Site icon Vistara News

S L Bhyrappa: 2024, 2029ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿಯೇ ಗೆಲ್ಲಲಿ: ಡಾ. ಎಸ್.ಎಲ್.ಭೈರಪ್ಪ

S L Bhyrappa

ಮೈಸೂರು: ʻʻಪದ್ಮಭೂಷಣ ಪ್ರಶಸ್ತಿ ಕೊಟ್ಟರೆಂಬ ಕಾರಣಕ್ಕೆ ಮೋದಿ ಸರ್ಕಾರವನ್ನು ಹೊಗಳುವುದಿಲ್ಲ. ನಾನು ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಆದರೆ, ರಾಜಕೀಯದ ಬಗ್ಗೆ ಓದಿಕೊಂಡಿದ್ದೇನೆ. ದೇಶದಲ್ಲಿ ಮೋದಿ ಸರ್ಕಾರದಂತಹ ಸರ್ಕಾರ ಇದುವರೆಗೆ ಬಂದಿರಲಿಲ್ಲ. ಹೀಗಾಗಿ 2024 ಹಾಗೂ 2029ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ಅವರು ಹೆಚ್ಚು ಬಹುಮತದಿಂದ ಗೆಲ್ಲಬೇಕುʼʼ ಎಂದು ಕಾದಂಬರಿಕಾರ ಡಾ.ಎಸ್‌.ಎಲ್.ಭೈರಪ್ಪ (S L Bhyrappa) ಹೇಳಿದ್ದಾರೆ.

ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದಲ್ಲಿ ಜಿಲ್ಲಾಡಳಿತ ವತಿಯಿಂದ ಡಾ.ಎಸ್.ಎಲ್.ಭೈರಪ್ಪ ಅವರನ್ನು ಗುರುವಾರ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಡಾ.ಎಸ್.ಎಲ್.ಭೈರಪ್ಪ ಅವರು, ತಮಗೆ ಪದ್ಮಭೂಷಣ ಪ್ರಶಸ್ತಿ ಬರಲು ಮೋದಿ ಅವರೇ ಕಾರಣ. ಸೇವೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸುವ ಧೈರ್ಯ ಇರುವಂಥವರು ಇದುವರೆಗೆ ಯಾರೂ ಬಂದಿರಲಿಲ್ಲ. ಹೀಗಾಗಿ ನರೇಂದ್ರ ಮೋದಿ ಅವರು ಮುಂದಿನ ಚುನಾವಣೆಗಳಲ್ಲಿ ಹೆಚ್ಚು ಬಹುಮತದಿಂದ ಗೆದ್ದು ನಂತರ ನಿವೃತ್ತಿಯಾಗಬೇಕು. ಅಲ್ಲಿಯವರೆಗೆ, ಅವರಂತೆಯೇ ಇರುವವರನ್ನು ತಯಾರು ಮಾಡಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Prajadhwani : ಚಾಮರಾಜನಗರ ಅಭಿವೃದ್ಧಿಗೆ ನರೇಂದ್ರ ಮೋದಿ ಕೊಡುಗೆ ಏನು?: ಪ್ರಶ್ನಿಸಿದ ಸಿದ್ದರಾಮಯ್ಯ

ವಿರೋಧ ಪಕ್ಷದಲ್ಲಿರುವವರು ಜವಾಬ್ದಾರಿ ಏನೆಂದು ತಿಳಿಯದೇ ಸದಾ ಬೈಗುಳದಲ್ಲಿ ತೊಡಗುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಬೈಗುಳ ಬಿಟ್ಟು ಅಧ್ಯಯನ ಮಾಡಿ, ಅಂಕಿ–ಅಂಶಗಳನ್ನು ಇಟ್ಟುಕೊಂಡು ಸರ್ಕಾರವು ಯಾವ್ಯಾವುದನ್ನು ಮಾಡಿಲ್ಲ ಎಂದು ತಿಳಿಸಬೇಕು. ಆಗ, ಉತ್ತಮ ಪ್ರಜಾಪ್ರಭುತ್ವ ಸಾಧ್ಯವಾಗುತ್ತದೆ. ಏಕರೂಪ ನಾಗರಿಕ ಸಂಹಿತೆಯನ್ನು ಖಂಡಿತವಾಗಿ ಜಾರಿಗೊಳಿಸಬೇಕು. ಎಲ್ಲ ಕಾನೂನು ಎಲ್ಲರಿಗೂ ಅನ್ವಯವಾಗುವಂತೆ ಮಾಡಬೇಕು. ಮತಕ್ಕಾಗಿ ಒಂದು ವರ್ಗದ ಓಲೈಕೆ ಸರಿಯಲ್ಲ ಎಂದು ಹೇಳಿದ್ದಾರೆ.

2002ರ ಗುಜರಾತ್‌ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರವಿತ್ತು ಎಂದು ಆರೋಪಿಸಿ ಬಿಬಿಸಿ ಹೊರತಂದಿರುವ ಸಾಕ್ಷ್ಯಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈಗ ಅದು ಹೊರಬಂದಿದ್ದೇಕೆ? ಜಿ–20 ಶೃಂಗಸಭೆಗೆ ಉತ್ತಮ ಅರ್ಥಶಾಸ್ತ್ರಜ್ಞರನ್ನು ಆಯ್ಕೆ ಮಾಡಿದ್ದನ್ನು ತಡೆಯಲಾಗದೇ ಇಂಥದ್ದೆಲ್ಲ ಶುರು ಮಾಡಿಕೊಂಡಿದ್ದಾರೆ. ಬಹಳ ಹಳೆಯದ್ದನ್ನೆಲ್ಲಾ ಈಗ ತೆಗೆದಿದ್ದಾರೆ ಎಂದರು.

Exit mobile version