Site icon Vistara News

Karnataka Election Result: ‘ನಿಮ್ಮವ, ನಿಮ್ಮ ಪ್ರೀತಿಯ ಮನೆ ಮಗ’; ಸೋತ ಬಳಿಕ ಪತ್ರ ಬರೆದ ಸಿಟಿ ರವಿ, ಸುಧಾಕರ್​

DR k Sudhakar And CT Ravi Write A Letter in Social Media After Their loss in Karnataka Election

#image_title

ಬೆಂಗಳೂರು: ಈ ಸಲ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election)ಯಲ್ಲಿ ಸೋತ ಬಿಜೆಪಿ ಪ್ರಭಾವಿ ನಾಯಕರಾದ ಸಿ.ಟಿ.ರವಿ, ಡಾ. ಕೆ.ಸುಧಾಕರ್ (CT Ravi And K sudhakar) ಅವರು ಮಾಧ್ಯಮಗಳ ಎದುರು ಇನ್ನೂ ಬಂದಿಲ್ಲ. ಮಾತಿಗೆ ಸಿಕ್ಕಿಲ್ಲ. ತಾವಿದ್ದಲ್ಲಿಂದಲೇ ಒಂದು ಪತ್ರ ಬರೆದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಮ್ಮನ್ನು ಬೆಂಬಲಿಸಿದವರಿಗೆ, ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇತ್ತೀಚೆಗೆ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಿ.ಟಿ.ರವಿ ಅವರು ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಂದರೆ ತಮ್ಮ ಭದ್ರಕೋಟೆಯಲ್ಲಿ ಕಾಂಗ್ರೆಸ್​ನ ಎಚ್​.ಡಿ.ತಮ್ಮಯ್ಯ ವಿರುದ್ಧ ಸೋತಿದ್ದಾರೆ. ಈ ಎಚ್​.ಡಿ.ತಮ್ಮಯ್ಯ ಮೊದಲು ಬಿಜೆಪಿಯಲ್ಲೇ ಇದ್ದು ಸಿಟಿ ರವಿ ಆಪ್ತರಾಗಿದ್ದವರು. ಆದರೆ ಮುನಿಸಿಕೊಂಡು ಕಾಂಗ್ರೆಸ್​ಗೆ ಹೋಗಿ, ಗೆದ್ದಿದ್ದಾರೆ.

ಸೋತಿರುವ ಸಿ.ಟಿ.ರವಿಯವರು ತಮ್ಮ ಬೆಂಬಲಿಗರಿಗೆ ಪತ್ರವೊಂದನ್ನು ಬರೆದಿದ್ದಾರೆ. ‘ಚಿಕ್ಕಮಗಳೂರಿನ ಜನರು ನೀಡಿರುವ ಜನಾದೇಶಕ್ಕೆ ತಲೆಬಾಗುತ್ತೇನೆ. ಇದು ಸಿದ್ಧಾಂತದ ಸೋಲಲ್ಲ. ವೈಯಕ್ತಿಕವಾದ ಸೋಲು. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಗೆದ್ದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಹಿಂದೆ ನನಗೆ ಸಿಕ್ಕ ಅಲ್ಪ ಸಮಯದಲ್ಲೇ ಚಿಕ್ಕಮಗಳೂರಿಗೆ ಹಲವಾರು ಅಭಿವೃದ್ಧಿ ಕಾಮಗಾರಿ ತಂದಿದ್ದೇನೆ. ಅದನ್ನು ಈಗಿನವರು ಮುಂದುವರಿಸಿಕೊಂಡು ಹೋಗಲಿ ಎಂದು ಆಶಿಸುತ್ತೇನೆ’ ಎಂದು ಹೇಳಿದ್ದಾರೆ. ಹಾಗೇ, ಮತನೀಡಿದವರಿಗೆ, ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಪತ್ರವನ್ನು ಫೇಸ್​ಬುಕ್ ಪೋಸ್ಟ್​ನಲ್ಲಿ ಹಂಚಿಕೊಂಡ ಅವರು ‘ಆತ್ಮೀಯ ನನ್ನ ಚಿಕ್ಕಮಗಳೂರಿನ ಮತದಾರ ಬಂಧುಗಳೆ ಕಳೆದ 20 ವರ್ಷದಿಂದ ನನ್ನನ್ನು ಆಯ್ಕೆ ಮಾಡಿ ಗೆಲ್ಲಿಸಿದ್ದಾಕ್ಕಾಗಿ ನಿಮಗೆ ಚಿರಋಣಿ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ ಅದರಂತೆ ಸಮಚಿತ್ತದಿಂದ ಸೋಲನ್ನು ಸ್ವೀಕರಿಸಿದ್ದೇನೆ. ಕಾರ್ಯಕರ್ತರು ಧೃತಿಗೆಡದೆ ಮತ್ತೊಮ್ಮೆ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಶ್ರಮಿಸೋಣ’ ಎಂದಿದ್ದಾರೆ. ‘ಕೊನೆಯಲ್ಲಿ ನಿಮ್ಮವ ಸಿಟಿ ರವಿ’ ಎಂದು ಹಾಕಿದ್ದಾರೆ.

ಡಾ. ಸುಧಾಕರ್ ಬರೆದ ಪತ್ರದಲ್ಲಿ ಏನಿದೆ?

ಚಿಕ್ಕಬಳ್ಳಾಪುರದ ನನ್ನ ಪ್ರೀತಿಯ ಬಂಧುಗಳೇ, ಕಳೆದ ಹತ್ತು ವರ್ಷಗಳಿಂದ ಚಿಕ್ಕಬಳ್ಳಾಪುರದ ಜನಪ್ರತಿನಿಧಿಯಾಗಿ, ನಿಮ್ಮೆಲ್ಲರ ಮನೆ ಮಗನಾಗಿ, ಸಹೋದರನಾಗಿ ನಿಮ್ಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಚಿಕ್ಕಬಳ್ಳಾಪುರದ ಅಭಿವೃದ್ಧಿಗಾಗಿ ನಾನು ಪಟ್ಟ ಶ್ರಮದ ಬಗ್ಗೆ, ನನ್ನ ಬದ್ಧತೆಯ ಬಗ್ಗೆ, ನನ್ನ ಕೆಲಸದ ಬಗ್ಗೆ ನನಗೆ ಸಂಪೂರ್ಣ ಆತ್ಮ ತೃಪ್ತಿಯಿದೆ. ಆದರೂ ಎಲ್ಲೋ ಒಂದು ಕಡೆ ತಮ್ಮ ನಿರೀಕ್ಷೆಯನ್ನು ತಲುಪಲು ನನ್ನಿಂದ ಸಾಧ್ಯವಾಗಲಿಲ್ಲ ಅನ್ನಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು. ನಿಮ್ಮ ತೀರ್ಪನ್ನು ನಾನು ತಲೆಬಾಗಿ ಸ್ವೀಕರಿಸುತ್ತೇನೆ. ಕಳೆದ ಹತ್ತು ವರ್ಷಗಳಲ್ಲಿ ನನಗೆ ಎಲ್ಲ ರೀತಿಯ ಬೆಂಬಲ, ಸಹಕಾರ ನೀಡಿ ನನ್ನನ್ನು ಆಶೀರ್ವದಿಸಿದ ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನೆಂದೂ ಚಿರಋಣಿ’ ಎಂದಿದ್ದಾರೆ.

ಅನೇಕ ವರ್ಷಗಳಿಂದ, ಅದರಲ್ಲೂ ವಿಶೇಷವಾಗಿ ಕೋವಿಡ್ ಕಾಲದಿಂದ ಆರಂಭವಾಗಿ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಕಳೆದ 3-4 ವರ್ಷಗಳಿಂದ ನನ್ನ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗಿರಲಿಲ್ಲ. ಇನ್ನು ಸ್ವಲ್ಪ ದಿನಗಳ ಕಾಲ ನನ್ನ ಕುಟುಂಬ, ಮಕ್ಕಳೊಂದಿಗೆ ಸಮಯ ಕಳೆದು ನಂತರ ಎಂದಿನಂತೆ ಚಿಕ್ಕಬಳ್ಳಾಪುರದ ಸೇವೆಗೆ ಮರಳುತ್ತೇನೆ. ವೈಯಕ್ತಿಕವಾಗಿ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಅಳಿಲು ಸೇವೆ ಮುಂದುವರೆಸುತ್ತೇನೆ.

ಈ ಬಾರಿಯ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದ ಶಾಸಕರಾಗಿ ನೀವು ಆಯ್ಕೆ ಮಾಡಿರುವ ಪ್ರದೀಪ್ ಈಶ್ವರ್ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ ಹತ್ತು ವರ್ಷಗಳಿಂದ ಬಹಳ ಶ್ರಮ ಪಟ್ಟು, ಅನೇಕ ಸವಾಲುಗಳನ್ನು ಎದುರಿಸಿ, ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕೆಲಸ ಮಾಡಿದ್ದೇನೆ. ನೂತನ ಶಾಸಕರು ಚಿಕ್ಕಬಳ್ಳಾಪುರದ ಈ ಅಭಿವೃದ್ಧಿ ರಥವನ್ನು ಹಳಿ ತಪ್ಪಿಸದೆ ಇನ್ನಷ್ಟು ಮುಂದೆ ಕೊಂಡೊಯ್ಯಲಿದ್ದಾರೆ ಎಂದು ಆಶಿಸುತ್ತೇನೆ’ ಎಂದು ಸುಧಾಕರ್ ಅವರು ಬರೆದುಕೊಂಡಿದ್ದು, ಕೊನೆಯಲ್ಲಿ ‘ನಿಮ್ಮ ಮನೆ ಮಗ’ ಎಂದು ಉಲ್ಲೇಖಿಸಿದ್ದಾರೆ. ಸುಧಾಕರ್​ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ವಿರುದ್ಧ ಸೋತಿದ್ದಾರೆ.

ಇದನ್ನೂ ಓದಿ: Karnataka Election 2023: ಬಿಜೆಪಿಯಲ್ಲಿ ಸಿಎಂ ಕುರ್ಚಿ ಚರ್ಚೆ; ಜನ ಇಷ್ಟಪಟ್ಟಾಗ ಮುಖ್ಯಮಂತ್ರಿಯಾಗುವೆ ಎಂದ ಸಿ ಟಿ ರವಿ

Exit mobile version