ಬೆಂಗಳೂರು: ಡಾ.ಎಚ್.ಎ.ಪಾರ್ಶ್ವನಾಥ ಹಾಗೂ ಪ್ರೇಮಾ ಭಟ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ನೀಡುವ 2023ನೇ ಸಾಲಿನ ಅಭಯಲಕ್ಷ್ಮಿ ದತ್ತಿನಿಧಿ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿಯು 10 ಸಾವಿರ ರೂಪಾಯಿ ನಗದು, ಫಲ ತಾಂಬೂಲ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಇಬ್ಬರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕುರಿತು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಪ್ರಕಟಣೆ ತಿಳಿಸಿದ್ದಾರೆ.
ಪಿ. ಅಭಯಕುಮಾರ್ ಅವರು ತಮ್ಮ ಪತಿ ದಿ. ಎಸ್.ಎ.ಅಭಯಕುಮಾರ್ ಅವರ ಪುಣ್ಯಸ್ಮರಣಾರ್ಥ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ʻಅಭಯಲಕ್ಷ್ಮಿ ದತ್ತಿನಿಧಿʼ ಹೆಸರಿನಲ್ಲಿ ವಿಶೇಷ ದತ್ತಿ ನಿಧಿಯನ್ನು ಸ್ಥಾಪಿಸಿ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರದ ಮೂಲಕ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸುತ್ತಿರುವ ಇಬ್ಬರನ್ನು ಗುರುತಿಸಿ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತದೆ.
2023ನೇ ಸಾಲಿನ ʻಅಭಯಲಕ್ಷ್ಮಿ ದತ್ತಿನಿಧಿʼ ಪ್ರಶಸ್ತಿಗಾಗಿ ರಂಗಭೂಮಿ ಕ್ಷೇತ್ರದಿಂದ ಡಾ.ಎಚ್. ಎ. ಪಾರ್ಶ್ವನಾಥ ಹಾಗೂ ಸಾಹಿತ್ಯ ಕ್ಷೇತ್ರದಿಂದ ಪ್ರೇಮಾ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿ ಕನ್ನಡ ನಾಡು ನುಡಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗಣ್ಯರನ್ನು ಗುರುತಿಸಿ ದತ್ತಿ ದಾನಿಗಳ ಆಶಯಕ್ಕೆ ಯಾವುದೇ ಚ್ಯುತಿಯಾಗದ ರೀತಿಯಲ್ಲಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂದು ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: Padma Awards : ಪದ್ಮ ಪ್ರಶಸ್ತಿಗಳಿಗೆ ಅರ್ಹರನ್ನು ನೀವೂ ಶಿಫಾರಸು ಮಾಡಿ! ಸೆಪ್ಟೆಂಬರ್ 15 ಕೊನೆ ದಿನ
ಡಾ. ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ದತ್ತಿ ದಾನಿಗಳಾದ ಜಯಲಕ್ಷ್ಮಿ ಅಭಯಕುಮಾರ್, ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ.ಪಟೇಲ್ ಪಾಂಡು ಇದ್ದರು.