Site icon Vistara News

DRDO India: ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ನ ಹಾರಾಟದ ಪ್ರಯೋಗ ಯಶಸ್ವಿ

DRDO India successfully conducted flight trial of Autonomous Flying Wing Technology Demonstrator

ನಾಯಕನಹಟ್ಟಿ, ಚಳ್ಳಕೆರೆ: ಪೈಲಟ್ ರಹಿತ ಹಾಗೂ ಸ್ವಯಂ ಟೇಕ್ ಆನ್ ಮತ್ತು ಟೇಕ್ ಆಫ್ ಆಗುವ ಹೊಸ ತಂತ್ರಜ್ಞಾನದ ಡ್ರೋನ್ (UAV technology) ಹಾರಾಟ ಪರೀಕ್ಷೆಯನ್ನು ಇಲ್ಲಿನ ಡಿಆರ್‌ಡಿಒದ (DRDO India) ಏರೋನಾಟಿಕಲ್ ಟೆಸ್ಟ್ ರೇಂಜ್‌(ಎಟಿಆರ್)ನಲ್ಲಿ ಯಶಸ್ವಿಯಾಗಿ ಶುಕ್ರವಾರ ಕೈಗೊಳ್ಳಲಾಗಿದೆ(Autonomous Flying Wing Technology Demonstrator). ಇದರೊಂದಿಗೆ ಈ ತಾಂತ್ರಿಕತೆ ಪಡೆದ ಪ್ರಪಂಚದ ಕೆಲವೇ ದೇಶಗಳಲ್ಲಿ ಭಾರತ ಸ್ಥಾನ ಗಳಿಸಿದೆ.

ಈ ತಂತ್ರಜ್ಞಾನವನ್ನು ಡಿಆರ್‌ಡಿಒದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್(ಎಡಿಇ) ವಿನ್ಯಾಸಗೊಳಿಸಿ, ಸಿದ್ಧಪಡಿಸಿದೆ. ಇದು ಮಾನವರಹಿತ ಮತ್ತು ಬಾಲರಹಿತವಾಗಿರುವುದು ವಿಶೇಷ. ಈ ಹಿಂದಿನ ಡ್ರೋನ್‌ಗಳಲ್ಲಿ ಡ್ರೋನ್‌ಗೆ ಲಂಭವಾಗಿ ರೆಕ್ಕೆ ಇರುತ್ತಿತ್ತು. ಆದರೆ ಈ ಮಾದರಿಯಲ್ಲಿ ಬಾಲಕ್ಕೆ ಬದಲಾಗಿ ಬಾಣದ ರಚನೆಯಂತಿರುವ ಪ್ಲಾಟ್‌ಫಾರಂ ಹೊಂದಿದೆ. ಸ್ವಯಂಚಾಲಿತ ಹಾರುವ ರೆಕ್ಕೆ (ಅಟೊನಮಸ್ ಫ್ಲೆಯಿಂಗ್ ವಿಂಗ್) ತಂತ್ರಜ್ಞಾನ ಎಂದು ಈ ತಂತ್ರಜ್ಞಾನಕ್ಕೆ ಕರೆಯಲಾಗುವುದು.

ಈ ಡ್ರೋನ್‌ನ ಬೋರ್ಡ್‌ನಲ್ಲಿ ಅಳವಡಿಸಿದ ಸೆನ್ಸಾರ್ ವ್ಯವಸ್ಥೆ ಮತ್ತು ಉಪಗ್ರಹಗಳಿಂದ ಪಡೆದುಕೊಂಡ ಮಾಹಿತಿಯನ್ನು ಬಳಸಿಕೊಂಡು ಈ ಹಾರಾಟ ಯಶಸ್ವಿಯಾಗಿದೆ. ಈ ಡ್ರೋನ್ ಸಂಪೂರ್ಣವಾಗಿ ದೇಸಿಯವಾಗಿ ನಿರ್ಮಿಸಿರುವುದು ದೇಶದ ಹೆಗ್ಗಳಿಕೆಗೆ ಪಾತ್ರವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತವನ್ನು ಸಿದ್ಧಪಡಿಸುವ ಪ್ರಧಾನಿಯವರ ಚಿಂತನೆ ಮತ್ತು 75ನೇ ಸ್ವಾತಂತ್ರ್ಯ ಹಬ್ಬದ ಹಿನ್ನೆಲೆಯಲ್ಲಿ ಈ ಪ್ರಯೋಗ ಮಹತ್ವ ಪಡೆದುಕೊಂಡಿದೆ.

ಡ್ರೋನ್ ತಂತ್ರಜ್ಞಾನದಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿರುವುದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್‌ಡಿಒದ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ಈ ತಂತ್ರಜ್ಞಾನವನ್ನು ಒಳಗೊಂಡ ಪ್ರಯೋಗವು ದೇಶದ ರಕ್ಷಣಾ ವ್ಯವಸ್ಥೆ ಮತ್ತು ರಕ್ಷಣಾ ಉದ್ಯಮಕ್ಕೆ ಇದು ಹೊಸ ಹುಮ್ಮಸ್ಸು ನೀಡಿದೆ ಎಂದು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಡಿಆರ್‌ಡಿಒದ ಚೇರ್ಮನ್ ಜಿ. ಸತೀಶ್ ರೆಡ್ಡಿ, ಈ ತಂತ್ರಜ್ಞಾನದ ರಚನೆ, ತಂತ್ರಜ್ಞಾನ ಮತ್ತು ಪರೀಕ್ಷಾ ಕಾರ್ಯವನ್ನು ಕೈಗೊಂಡ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

ಈ ಸುದ್ದಿಯನ್ನು ಓದಿ: DRDO Missile: ಖಂಡಾಂತರ ಕ್ಷಿಪಣಿ ನಿಗ್ರಹ ಮಿಸೈಲ್‌ ಪರೀಕ್ಷೆ ಯಶಸ್ವಿ, ಮತ್ತೊಂದು ಮೈಲುಗಲ್ಲು

Exit mobile version