Site icon Vistara News

ಅಡಕೆ ಅಕ್ರಮ ಆಮದಿಗೆ ಕಡಿವಾಣ ಹಾಕಿ: ಪ್ರಧಾನಿಗೆ ಡಾ. ವೀರೇಂದ್ರ ಹೆಗ್ಗಡೆ ಪತ್ರ

veerendra heggade letter to PM Modi

ಮಂಗಳೂರು: ವಿದೇಶಗಳಿಂದ ದೇಶಕ್ಕೆ ಅಕ್ರಮವಾಗಿ ಅಡಕೆ ಆಮದು ಆಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧರ್ಮಸ್ಥಳ ಧರ್ಮಾಧಿಕಾರಿ, ಕ್ಯಾಂಪ್ಕೋ ಅಡಕೆ ಹಾಗೂ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.

ದೇಶಕ್ಕೆ ಅಧಿಕೃತವಾಗಿ 24 ಸಾವಿರ ಟನ್ ಅಡಕೆ ಆಮದಾಗುತ್ತಿದೆ. ಅಡಕೆ ಅಕ್ರಮ ಕಳ್ಳ ಸಾಗಾಟ ಆಗುತ್ತಿದೆ ಎಂದು ಇತ್ತೀಚೆಗೆ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದರು. ಹಾಗಾಗಿ ಡಾ. ವೀರೇಂದ್ರ ಹೆಗ್ಗಡೆ ಅವರು ಪ್ರಧಾನಿಗೆ ಪತ್ರ ಬರೆದು ಅಡಕೆ ಬೆಳೆಗಾರರ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ.

ದೇಶದಲ್ಲಿ ಪ್ರತಿ ವರ್ಷ 15.63 ಟನ್‌ ಅಡಕೆ ಉತ್ಪಾದಿಸಲಾಗುತ್ತಿದೆ. ಅಡಕೆ ಬೆಳೆ ದೇಶದ 1.6 ಕೋಟಿ ರೈತರ ಜೀವನಾಧಾರವಾಗಿದೆ. ಅಡಕೆ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿದ್ದರೂ 24 ಸಾವಿರ ಟನ್‌ ಅಡಕೆಯನ್ನು ಕಾನೂನುಬದ್ಧವಾಗಿ ಆಮದುಮಾಡಿಕೊಳ್ಳಲಾಗುತ್ತಿದೆ. ಕ್ಯಾಂಪ್ಕೋ ಸಂಸ್ಥೆ ರೈತರ ಸಂಕಷ್ಟ ನಿವಾರಿಸಲು ಹುಟ್ಟಿದ ಸಂಸ್ಥೆಯಾಗಿದ್ದು, ರೈತರಿಂದ ಅಡಕೆ ಖರೀದಿಸಿ ಉತ್ತಮ ಬೆಲೆ ನೀಡುತ್ತಿದೆ ಎಂದಿದ್ದಾರೆ.

ಜಿಎಸ್‌ಟಿ ಹೇರಿಕೆ ಹಾಗೂ ಅಕ್ರಮ ಆಮದಿನಿಂದ ಅಡಕೆ ಬೆಲೆಯಲ್ಲಿ ಅಸ್ಥಿರತೆ ಉಂಟಾಗಿರುವುದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ತೆರಿಗೆ ರಹಿತವಾಗಿ ದೇಶಕ್ಕೆ ಆಮದಾಗುವ ಅಡಕೆಯಿಂದ ಸಮಸ್ಯೆ ಉಂಟಾಗುತ್ತಿರುವುದರಿಂದ ಪ್ರಧಾನಿ ತಕ್ಷಣ ಅಕ್ರಮ ಆಮದು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ಸರಕುಪಟ್ಟಿಯಲ್ಲಿ ಕಡಿಮೆ ದರವನ್ನು ನಮೂದಿಸಿ ಅಡಕೆ ಮಾರುವುದನ್ನು ತಡೆಯಬೇಕು. ದೇಶದ ಬಿಳಿ ಮತ್ತು ಕೆಂಪು ಅಡಕೆಗಳೆರಡರಲ್ಲೂ ಪರಿಣತರಾಗಿರುವ ಸಹಕಾರಿ ವಲಯದ ಸಮರ್ಥ ನೋಡಲ್‌ ಏಜೆನ್ಸಿ ಅಥವಾ ARDFನಂತಹ ಸರಕುಗಳ ಮೌಲ್ಯಮಾಪನ ಮತ್ತು ವರದಿ ನೀಡಲು ಗುರುತಿಸಬಹುದು. ಈ ಬಗ್ಗೆ ಪ್ರಧಾನಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸಚಿವಾಲಯಗಳಿಗೆ ಸೂಚಿಸಬೇಕು ಎಂದು ಹೆಗ್ಗಡೆಯವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | PM Cares : ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಆರೈಕೆಗೆ, ಪಿಎಂ ಕೇರ್ಸ್‌ ಯೋಜನೆಯ ಸೌಲಭ್ಯ ವಿತರಣೆ

Exit mobile version