ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ನಗರದಲ್ಲಿ ಭಾನುವಾರ ಭೇಟಿಯಾಗಿ ಬೆಂಬಲ ಕೋರಿದರು. ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕಿಶನ್ ರೆಡ್ಡಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಉಪಸ್ಥಿತರಿದ್ದರು.
ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗುವುದು ಖಚಿತ. ಜೆಡಿಎಸ್‌ನ ಬೆಂಬಲ ದ್ರೌಪದಿ ಅವರಿಗೆ ಅವಶ್ಯಕತೆ ಇಲ್ಲ, ಆದರೂ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ಈ ನಡುವೆ ದ್ರೌಪದಿ ಮುರ್ಮು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಹಲವು ಬಿಜೆಪಿ ನಾಯಕರು ದೇವೇಗೌಡ ಅವರ ಮನೆಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ತುಳಸಿಕಟ್ಟೆಗೆ ದ್ರೌಪದಿ ಮುರ್ಮು ನಮನ
ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ನಿವಾಸಕ್ಕೆ ಆಗಮಿಸಿದ್ದ ದ್ರೌಪದಿ ಮುರ್ಮು ಅವರು, ತುಳಸಿಕಟ್ಟೆ ಕಂಡ ತಕ್ಷಣ ಚಪ್ಪಲಿಯನ್ನು ತೆಗೆದಿಟ್ಟು ನಮಸ್ಕರಿಸಿದ್ದು ಗಮನ ಸೆಳೆಯಿತು.
ಇದನ್ನೂ ಓದಿ | ಬೆಂಗಳೂರಿಗೆ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಆಗಮನ; ಸ್ವಾಗತ ಕೋರಿದ ಸಿಎಂ ಬೊಮ್ಮಾಯಿ