ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಭಾಷಾ ಶಾಸ್ತ್ರಜ್ಞರಿಗಾಗಿ ಮೀಸಲಿಟ್ಟಿರುವ ʻಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ವಿದ್ವತ್ ಪ್ರಶಸ್ತಿʼ ಪ್ರಕಟಿಸಲಾಗಿದೆ. 2022ನೇ ಸಾಲಿನ ಪ್ರಶಸ್ತಿಗೆ ಹಿರಿಯ ಭಾಷಾ ಶಾಸ್ತ್ರಜ್ಞೆ ಮೈಸೂರಿನ ಡಾ. ವೈ. ಸಿ. ಭಾನುಮತಿ ಹಾಗೂ 2023ನೇ ಪ್ರಶಸ್ತಿಗೆ ಭಾಷಾಶಾಸ್ತ್ರಜ್ಞ ಪ್ರೊ. ಜಿ. ಅಶ್ವತ್ಥನಾರಾಯಣ ಅವರನ್ನು ಆಯ್ಕೆ ಮಾಡಲಾಗಿದೆ.
ಕನ್ನಡದ ಹಿರಿಯ ವಿದ್ವಾಂಸರಾದ ಡಾ. ಟಿ. ವಿ. ವೆಂಕಟಾಚಲಶಾಸ್ತ್ರಿ ಅವರ ಅಭಿಮಾನಿಗಳು ಹಾಗೂ ಅವರ ಬಂಧುಗಳು ಅವರ ಹೆಸರಿನಲ್ಲಿ ದತ್ತಿನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿದೆ. ಪ್ರಶಸ್ತಿಯು 10 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಹಳೆಗನ್ನಡ ಸಾಹಿತ್ಯ, ಛಂದಸ್ಸು, ವ್ಯಾಕರಣ, ನಿಘಂಟು ರಚನೆ, ಗ್ರಂಥ ಸಂಪಾದನೆ, ಅನುವಾದ, ಭಾಷಾ ಶಾಸ್ತ್ರ ಶಾಸ್ತ್ರಸಾಹಿತ್ಯ ಮೊದಲಾದ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿಗಳಿಗಾಗಿಯೇ ಈ ಪ್ರಶಸ್ತಿಯನ್ನು ದತ್ತಿ ದಾನಿಗಳು ಮೀಸಲಿಟ್ಟಿದ್ದಾರೆ.
ಇದನ್ನೂ ಓದಿ | ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಏಳು ಮಲ್ಲಿಗೆ ತೂಕದವಳು…
ಕಳೆದ 12 ವರ್ಷಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿಯನ್ನು ಭಾಷಾ ಶಾಸ್ತ್ರ ಕ್ಷೇತ್ರದ ಸಾಧಕರಿಗೆ ನೀಡುತ್ತಾ ಬಂದಿದೆ. ದಾನಿಗಳ ಮೂಲ ಉದ್ದೇಶದಂತೆ ಕರ್ನಾಟಕದಲ್ಲಿ ಕನ್ನಡ ಸಾರಸ್ವತಲೋಕದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿರುವ ಭಾಷಾಶಾಸ್ತ್ರಜ್ಞರನ್ನು ಗುರುತಿಸಿ ಡಾ. ಟಿ. ಬಿ. ವೆಂಕಟಾಚಲಶಾಸ್ತ್ರಿ ವಿದ್ವತ್ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಸಮಿತಿ ಆಯ್ಕೆ ಮಾಡಿದೆ.
ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಯಾವುದೇ ಕಾರ್ಯಕ್ರಮ ನಡೆಯದ ಹಿನ್ನೆಲೆಯಲ್ಲಿ ಎರಡು ಸಾಲಿನ ಪ್ರಶಸ್ತಿಯ ಪ್ರಕಟಣೆ ಬಾಕಿ ಇತ್ತು. ಪ್ರಸ್ತುತ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷ ಅವಧಿಯಲ್ಲಿ ಬಾಕಿ ಉಳಿದಿದ್ದ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ.
ಇದನ್ನೂ ಓದಿ | ರಾಜಮಾರ್ಗ ಅಂಕಣ: ನೇಪಾಳ ಸರಕಾರದ ದುರಾಸೆಗೆ ಬಲಿ ಆಗುತ್ತಿದೆ ದೇವ ಶಿಖರ
ಈ ಬಗ್ಗೆ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಪ್ರತಿಕ್ರಿಯಿಸಿ, ಕನ್ನಡ ಸಾಹಿತ್ಯ ಪರಿಷತ್ತು ನೀಡುವ ʻಡಾ. ಟಿ.ವಿ.ವೆಂಕಟಾಚಲಶಾಸ್ತ್ರೀ ವಿದ್ವತ್ ಪ್ರಶಸ್ತಿʼಯು ಹಿರಿಯ ಭಾಷಾಶಾಸ್ತ್ರಜ್ಞರಿಗೆ ನೀಡುವ ಅತೀ ಮಹತ್ವವಾದ ಪುರಸ್ಕಾರವಾಗಿದೆ. ಈ ಬಾರಿ ಆಯ್ಕೆಯಾಗಿರುವ ಡಾ. ವೈ. ಸಿ. ಭಾನುಮತಿ ಹಾಗೂ ಪ್ರೊ. ಜಿ. ಅಶ್ವತ್ಥನಾರಾಯಣ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ ಎಂದು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ʻಡಾ. ಟಿ.ವಿ.ವೆಂಕಟಾಚಲಶಾಸ್ತ್ರಿ ಅವರ ಮಗಳಾದ ಟಿ.ವಿ.ಚಿತ್ಕಲಾ, ಕಸಾಪ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ. ಪಟೇಲ್ ಪಾಂಡು ಉಪಸ್ಥಿತರಿದ್ದರು.