Site icon Vistara News

Emergency Landing: ಹಾರಾಟದ ಮಧ್ಯೆ ಮಹಿಳೆ ಅಸ್ವಸ್ಥ; ವಿಮಾನದಲ್ಲೇ ಚಿಕಿತ್ಸೆ ನೀಡಿ ರಕ್ಷಿಸಿದ ಬೆಂಗಳೂರಿನ ಡಾಕ್ಟರ್‌

Dr. Nirantara Ganesh

#image_title

ಬೆಂಗಳೂರು: ಬೆಂಗಳೂರಿನಿಂದ ದಿಲ್ಲಿಗೆ ಹೋಗುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ (Indigo Airlines) ವಿಮಾನದಲ್ಲಿ ಪ್ರಯಾಣಿಕ ಮಹಿಳೆಯೊಬ್ಬರು ಅಸ್ವಸ್ಥರಾದಾಗ ವಿಮಾನದಲ್ಲಿದ್ದ ವೈದ್ಯರೊಬ್ಬರು ಸಕಾಲಿಕ ಚಿಕಿತ್ಸೆ ನೀಡಿ ಅವರನ್ನು ಅಪಾಯದಿಂದ ರಕ್ಷಿಸಿದ ಘಟನೆ ನಡೆದಿದೆ. ಈ ವಿಮಾನವನ್ನು ದಿಲ್ಲಿಯಲ್ಲಿ ತುರ್ತು ಭೂಸ್ಪರ್ಶ (Emergency landing) ಮಾಡಿಸಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು.

ಈ ಘಟನೆ ನಡೆದಿರುವುದು ಕಳೆದ ಬುಧವಾರ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Bangalore International airport) ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ (ಇಂಡಿಗೋ 6E 869) ರೋಸಮ್ಮ ಎಂಬ 60 ವರ್ಷದ ಮಹಿಳೆ ಹತ್ತಿದ್ದರು. ಮನೆಯಿಂದ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅವರು ಎಲ್ಲ ಭದ್ರತಾ ತಪಾಸಣೆಗಳ ಬಳಿಕ ಲಾಂಜ್‌ಗೆ ಬಂದು ಅಲ್ಲಿಂದ ಬಸ್ಸಿನ ಮೂಲಕ ವಿಮಾನದ ಬಳಿ ಬಂದು ಮೆಟ್ಟಿಲುಗಳನ್ನೇರಿ ವಿಮಾನ ಹತ್ತಿದ್ದರು.

ವಿಮಾನ ಬೆಂಗಳೂರಿನಿಂದ ದಿಲ್ಲಿಯತ್ತ ಹೊರಟು ರನ್‌ ವೇ ದಾಟಿ ಮೇಲೆ ಹಾರಿ ಸ್ವಲ್ಪ ಹೊತ್ತಾಗುತ್ತಿದ್ದಂತೆಯೇ ಇದ್ದಕ್ಕಿದ್ದಂತೆಯೇ ರೋಸಮ್ಮ ಅವರಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡಿತು. ಆಕೆ ಸಂಕಟಪಡುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಎಲ್ಲರ ಗಮನಕ್ಕೆ ತಂದರು.

ಆಗ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರು ಡಾ. ನಿರಂತರ ಗಣೇಶ್‌ (Dr. Nirantara Ganesh). ಅವರು ರೋಸಮ್ಮ ಅವರನ್ನು ಕೂಡಲೇ ಪರೀಕ್ಷಿಸಿದರು. ರೋಸಮ್ಮ ಅವರು ರಕ್ತದೊತ್ತಡ, ಮಧುಮೇಹದ ಸಮಸ್ಯೆ ಮೊದಲೇ ಇತ್ತು. ಅವರು ವಿಮಾನದಲ್ಲೇ ಪ್ರಜ್ಞಾಹೀನರಾಗಿದ್ದರು. ಪರೀಕ್ಷಿಸಿದಾಗ ನಾಡಿಮಿಡಿತ ಸಿಗಲಿಲ್ಲ, ಬಿಪಿ ದಾಖಲಾಗಲಿಲ್ಲ. ತಕ್ಷಣವೇ ಕಾರ್ಡಿಯೋಪಲ್ಮನರಿ ರೆಸುಸೈಟೇಷನ್‌ ಆರಂಭಿಸಲಾಯಿತು. ಈ ಹಂತದಲ್ಲಿ ಅವರು ಚೇತರಿಸಿಕೊಂಡರು. ಆದರೆ, ಒಮ್ಮಿಂದೊಮ್ಮೆಗೇ ವಾಂತಿ ಮಾಡಿಕೊಂಡರು. ಅವರಿಗೆ ಆಸ್ಪಿರಿನ್‌ ಮತ್ತು ಆಂಟಿಮೆಟಿಕ್ಸ್‌ ಔಷಧಗಳನ್ನು ಕೊಡಲಾಯಿತು.

ಅದೇ ಹೊತ್ತಿಗೆ ವಿಮಾನ ದಿಲ್ಲಿ ವಿಮಾನ ನಿಲ್ದಾಣದ ಹತ್ತಿರ ತಲುಪಿತ್ತು. ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಧ ಗಂಟೆ ಮೊದಲೇ ತುರ್ತು ಭೂಸ್ಪರ್ಶಕ್ಕೆ ಅವಕಾಶ ನೀಡಲಾಯಿತು.

ಕಂಟ್ರೋಲರ್‌ ಸೂಚನೆಯಂತೆ ವಿಮಾನ ತುರ್ತು ಭೂಸ್ಪರ್ಶ ಮಾಡಿತು. ಆಗ ಮೊದಲೇ ಸಿದ್ಧಪಡಿಸಿಡಲಾಗಿದ್ದ ಆಂಬ್ಯುಲೆನ್ಸ್‌ ಮೂಲಕ ರೋಸಮ್ಮ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ವಿಮಾನದಲ್ಲಿ ಮಹಿಳೆಯ ನೆರವಿಗೆ ನಿಂತು ಹೃದಯಾಘಾತದ ಆಘಾತದಿಂದ ಮುಕ್ತಿ ನೀಡಿದ ಡಾ. ನಿರಂತರ ಗಣೇಶ್‌ ಅವರು ಮೂಲತಃ ಒಬ್ಬ ಆರ್ಥೋಪೆಡಿಕ್‌ ಸರ್ಜನ್‌. ವೈದ್ಯಕೀಯ ಸೇವೆ ಮಾತ್ರವಲ್ಲ, ಸಮಾಜ ಸೇವೆಯ ತುಡಿತವನ್ನೂ ಹೊಂದಿದ್ದಾರೆ. ಅವರ ಈ ಮಾನವೀಯ ಕಳಕಳಿಯೇ ಅವರು ಕೂಡಲೇ ರೋಸಮ್ಮ ಅವರಿಗೆ ತುರ್ತು ಸೇವೆ ನೀಡಲು ಪ್ರೇರೇಪಿಸಿದೆ.

ರೋಸಮ್ಮ ಅವರು ತಮ್ಮ ಪತಿಯ ಜತೆಗೆ ದಿಲ್ಲಿಗೆ ಪ್ರಯಾಣ ಮಾಡುತ್ತಿದ್ದರು. ಅವರು ಅಸ್ವಸ್ಥರಾದ ವಿಷಯ ತಿಳಿಯುತ್ತಿದ್ದಂತೆಯೇ ವಿಮಾನ ಸಿಬ್ಬಂದಿ ಜತೆ ಸೇರಿ ತುರ್ತು ಚಿಕಿತ್ಸೆಯನ್ನು ನೀಡಲಾಯಿತು. ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದ ಅವರನ್ನು ಬದುಕಿಸಲು ಸಾಧ್ಯವಾಯಿತು ಎಂದಿದ್ದಾರೆ ಡಾ. ನಿರಂತರ ಗಣೇಶ್‌.

ಇದನ್ನೂ ಓದಿ : Viral Video: ಗುಜರಾತ್​​ ಮಳೆಯಲ್ಲಿ ಅಪಾಯಕ್ಕೆ ಸಿಲುಕಿದ್ದ ವಿದ್ಯಾರ್ಥಿನಿಯರ ರಕ್ಷಣೆ: ಹ್ಯಾಪಿ ವೀಕೆಂಡ್ ಎಂದ ಮುಂಬಯಿ ಮಂದಿ

Exit mobile version