ್ರಾಸ್ ಬಳಿ ಶುಕ್ರವಾರ ಸಂಜೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಸುಮಾರು 500-1000 ಜನರು ಜಮಾಯಿಸಿದ್ದರು. ಕಾರ್ಯಕರ್ತರು ನನ್ನನ್ನು ಹೆಗಲ ಮೇಲೆ ಎತ್ತಿಕೊಂಡು ಕುಣಿಯುತ್ತಿದ್ದರು. ಆ ಸಮಯದಲ್ಲಿ ಕೆಲವರು ನನ್ನ ಮೇಲೆ ಹೂವು ಎಸೆಯುತ್ತಿದ್ದರು. ಸಮಯದಲ್ಲಿ ನನ್ನ ತಲೆಗೆ ಏನೋ ಬಿದ್ದ ಹಾಗೆ ಆಯ್ತು. ಆಗ ನನಗೆ ಗೊತ್ತಾಗಲಿಲ್ಲ, ತಕ್ಷಣ ರಕ್ತ ಬರಲು ಶುರುವಾಯಿತು. ಅಲ್ಲಿಂದ ನನ್ನನ್ನು ಅಕ್ಕಿರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಗಾಯ ಒಂದೂವರೆ ಇಂಚು ಆಗಿದ್ದು, ಸರ್ಜಿಕಲ್ ಗಮ್ ಗ್ಲೂ ಹಾಕಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

1999ರಲ್ಲಿ ಚಾಕು ಇರಿಯುವ ಪ್ರಯತ್ನ ನಡೆದಿತ್ತು

1999ರಲ್ಲಿಯೂ ಈ ತರಹದ ಘಟನೆ ಆಗಿತ್ತು. ನನ್ನನ್ನು ಚಾಕುವಿನಿಂದ ಇರಿಯುವ ಪ್ರಯತ್ನ ನಡೆದಿತ್ತು. ಚುನಾವಣೆ ಗೆದ್ದ ಸಂಭ್ರಮದಲ್ಲಿದ್ದಾಗ ಇಂತಹ ಘಟನೆ ನಡೆದಿತ್ತು ಎಂದು ಹೇಳಿದ ಪರಮೇಶ್ವರ್‌ ಅವರು, ಕಲ್ಲೆಸೆತ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮಾಡಬೇಕು. ನಾವು ಊಹೆ ಮಾಡಿ ಅವರ ಮೇಲೆ ಇವರ ಮೇಲೆ ಹೇಳಲು ಆಗಲ್ಲ. ಎಲ್ಲರ ವಿಷಯದಲ್ಲೂ ಪ್ರತಿಕ್ರಿಯೆ ಇದ್ದೆ ಇರುತ್ತದೆ. ಯಾರೂ ಉದ್ವೇಗಕ್ಕೆ ಒಳಗಾಗಬಾರದು. ನನಗೆ ಭದ್ರತೆಯ ಅವಶ್ಯಕತೆ ಬೇಕು ಅಂತ ಅಂದುಕೊಂಡಿರಲಿಲ್ಲ. ಖಂಡಿತ ನನಗೆ ಯಾವುದೇ ಭಯವಿಲ್ಲ. ನನಗೆ ಯಾವುದೇ ತೊಂದರೆಯಾದರೂ ಎದುರಿಸುತ್ತೇನೆ ಎಂದು ತಿಳಿಸಿದರು.

ಇನ್ನೊಂದು ದಿನ ವಿಶ್ರಾಂತಿ ಪಡೆಯಲು ವೈದ್ಯರು ಹೇಳಿದ್ದಾರೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಖರ್ಗೆ ಸಾಹೇಬರು ಹಾಗೂ ನಮ್ಮೆಲ್ಲ ಸ್ನೇಹಿತರು ಕಾಲ್ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನನಗೆ ಯಾವುದೇ ಭಯವಿಲ್ಲ. ನಾನು ಆರೋಗ್ಯವಾಗಿದ್ದೇನೆ. ಭಾನುವಾರದಿಂದ ಚುನಾವಣಾ ಪ್ರಚಾರಕ್ಕೆ ತೆರಳುತ್ತೇನೆ ಎಂದು ಹೇಳಿದರು.

ಪೊಲೀಸ್‌ ಭದ್ರತೆ ಬೇಡ

ಮತದಾರರಲ್ಲಿ ನಾನು ಮನವಿ ಮಾಡುತ್ತೇನೆ. ನೀವು ಯಾವುದೇ ತೀರ್ಪು ಕೊಟ್ಟರೂ ನಾನು ಸ್ವೀಕಾರ ಮಾಡುತ್ತೇನೆ. ಕೊರಟಗೆರೆ ಕ್ಷೇತ್ರದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಯಬೇಕು ಅಷ್ಟೇ. ನನಗೆ ಯಾವುದೇ ಪೊಲೀಸ್ ಭದ್ರತೆ ಬೇಡ ಎಂದು ತಿಳಿಸಿದರು.

ಇದನ್ನೂ ಓದಿ | Karnataka Election: ಹಗರಿಬೊಮ್ಮನಹಳ್ಳಿಯಲ್ಲಿ ಸಿದ್ದರಾಮಯ್ಯ ಪ್ರಚಾರ; ಕಾರಿಗೆ ಮುಗಿಬಿದ್ದು, ಹೂ ಮಳೆಗೈದ ಕಾರ್ಯಕರ್ತರು

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ಏನು?

ಪರಮೇಶ್ವರ್‌ ಮೇಲೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು, ಇದೆಲ್ಲ ಡ್ರಾಮಾ. ಯಾರು ಕಲ್ಲು ಎಸೆದಿದ್ದಾರೆ ಎಂಬ ಬಗ್ಗೆ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಬೇಕು. ನಮ್ಮ ಪಕ್ಷದಲ್ಲಿ ಕಲ್ಲು ಹೊಡಿಯುವವರು ಯಾರೂ ಇಲ್ಲ. ಬಿಜೆಪಿಯವರು ಕಲ್ಲು ಹೊಡೆದಿದ್ದಾರಾ ಕೇಳಬೇಕು. ಪ್ರಚಾರದ ಮೆರವಣಿಗೆ ಭರಾಟೆಯಲ್ಲಿ ಧ್ವಜದ ಕಡ್ಡಿಯಿಂದ ಏಟಾಗಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ ಎಂದು ತಿಳಿಸಿದ್ದಾರೆ. ಮೆರವಣಿಗೆ ನೂಕು ನುಗ್ಗಲಿನಲ್ಲಿ ಗಾಯ ಆಗಿರಬಹುದು. ನಮಗೂ ಎಷ್ಟೋ ಸಲ ಆಗಿದೆ ಎಂದು ತಿಳಿಸಿದ್ದಾರೆ.

ಪರಮೇಶ್ವರ್‌ ಅವರಿಗೆ ಹೊಲಿಗೆ ಏನೂ ಹಾಕಿಲ್ಲ ಎನ್ನುತ್ತಿದ್ದಾರೆ. ಅದಕ್ಕೆ ರಕ್ತಸ್ರಾವವಾಗಿದೆ. ರಕ್ತ ಚಿಮ್ಮಿ ಬಿಟ್ಟಿದೆ ಎಂದು ಟಿವಿಯಲ್ಲಿ ಬಂತು. ಈ ಡ್ರಾಮಾಗಳು ರಾಷ್ಟ್ರೀಯ ಪಕ್ಷಗಳಿಂದ ನಡೆಯುತ್ತಿವೆ. ಸೋಲಿನ ಭೀತಿಯಿಂದ ಈ ರೀತಿ ಹೊಸ ನಾಟಕ ಸೃಷ್ಟಿ ಮಾಡುವುದರದಲ್ಲಿ ಎರರೂ ಪಕ್ಷಗಳು ಸ್ಪರ್ಧೆಗೆ ಇಳಿದಿವೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

Exit mobile version