Site icon Vistara News

Dr K Kasturirangan : ಖ್ಯಾತ ವಿಜ್ಞಾನಿ ಕಸ್ತೂರಿರಂಗನ್‌ಗೆ ಹೃದಯಾಘಾತ; ಲಂಕಾದಿಂದ ಬೆಂಗಳೂರಿಗೆ ಏರ್‌ಲಿಫ್ಟ್‌

Kasturi rangan suffers heart attack

ಬೆಂಗಳೂರು: ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಒಂಬತ್ತು ವರ್ಷಗಳ ಕಾಲ ಇಸ್ರೋ ಅಧ್ಯಕ್ಷರಾಗಿದ್ದ ಡಾ. ಕೆ. ಕಸ್ತೂರಿರಂಗನ್‌ (Dr K Kasturirangan) ಅವರಿಗೆ ಹೃದಯಾಘಾತವಾಗಿದೆ (Heart attack). ಪ್ರಸಕ್ತ ಅವರು ಶ್ರೀಲಂಕಾದಲ್ಲಿದ್ದು, ಅಲ್ಲಿಂದ ಚಿಕಿತ್ಸೆಗಾಗಿ ಬೆಂಗಳೂರಿಗೆ ಏರ್‌ಲಿಫ್ಟ್‌ (Airlift from Srilanka) ಮಾಡಲಾಗುತ್ತಿದೆ.

82 ವರ್ಷದ ಡಾ, ಕೃಷ್ಣಸ್ವಾಮಿ ಕಸ್ತೂರಿರಂಗನ್‌ ಅವರು ಅಧ್ಯಯನ ಸಂಬಂಧ ಶ್ರೀಲಂಕಾ ಪ್ರವಾಸದಲ್ಲಿದ್ದು, ಅಲ್ಲಿ ಹೃದಯಾಘಾತ ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರಸಕ್ತ ಅವರಿಗೆ ಅಲ್ಲಿನ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಏರ್‌ಲಿಫ್ಟ್‌ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೊಲಂಬೋದಿಂದ ಹೊರಟಿರುವ ವಿಶೇಷ ವಿಮಾನ ಸಂಜೆ 5.30ರ ಹೊತ್ತಿಗೆ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಅಲ್ಲಿಂದ ಅವರನ್ನು ಬೆಂಗಳೂರಿನ ಪ್ರಮುಖ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದು ತಿಳಿದುಬಂದಿದೆ. ಕಸ್ತೂರಿರಂಗನ್‌ ಅವರು ಪಶ್ಚಿಮ ಘಟ್ಟ ಅಧ್ಯಯನ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ನಿರೂಪಕ ಸಮಿತಿ ಅಧ್ಯಕ್ಷರಾಗಿ ವರದಿ ಸಲ್ಲಿಸಿ ಗಮನ ಸೆಳೆದಿದ್ದಾರೆ.

ಕಸ್ತೂರಿರಂಗನ್‌ ಅವರನ್ನು ಕೂಡಲೇ ಏರ್‌ಲಿಫ್ಟ್‌ ಮಾಡಿ ಬೆಂಗಳೂರಿಗೆ ಕರೆ ತಂದು ತುರ್ತು ಚಿಕಿತ್ಸೆ ನೀಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಸಾಧಕ ಬಾಹ್ಯಾಕಾಶ ತಂತ್ರಜ್ಞ, ಸಮಾಜ ವಿಜ್ಞಾನಿ ಕೆ. ಕಸ್ತೂರಿರಂಗನ್

1940ರ ಅಕ್ಟೋಬರ್‌ 24ರಂದು ಕೇರಳದ ಎರ್ನಾಕುಲಂನಲ್ಲಿ ಜನಿಸಿದ ಕೆ. ಕಸ್ತೂರಿರಂಗನ್‌ ಅವರು ಅವರು ಬಾಹ್ಯಾಕಾಶ ವಿಜ್ಞಾನಿಯಾಗಿದ್ದು ಬಹಳಷ್ಟು ಸಾಧನೆ ಮಾಡಿದ್ದಾರೆ. 1994ರಿಂದ 2003ರವರೆಗೆ ಭಾರತೀಯ ಬಾಹ್ಯಾಕಾ ಶ ಸಂಸ್ಥೆ (ISRO) ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಕಾಲದಲ್ಲಿ ಇಸ್ರೊ ಹೊಸ ಎತ್ತರಕ್ಕೇರಿತ್ತು.

2003ರಲ್ಲಿ ಇಸ್ರೋದಿಂದ ನಿವೃತ್ತರಾದ ಬಳಿಕವೂ ಸಾಮಾಜಿಕ ಮತ್ತು ಶೈಕ್ಷಣಿಕ ಜೀವನದಲ್ಲೂ ಕಸ್ತೂರಿರಂಗನ್‌ ಅವರು ಸಕ್ರಿಯರಾಗಿದ್ದಾರೆ. ಅವರು ಪ್ರಸಕ್ತ ರಾಜಸ್ಥಾನದ ಸೆಂಟ್ರಲ್‌ ಯುನಿವರ್ಸಿಟಿ ಮತ್ತು ಎನ್‌ಐಐಟಿ ಯುನಿವರ್ಸಿಟಿಯ ಕುಲಪತಿಗಳಾಗಿದ್ದಾರೆ.

ದಿಲ್ಲಿಯ ಪ್ರತಿಷ್ಠಿತ ಜವಾಹರಲಾಲ್‌ ಯುನಿವರ್ಸಿಟಿ (ಜೆಎನ್‌ಯು) ಕುಲಪತಿಗಳಾಗಿದ್ದ ಅವರು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರೂ ಆಗಿದ್ದರು. 2003-2009ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಅವರು, ಹಿಂದಿನ ಯೋಜನಾ ಆಯೋಗ (ಈಗ ನೀತಿ ಆಯೋಗ)ದ ಸದಸ್ಯರಾಗಿದ್ದರು. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಡಾ. ಕಸ್ತೂರಿರಂಗನ್ ಅವರು ೨೦೦೩ ರ ಆಗಸ್ಟ್ ೨೭ ರಂದು ತಮ್ಮ ಅಧಿಕಾರ ಮುಕ್ತಾಯಗೊಳ್ಳುವ ಮುನ್ನ ೯ ವರ್ಷಗಳಿಗೂ ಹೆಚ್ಚು ಕಾಲ ಇಸ್ರೋ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ಭಾರತ ಸರ್ಕಾರಕ್ಕೆ ಕಾರ್ಯದರ್ಶಿಯಾಗಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ನಿರ್ದೇಶನಕ್ಕೆ ಜವಾಬ್ದಾರಿಯಾಗಿದ್ದರು. ಈ ಹಿಂದೆ ಅವರು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿದ್ದರು ಮತ್ತು ಆಧುನಿಕ ಯುಗದ ಬಾಹ್ಯಾಕಾಶ ನೌಕೆ, ಭಾರತೀಯ ರಾಷ್ಟ್ರೀಯ ಉಪಗ್ರಹ (ಇನ್ಸಾಟ್-೨) ಮತ್ತು ಭಾರತೀಯ ದೂರ ಗ್ರಾಹಿಉಪಗ್ರಹಗಳು (ಐಆರ್ಎಸ್-೧ಎ ಮತ್ತು ೧ಬಿ) ಜೊತೆಗೆ ವೈಜ್ಞಾನಿಕ ಉಪಗ್ರಹಗಳ ಅಭಿವೃದ್ದಿಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಇವರು ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣೆಯ ಉಪಗ್ರಹಗಳಾದ ಭಾಸ್ಕರ-I ಮತ್ತು II ರ ಯೋಜನಾ ನಿರ್ದೇಶಕರಾಗಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಸೂತ್ರದಾರ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿ -2020ರ ನೀತಿ ನಿರೂಪಕರು ಕೃಷ್ಣಸ್ವಾಮಿ ಕಸ್ತೂರಿರಂಗನ್‌. ಅವರ ನೇತೃತ್ವದ ಸಮಿತಿ ರಚಿಸಿದ ವರದಿಯನ್ನು 2019ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. 2020ರಲ್ಲಿ ಕೇಂದ್ರ ಸಂಪುಟ ಅದಕ್ಕೆ ಒಪ್ಪಿಗೆ ನೀಡಿ ರಾಷ್ಟ್ರಾದ್ಯಂತ ಜಾರಿಗೆ ತೀರ್ಮಾನ ಮಾಡಿತ್ತು. ಕೌಶಲಾಧರಿತ ಮತ್ತು ಉದ್ಯೋಗಧರಿತ ಶಿಕ್ಷಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಒತ್ತು ನೀಡಿದೆ.

ಪಶ್ಚಿಮ ಘಟ್ಟ ಅಧ್ಯಯನ ಸಮಿತಿಯ ಅಧ್ಯಕ್ಷ

ಕೃಷ್ಣ ಸ್ವಾಮಿ ಕಸ್ತೂರಿ ರಂಗನ್‌ ಅವರು ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಹರಡಿರುವ ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರದ ರಕ್ಷಣೆಯ ನಿಟ್ಟಿನಲ್ಲಿ ಅಧ್ಯಯನಕ್ಕೆ ನಿಯೋಜಿಸಲಾದ ಸಮಿತಿಯ ಅಧ್ಯಕ್ಷರಾಗಿದ್ದರು. ಅವರು ಸಲ್ಲಿಸಿದ ವರದಿಯ ಆಧಾರದಲ್ಲಿ ರಾಜ್ಯ ಸರ್ಕಾರಗಳು ಕಾಡಿನ ರಕ್ಷಣೆಗೆ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿವೆ.

ಇದನ್ನೂ ಓದಿ: Heart Attack: ಹೃದಯಾಘಾತಕ್ಕೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಬಲಿ, ಏನು ಕಾರಣ?

Exit mobile version