Site icon Vistara News

AB-ARK | ಡಿಸೆಂಬರ್ ವೇಳೆಗೆ ರಾಜ್ಯದ ಶೇ.50 ಅರ್ಹರಿಗೆ ಆಯುಷ್ಮಾನ್ ಕಾರ್ಡ್‌ ನೀಡುವ ಗುರಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌

Tipu Sultan issue I know former Prime Minister Deve Gowda Dont know who was Urigowda Nanjegowda say Dr Sudhakar

ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್‌ ವೇಳೆಗೆ ಶೇ.50 ರಷ್ಟು ಅರ್ಹರಿಗೆ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು(AB-ARK) ವಿತರಿಸಲಾಗುವುದು. ಈ ನಿಟ್ಟಿನಲ್ಲಿ ಒಟ್ಟು 1 ಕೋಟಿ ಕಾರ್ಡ್‌ಗಳನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿ ೧ ಕೋಟಿ ಕಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ಆಯುಷ್ಮಾನ್‌ ಕಾರ್ಡ್‌ ವಿತರಣೆಯಲ್ಲಿ ಕರ್ನಾಟಕ ಇಡೀ ದೇಶದಲ್ಲಿಯೇ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಆಯುಷ್ಮಾನ್‌ ಕಾರ್ಡ್‌ಗಳನ್ನು ಎಲ್ಲಾ ಅರ್ಹರಿಗೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ | Medicine price | ಡಯಾಬಿಟಿಸ್‌ ನಿಯಂತ್ರಣಕ್ಕೆ ಬಳಸುವ ಔಷಧಗಳ ದರ ಶೀಘ್ರ ಇಳಿಕೆ

ಕಾರ್ಡ್‌ ವಿತರಣೆಯಲ್ಲಿ ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಅತ್ಯುತ್ತಮ ಸಾಧನೆ ತೋರಿದ್ದು, ಮೂರನೇ ಒಂದರಷ್ಟು ಫಲಾನುಭವಿಗಳನ್ನು ಈಗಾಗಲೇ ನೋಂದಣಿ ಮಾಡಲಾಗಿದೆ. ಆರೋಗ್ಯ ಇಲಾಖೆಯ ಕ್ಷೇತ್ರಾಧಿಕಾರಿಗಳು ಕಾರ್ಡ್‌ಗಳ ನೋಂದಣಿಗಾಗಿ ಯಶಸ್ವಿಯಾಗಿ ಅಭಿಯಾನ ನಡೆಸುತ್ತಿದ್ದಾರೆ. ನವೆಂಬರ್ 11ಕ್ಕೆ ಅಂತ್ಯಗೊಂಡಂತೆ, ೧ ಕೋಟಿ ಕಾರ್ಡ್‌ಗಳ ನೋಂದಣಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾ ಕುಷ್ಠರೋಗ ವಿಭಾಗದ ಅಧಿಕಾರಿಗಳ ಜಂಟಿ ಪ್ರಯತ್ನದಿಂದ ಇಂತಹ ಮಹತ್ವದ ಸಾಧನೆಯಾಗಿದೆ. ಡಿ.ಎಚ್.ಒಗಳು ಮತ್ತು ಡಿ.ಎಲ್.ಒಗಳು ಸಹ ನಿಯಮಿತವಾಗಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವಿವರಿಸಿದರು.

ಮುಂದಿನ ಮಾರ್ಚ್‌ಗೆ ಎಲ್ಲಾ ಅರ್ಹರಿಗೆ ಕಾರ್ಡ್‌
ಇಡಿಸಿಎಸ್ ವಿಭಾಗದ ನಿರಂತರ ಪ್ರಯತ್ನ ಶ್ಲಾಘನೀಯವಾಗಿದ್ದು, ಗ್ರಾಮ ಒನ್ ಕೇಂದ್ರಗಳಲ್ಲಿ ದೈನಂದಿನ ಗುರಿ ತಲುಪಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ದೊಡ್ಡ ಪ್ರಮಾಣದ ಶಿಬಿರಗಳನ್ನು ಕೂಡ ಆಯೋಜಿಸಲಾಗುತ್ತಿದೆ. ಅನೇಕ ತಾಂತ್ರಿಕ ಸಮಸ್ಯೆಗಳ ಹೊರತಾಗಿಯೂ ಆಪರೇಟರ್‌ಗಳು ಬೆಳಗ್ಗೆ 6 ರಿಂದ ರಾತ್ರಿ 11 ಗಂಟೆವರೆಗೆ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ನೋಂದಣಿ ಅಭಿಯಾನ ನಡೆಸುವ ಜತೆಗೆ ತಾಂತ್ರಿಕ ಅಡಚಣೆಗಳನ್ನು ಎನ್.ಎಚ್.ಎ ನೆರವಿನಿಂದ ಪರಿಹರಿಸಲಾಗುತ್ತಿದೆ. ಮುಂದಿನ ಮಾರ್ಚ್ ವೇಳೆಗೆ ಎಲ್ಲಾ ಅರ್ಹರಿಗೆ ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ (ಎ.ಬಿ-ಎ.ಆರ್.ಕೆ) ಕಾರ್ಡ್‌ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಎಲ್ಲರಿಗೂ ಆರೋಗ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2018ರ ಮಾರ್ಚ್ 2 ರಂದು ʼಆರೋಗ್ಯ ಕರ್ನಾಟಕʼ ಯೋಜನೆ ಪ್ರಾರಂಭಿಸಿತ್ತು. ಇದರಡಿ ಪ್ರಾಥಮಿಕ. ಮಾಧ್ಯಮಿಕ ಮತ್ತು ತೃತೀಯ ಹಂತದ ಆಸ್ಪತ್ರೆಗಳಲ್ಲಿ ಬಿಪಿಎಲ್ ಕುಟುಂಬದವರಿಗೆ ಒಂದು ವರ್ಷಕ್ಕೆ 2 ಲಕ್ಷ ರೂ. ಮತ್ತು ಎಪಿಎಲ್ ಕುಟುಂಬಗಳಿಗೆ ಶೇ.30 ರಷ್ಟು ಸಬ್ಸಿಡಿ ದರದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿತ್ತು. ಇದೇ ಸಮಯದಲ್ಲಿ ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ, ಎಲ್ಲರಿಗೂ ಆರೋಗ್ಯ ಸೌಲಭ್ಯ ಕಲ್ಪಿಸುವ [ಯೂನಿವರ್ಸಲ್ ಹೆಲ್ತ್ ಕವರೇಜ್] ಯೋಜನೆಯನ್ನು ಇದೇ ಗುರಿ ಮತ್ತು ಇದೇ ಉದ್ದೇಶದಿಂದ ಪ್ರಾರಂಭಿಸಿತು ಎಂದರು.

ರಾಷ್ಟ್ರೀಯ ಯೋಜನೆ ಹೆಚ್ಚಿನ ವ್ಯಾಪ್ತಿ ಹೊಂದಿದ್ದರಿಂದ ಮತ್ತು ಪ್ರಯೋಜನಕಾರಿಯಾಗಿದ್ದರಿಂದ ʼಆಯುಷ್ಮಾನ್ ಭಾರತ್‌- ಆರೋಗ್ಯ ಕರ್ನಾಟಕʼ ಎಂಬ ಹೆಸರಿನಡಿ ಯೋಜನೆಯನ್ನು ಜಾರಿ ತರಲಾಯಿತು. ಯೂನಿವರ್ಸಲ್ ಹೆಲ್ತ್ ಕವರೇಜ್ ಯೋಜನೆಯ ನೈಜ ಸ್ಫೂರ್ತಿಯೊಂದಿಗೆ ಈ ಯೋಜನೆ ಜಾರಿಗೊಳಿಸಲಾಗಿದ್ದು, ಎಲ್ಲಾ 5.09 ಕೋಟಿ ಅರ್ಹ ನಾಗರಿಕರಿಗೆ ಎಬಿ-ಪಿಎಂಜೆಎವೈ-ಎ.ಆರ್.ಕೆ ಕಾರ್ಡ್‌ಗಳನ್ನು ವಿತರಿಸಲಾಗುವುದು. ಎಬಿ-ಪಿಎಂಜೆಎವೈ ರಾಷ್ಟ್ರೀಯ ಯೋಜನೆಯಾಗಿದ್ದು, ಪ್ರತಿ ರಾಜ್ಯಗಳಲ್ಲೂ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಕೋ ಬ್ರಾಂಡೆಡ್ ಕಾರ್ಡ್‌ಗಳನ್ನು ಸೃಜಿಸುವ ಅಭಿಯಾನವನ್ನು ಸಹ ಆರಂಭಿಸಿವೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ | ರಕ್ಷಣಾ ವಲಯದ ಆತ್ಮನಿರ್ಭರತೆಗೆ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ನೀತಿ 2022-2027 ಸಹಕಾರಿ: ಸಚಿವ ಡಾ. ಸುಧಾಕರ್‌

Exit mobile version