ಬೆಂಗಳೂರು: ಕನ್ನಡ ರಂಗಭೂಮಿಯ ಹಿರಿಯ ನಿರ್ದೇಶಕ, ಶ್ರೀರಂಗರ ಒಡನಾಡಿ ಎಚ್.ವಿ. ವೆಂಕಟಸುಬ್ಬಯ್ಯ
ಅವರು ಸೋಮವಾರ (ಸೆ. ೧೨) ಮುಂಜಾನೆ 6.15ಕ್ಕೆ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ಆಗಿತ್ತು. ಅಸ್ವಸ್ಥರಾಗಿದ್ದ ಅವರನ್ನು ಶೇಷಾದ್ರಿಪುರಂ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಮಗಳು ಮಾನಸ ಅಮೆರಿಕದಿಂದ ಬರಬೇಕಾಗಿದ್ದು, ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವೆಂಕಟಸುಬ್ಬಯ್ಯ ಅವರು ವೃತ್ತಿಯಲ್ಲಿ ಎಲೆಕ್ಟ್ರಾನಿಕ್ ಎಂಜಿನಿಯರ್ ಆಗಿದ್ದರು. ಆದರೆ, ಪ್ರವೃತ್ತಿಯಲ್ಲಿ ಧೀಮಂತ ರಂಗಕರ್ಮಿಯಾಗಿ ರೂಪುಗೊಂಡರು. ರಂಗ ಸಂಪದ ಎಂಬ ತಂಡವನ್ನು ಕಟ್ಟಿ ಬೆಳೆಸಿದವರಲ್ಲಿ ವೆಂಕಟಸುಬ್ಬಯ್ಯ ಅವರು ಪ್ರಮುಖರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಅವರು ನಿರ್ದೇಶಿಸಿದ ಶ್ರೀರಂಗರ ʻಸಮಗ್ರ ಮಂಥನʼ ನಾಟಕ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಕನ್ನಡ ರಂಗಭೂಮಿಯಲ್ಲಿ ಹಳೆ ಮತ್ತು ಹೊಸ ತಲೆಮಾರಿಗೆ ಸೇತುಬಂಧನವಾಗಿದ್ದವರು ಎಂದು ರಂಗ ಸಂಪದದ ಜೆ ಲೋಕೇಶ್ ನೆನಪು ಮಾಡಿಕೊಂಡಿದ್ದಾರೆ.
ವೆಂಕಟಸುಬ್ಬಯ್ಯ ನಿರ್ದೇಶಸಿದ ಐಎನ್ಎಸ್ಕೋನ ಮಹಾಪ್ರಸ್ಥಾನ ಕನ್ನಡ ರಂಗಭೂಮಿಯಲ್ಲಿ ಒಂದು ಕ್ರಾಂತಿಯ ಕಿಡಿಯಾಗಿತ್ತು. ಎಂ ಎಸ್ ಕೆ ಪ್ರಭು ಅವರ ʻಗುಲಾಮನ ಸ್ವಾತಂತ್ರ್ಯʼ ಮತ್ತೊಂದು ಮೇರನ್ನು ಸ್ಥಾಪಿಸಿದೆ.
ರಂಗಭೂಮಿಯ ದಾಖಲೆಗಾರ
ಇಂದಿರಾ ಗಾಂಧಿಯವರ ಚುನಾವಣೆಯಲ್ಲಿ ಅವರು ಎರಡು ಬೀದಿ ನಾಟಕಗಳನ್ನು ಪ್ರಸ್ತುತಪಡಿಸಿದ್ದರು. ಅವರ ಬಹುದೊಡ್ಡ ಕಾರ್ಯ ಅವರ ದಾಖಲೀಕರಣ ಶಕ್ತಿ. ಅವರು ಮಾಡಿದ್ದ ಎಲ್ಲಾ ದಾಖಲೆಗಳು ಈಗ ನಾಟಕ ಅಕಾಡೆಮಿಯ ಕಂಪ್ಯೂಟರ್ಗಳಲ್ಲಿ ದೊರೆಯುತ್ತವೆ. ಅವರು ಇನ್ನೊಂದು ದೊಡ್ಡ ಮಹತ್ಕಾರ್ಯ ಶ್ರೀರಂಗದ ಬಗ್ಗೆ ಬಂದಿದ್ದ ಎಲ್ಲಾ ಲೇಖನಗಳನ್ನು ಒಗ್ಗೂಡಿಸಿ ಒಂದು ಸಮಗ್ರ ಗ್ರಂಥವನ್ನು ರೂಪಿಸಿದ್ದು. ಅದಕ್ಕೆ ಸಾರ್ಥಕವಾಗಿ ಶ್ರೀರಂಗ ಸಂಪದ ಎಂದು ನಾಮಕರಣ ಮಾಡಿದ್ದರು.
ಇಳಿವಯಸ್ಸಿನಲ್ಲೂ ಅವರು ರಂಗಭೂಮಿಯ ಬಗ್ಗೆ ಇರಿಸಿಕೊಂಡಿದ್ದ ಆಸೆ ಆಕಾಂಕ್ಷೆಗಳು ದೊಡ್ಡದಾಗಿದ್ದವು. ಅವರ ಕಾರ್ಯಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಬಿ.ವಿ. ಕಾರಂತ ಪ್ರಶಸ್ತಿಗಳು ಸಂದಿವೆ. ಬಹುಶಃ ಪರ್ವತವಾಣಿಯವರಿಂದ ಹಿಡಿದು ಇಂದಿನ ಪೀಳಿಗೆಯ ಎಂ.ಎಸ್ಕೆ ಪ್ರಭು ಅವರ ವರೆಗೂ, ಅತ್ಯಂತ ಶ್ರದ್ಧೆಯಿಂದ ರಂಗಭೂಮಿಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದವರು ಸುಬ್ಬಣ್ಣ ಎನ್ನುತ್ತಾರೆ ಜೆ. ಲೋಕೇಶ್.
ವೆಂಕಟಸುಬ್ಬಯ್ಯ ಅವರ ಪತ್ನಿ ಶಾರದಾ ಅವರು ಹೆಸರಾಂತ ಹೋಮಿಯೋಪತಿ ವೈದ್ಯರು ಹಾಗೂ ಅವರು ಒಳ್ಳೆಯ ನಟಿಯೂ ಆಗಿದ್ದರು.
ಇದನ್ನೂ ಓದಿ | Gangadhar Murthy Death | ಲೇಖಕ, ಹಿರಿಯ ಚಿಂತಕ ಪ್ರೊ.ಬಿ. ಗಂಗಾಧರ ಮೂರ್ತಿ ಹೃದಯಾಘಾತದಿಂದ ನಿಧನ