Site icon Vistara News

Dr K Sudhakar : ತಾಕತ್ತಿದ್ದರೆ ನಂದಿಗೆ ಬಂದು ದೀಪ ಹಚ್ಚು ನೋಡೋಣ; ಪ್ರದೀಪ್‌ ಈಶ್ವರ್‌ಗೆ ಸುಧಾಕರ್‌ ಸವಾಲು

Pradeep Eshwar Dr K Sudhakar

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದ ವಿಧಾನಸಭೆಯಲ್ಲಿ (Chikkaballapura Assembly Constituency) ಸೋಲು ಕಂಡ ಮಾಜಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ (Dr K Sudhakar) ಮತ್ತು ಗೆದ್ದಿರುವ ಪ್ರದೀಪ್‌ ಈಶ್ವರ್‌ (Pradeep Eshwar) ನಡುವೆ ಜಿದ್ದಾಜಿದ್ದಿ ಏರ್ಪಡುವ ಲಕ್ಷಣ ಕಾಣಿಸಿಕೊಂಡಿದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪ್ರದೀಪ್‌ ಈಶ್ವರ್‌ ಅವರು ಸುಧಾಕರ್‌ ಅವರನ್ನು ಹಲವು ಬಾರಿ ಕೆಣಕಿದ್ದರು. ಇದೀಗ ಅವರೂ ತಿರುಗೇಟು ನೀಡಿದ್ದಾರೆ. ಮನೆ ನಿವೇಶನಗಳ ವಿಚಾರದಲ್ಲಿ ಡಾ. ಸುಧಾಕರ್‌ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳುತ್ತಿರುವ ಪ್ರದೀಪ್‌ ಈಶ್ವರ್‌ ನಂದಿ ದೇವಸ್ಥಾನದಲ್ಲಿ (Nandi temple) ಬಂದು ದೀಪ ಹಚ್ಚಲಿ ಎಂದು ಮಾಜಿ ಸಚಿವರು ಸವಾಲು ಹಾಕಿದ್ದಾರೆ.

ಸೋಮವಾರ ಚಿಕ್ಕಬಳ್ಳಾಪುರ ನಗರದ ಗೃಹ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಡಾ. ಕೆ. ಸುಧಾಕರ್‌ ಅವರು ವಸತಿ ಯೋಜನೆಗಳ ಬಗ್ಗೆ ಅಭಿಯಾನ ಮಾಡುತ್ತಿರುವ ಹಾಲಿ ಶಾಸಕ ಪ್ರದೀಪ್‌ ಈಶ್ವರ್‌ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಜತೆಗೆ ಇನ್ನು ಪ್ರತಿದಿನ ಚಿಕ್ಕಬಳ್ಳಾಪುರದ ಜನರ ಕಷ್ಟ ಸುಖ ಕೇಳಲು ಲಭ್ಯರಿರುವುದಾಗಿ ತಿಳಿಸಿದರು.

ʻʻವಸತಿ ಯೋಜನೆಗಳ ಬಗ್ಗೆ ಹೊಸ ಶಾಸಕರು ಅಭಿಯಾನ ಮಾಡುತ್ತಿದ್ದಾರೆ. ಇಡಿ ರಾಜ್ಯದಲ್ಲಿ 20 ಸಾವಿರ ಸೈಟ್ ಕೊಡೋ ಕೆಲಸ ಯಾರಾದರೂ ಮಾಡಿದ್ದರೆ ತಿಳಿಸಲಿ. ಆ ಕೆಲಸ ನಾನು ಮಾಡಿದ್ದೇನೆ. ಸುಳ್ಳು ನಿವೇಶನಗಳನ್ನು ಕೊಡುತ್ತಿದ್ದಾರೆ ಎಂದ ಎಂದು ಸುಳ್ಳು ಪ್ರಚಾರ ಮಾತನಾಡುತ್ತಿದ್ದಾರೆ. ಅವರಿಗೆ ಹಕ್ಕುಪತ್ರ ಯಾವುದು ಮಂಜೂರಾತಿ ಪತ್ರ ಯಾವುದೆಂದು ಗೊತ್ತಿಲ್ಲ‌ʼʼ ಎಂದು ಹೇಳಿದ ಡಾ. ಕೆ. ಸುಧಾಕರ್‌ ಅವರು ʻʻಕೇವಲ ಸಿನಿಮಾ ಡೈಲಾಗ್ ಹೊಡೆದು ಗೆದ್ದಬಿಟ್ಟರೆ ಸಾಕಾʼʼ ಎಂದು ಚುಚ್ಚಿದ್ದಾರೆ.

ʻʻನಾನು ಹಕ್ಕುಪತ್ರಗಳಲ್ಲಿ ಸುಳ್ಳು ಭರವಸೆ ನೀಡಿದ್ದೇನೆ ಎಂದು ಆರೋಪಿಸಲಾಗುತ್ತಿದೆ. ಒಂದೊಮ್ಮೆ ನಾನು ಸುಳ್ಳು ಭರವಸೆ ನೀಡಿದ್ದೇನೆ ಎಂದೇ ಅವರು ಹೇಳುವುದಿದ್ದರೆ ನಾನು ಸುಳ್ಳು ಹೇಳಿದ್ದಲ್ಲ ಎಂದು ನಂದಿ ದೇವಸ್ಥಾನದಲ್ಲಿ ದೀಪ ಹಚ್ಚುತ್ತೇನೆ. ತಾಕತ್ತಿದ್ದರೆ ಅದು ಸುಳ್ಳು ಎಂದು ದೀಪ ಹಚ್ಚು ನೋಡೋ‌ಣʼʼ ಎಂದು ಸುಧಾಕರ್‌ ಸವಾಲು ಹಾಕಿದರು. ಅದರ ಬೆನ್ನಿಗೇ ʻಹಚ್ಚಿದ್ರೂ ಹಚ್ಚಬಹುದು ಗಿರಾಕಿ!ʼ ಎಂದರು.

ರಾಜಕಾರಣ ಬಿಡಿ, ಅಭಿವೃದ್ಧಿ ಮಾಡಿ; ಡಾ. ಎಂ.ಸಿ ಸುಧಾಕರ್‌ಗೂ ಚಾಟಿ

ದ್ವೇಷ ರಾಜಕಾರಣ ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ. ವಿಧಾನಮಂಡಲ ಅಧಿವೇಶನದಲ್ಲಿ ಈ ಜಿಲ್ಲೆಯ ಬಗ್ಗೆ ಗಮನ ಸೆಳೆಯಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ ಸುಧಾಕರ್ ಅವರಿಗೂ ಕಿವಿಮಾತು ಹೇಳಿದರು ಮಾಜಿ ಸಚಿವ ಡಾ ಕೆ ಸುಧಾಕರ್‌.

ಚಿಕ್ಕಬಳ್ಳಾಪುರದ ಮೆಡಿಕಲ್‌ ಕಾಲೇಜನ್ನು ಮತ್ತೊಮ್ಮೆ ಸಿದ್ಧರಾಮಯ್ಯ ಅವರ ಕೈಯಲ್ಲಿ ಉದ್ಘಾಟನೆ ಮಾಡಿಸುವ ಡಾ.ಎಂ.ಸಿ. ಸುಧಾಕರ್‌ ಪ್ಲ್ಯಾನ್‌ ಬಗ್ಗೆ ಕಿಡಿಕಾರಿದ ಅವರು, ಮೊದಲು ಕಟ್ಟಡ ನಿರ್ಮಾಣದ ಬಗ್ಗೆ ಗಮನ ಹರಿಸಿ. ಬಳಿಕ ಅವರವರ ಚಪಲಕ್ಕೆ ಉದ್ಘಾಟನೆ ಮಾಡ್ತಾರೋ ಮಾಡಲಿ ಎಂದರು.

ʻʻಜಿಲ್ಲೆಯಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಕಟ್ಟಡಗಳನ್ನು ಉದ್ಘಾಟನೆ ಮಾಡಿ. ಬೋರ್ಡ್ ಗಳಲ್ಲಿ ಬೇಗ ಬೇಗ ನಿಮ್ಮ ಹೆಸರುಗಳನ್ನು ಹಾಕಿಸಿಕೊಳ್ಳಿʼʼ ಎಂದು ಶಾಸಕ ಪ್ರದೀಪ್ ಈಶ್ವರ್ ಹಾಗು ಉಸ್ತುವಾರಿ ಸಚಿವರಿ ಎಂ.ಸಿ. ಸುಧಾಕರ್‌ಗೆ ಪರೋಕ್ಷವಾಗಿ ಚಾಟಿ ಬೀಸಿದರು ಮಾಜಿ ಸಚಿವ ಡಾ ಕೆ ಸುಧಾಕರ್. ʻʻನಾವು ಸೋತಿದ್ದೇವೆ, ಸತ್ತಿಲ್ಲʼʼ ಎಂದು ಪರೋಕ್ಷವಾಗಿ ಎಚ್ಚರಿಸಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಈಗ ಮಾತನಾಡಲ್ಲ ಎಂದ ಸುಧಾಕರ್‌

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ನಾನು ಇನ್ನೂ ಮಾತನಾಡಿಲ್ಲ. ಇನ್ನೂ ಆರು ತಿಂಗಳು ಸಮಯ ಕೊಟ್ಟು ಆಮೇಲೆ ಮಾತನಾಡುತ್ತೇನೆ ಎಂದು ಹೇಳಿದರು ಸುಧಾಕರ್‌.

ಬಿಜೆಪಿ ಇನ್ನೂ ವಿರೋದ ಪಕ್ಷದ ನಾಯಕನನ್ನೇ ಆಯ್ಕೆ ಮಾಡಿಲ್ಲವಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿ, ನಾಳೆ ಪ್ರೆಶ್ ಆಗಿ ನಮ್ಮ ವಿರೋದ ಪಕ್ಷದ ನಾಯಕರು ಬರ್ತಾರೆ. ನಾನು ಸಹ ನಿಮ್ಮಷ್ಟೇ ಕತೂಹಲದಿಂದ ಎದುರು ನೋಡ್ತಾ ಇದೇನೆ ಎಂದರು ಸುಧಾಕರ್‌.

ಎಂಟಿಬಿ ನಾಗರಾಜ್‌ ಹೇಳಿಕೆಗೆ ತಿರುಗೇಟು

ಸಚಿವರಾಗಿದ್ದ ಡಾ. ಕೆ ಸುಧಾಕರ್ ಅವರಿಂದಾಗಿ ನಾನು ಸೋತೆ ಎಂಬ ಎಂಟಿಬಿ ನಾಗರಾಜ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಾರ ಸೋಲಿಗೂ ಗೆಲುವಿಗೂ ಯಾರು ಕಾರಣರಲ್ಲ ಎಂದರು.

ಇದನ್ನೂ ಓದಿ: Pradeep Eshwar: ಮೆಂಟಲ್‌ ಮುನಿಸ್ವಾಮಿ ರೌಡಿಶೀಟರ್‌; ಮತ್ತೆ ಮುಗಿಬಿದ್ದ ಪ್ರದೀಪ್‌ ಈಶ್ವರ್‌

ಚಿಮುಲ್‌ ವಜಾ ಮಾಡಿದ್ದು ಸರಿಯಲ್ಲ ಎಂದ ಸುಧಾಕರ್‌

ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್)ವನ್ನು ವಜಾಗೊಳಿಸಿದ್ದಕ್ಕೆ ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದರು. ʻʻಸಿದ್ದರಾಮಯ್ಯ ಅವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ. ಆದರೆ ನಾವು ಸ್ಥಾಪಿಸಿದ್ದ ಚಿಮುಲ್ ಅನ್ನು ವಜಾ ಮಾಡಿರೋದು ಸರಿಯಲ್ಲ. ಚಿಮುಲ್ ಅನ್ನು ಮರು ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆʼʼ ಎಂದು ಹೇಳಿದರು.

Exit mobile version