ಬೆಂಗಳೂರು: ನಮೀಬಿಯಾದಿಂದ ಹತ್ತು ಗಂಟೆಗಳ ಪ್ರಯಾಣದ ನಂತರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಸಿವಂಗಿಗಳನ್ನು (ಚೀತಾ) ತಂದ ತಂಡದಲ್ಲಿ ಕನ್ನಡಿಗ, ಪುತ್ತೂರಿನ ಡಾ. ಸನತ್‌ಕೃಷ್ಣ ಮುಳಿಯ ಒಬ್ಬರು. ಅತ್ಯಂತ ಚಿಕ್ಕ ವಯಸ್ಸಿನಲ್ಲೆ, ಅತ್ಯಂತ ಹೊಣೆಗಾರಿಕೆಯ ಕಾರ್ಯ ನಿರ್ವಹಿಸುವ ಸನತ್‌ಕೃಷ್ಣ ಕುರಿತು ಅವರ ತಾಯಿ ಉಷಾರ ಅವರು ʼವಿಸ್ತಾರ ನ್ಯೂಸ್ʼ ಜತೆ ಮಾತನಾಡಿದ್ದಾರೆ.
ತಾಯಿ ಉಷಾ ಅವರಿಗೆ ಪುತ್ರನ ಸಾಧನೆ ಕುರಿತು ಅಪಾರ ಹೆಮ್ಮೆ. ಅದಕ್ಕಿಂತಲೂ ಹೆಚ್ಚಾಗಿ, ಮೂಕ ಪ್ರಾಣಿಗಳ ಕುರಿತು ಸನತ್‌ಕೃಷ್ಣ ಅವರು ಹೊಂದಿರುವ ಅಪಾರ ಪ್ರೀತಿಯ ಕುರಿತು ಮತ್ತೂ ಗೌರವವಿದೆ.
ʼಅವನಿಗೆ ಚಿಕ್ಕಂದಿನಿಂದಲೂ ಪ್ರಾಣಿಗಳು ಎಂದರೆ ಅಪಾರ ಪ್ರೀತಿ. ಇದೇ ಕಾರಣಕ್ಕೆ, ಹೆಚ್ಚಿನ ಸಂಬಳ ಸಿಗುತ್ತಿದ್ದ ಕೆಲಸವನ್ನು ಬಿಟ್ಟು ಕೇಂದ್ರ ಸರ್ಕಾರದ ನೌಕರಿಗೆ ಸೇರಿಕೊಂಡಿದ್ದಾನೆ. ಅವನು ಮನಸ್ಸು ಮಾಡಿದ್ದರೆ ಒಂದು ಕ್ಲಿನಿಕ್ ಇಟ್ಟುಕೊಂಡಿದ್ದರೂ ಲಕ್ಷಾಂತರ ರೂ. ಸಂಪಾದನೆ ಮಾಡಬಹುದಿತ್ತು. ಆದರೆ ಸೇವಾ ಮನೋಭಾವದಿಂದಾಗಿ, ಪ್ರೀತಿಯಿಂದ ಈ ಕೆಲಸ ಮಾಡುತ್ತಿದ್ದಾನೆʼ ಎಂದು ತಿಳಿಸುತ್ತಾರೆ ಉಷಾ.
2013ರಲ್ಲಿ ಹೆಗ್ಗಡದೇವನಕೋಟೆ ಪ್ರದೇಶದಲ್ಲಿ ಐವರನ್ನು ಕೊಂದಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಆಗಿನ್ನೂ 24 ವರ್ಷದ ಸನತ್‌ಕೃಷ್ಣ ಕುರಿತು ತಾಯಿ ಉಷಾ ಸಂತೋಷದಿಂದ ನೆನೆಯುತ್ತಾರೆ. ʼಹುಲಿಯು ಅನೇಕರನ್ನು ಹತ್ಯೆ ಮಾಡಿತ್ತು. ಇದರಿಂದ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದರು. ಹುಲಿಯನ್ನು ಹತ್ಯೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿದ್ದರು. ಆತ್ಮೀಯರನ್ನು, ಕುಟುಂಬದವರನ್ನು ಕಳೆದುಕೊಂಡಿದ್ದ ಜನರು ಬೇಡಿಕೆ ಇಟ್ಟಿದ್ದರಲ್ಲೂ ತಪ್ಪಿರಲಿಲ್ಲ. ಇದೇ ಕಾರಣಕ್ಕೆ, ಹುಲಿಯನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲುವಂತೆ ಸರ್ಕಾರ ಆದೇಶಿಸಿತು. ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯುವ ಸವಾಲನ್ನು ಸ್ವೀಕರಿಸಿದ ಸನತ್, ಅದಕ್ಕೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದʼ ಎಂದು ತಾಯಿ ಉಷಾ ನೆನೆಯುತ್ತಾರೆ.
ನಾವೆಲ್ಲ ಮನುಷ್ಯರು ಹಣ, ಕಾಸು ಮಾಡಿಕೊಳ್ಳಬಹುದು, ಮಾತನಾಡಿ ನೋವನ್ನು ಹೇಳಿಕೊಳ್ಳಬಹುದು. ಆದರೆ ಮೂಕಪ್ರಾಣಿಗಳು ಅದ್ಯಾವುದನ್ನೂ ಕೇಳುವುದಿಲ್ಲ. ಅವುಗಳ ನೋವಿಗೆ ನಾವಾದರೂ ದನಿ ಆಗಬೇಕು ಎಂದು ಸನತ್‌ಕೃಷ್ಣ ಹೇಳುತ್ತಿರುವುದಾಗಿ ನೆನೆಯುವ ಉಷಾ ಅವರಿಗೆ, ಅತಿ ಕಿರಿಯ ವಯಸ್ಸಿನಲ್ಲೆ ಸಾಧನೆ ಮಾಡುತ್ತಿರುವ ಪುತ್ರನ ಕಾರ್ಯದ ಕುರಿತು ಮಾತುಮಾತಿಗೂ ಸಮ್ಮತಿ ಹಾಗೂ ಹೆಮ್ಮೆ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ | Cheetah In India | ಭಾರತಕ್ಕೆ 8 ಚೀತಾ ತರುವುದರ ಹಿಂದಿದೆ ಪುತ್ತೂರು ವೈದ್ಯ ಸನತ್‌ಕೃಷ್ಣ ಪರಿಶ್ರಮ!