ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ಭಾನುವಾರ ಬೆಳಗ್ಗೆ (ಆಗಸ್ಟ್ 20) ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಾನವರಹಿತ ಲಘುವಿಮಾನ (Chitradurga Plane Crash) ಪತನಗೊಂಡಿದೆ. ಪ್ರಾಯೋಗಿಕ ಹಾರಾಟದ ವೇಳೆ ತಪಸ್ 07A-14 ವಿಮಾನವು ಜಮೀನಿನಲ್ಲಿ ಪತನಗೊಂಡಿದೆ. ಗ್ರಾಮದ ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಲಘು ವಿಮಾನ ಪತನಗೊಂಡಿದ್ದು, ಅದನ್ನು ನೋಡಲು ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ನಾಯಕನಹಟ್ಟಿ ಬಳಿಯ ಡಿಆರ್‌ಡಿಒ ಘಟಕದಲ್ಲಿ ತಪಸ್ ಲಘು ವಿಮಾನವನ್ನು ತಯಾರಿಸಲಾಗಿದೆ. ಪ್ರಾಯೋಗಿಕವಾಗಿ ವಿಮಾನದ ಹಾರಾಟ ನಡೆಸುವ ವೇಳೆ ಅದು ಪತನಗೊಂಡಿದೆ. ವಿಮಾನ ಪತನವಾಗಲು ಇದುವರೆಗೆ ನಿಖರ ಕಾರಣ ತಿಳಿದುಬಂದಿಲ್ಲ. ರೆಕ್ಕೆ ಕಳಚಿಕೊಂಡು ವಿಮಾನ ಪತನವಾದ ಕಾರಣ ಸುತ್ತಮುತ್ತಲಿನ ಗ್ರಾಮಸ್ಥರು ನೋಡಲು ಆಗಮಿಸುತ್ತಿದ್ದಾರೆ.
ಜಮೀನಿನಲ್ಲಿ ಪತನಗೊಂಡಿರುವ ವಿಮಾನ
ವಿಮಾನ ಪತನವಾದ ಸ್ಥಳಕ್ಕೆ ಡಿಆರ್‌ಡಿಒ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವಿಮಾನ ಪತನವಾಗುತ್ತಲೇ ಬೆಂಕಿ ಹೊತ್ತಿಕೊಳ್ಳದ ಕಾರಣ ಯಾವುದೇ ಅಪಾಯ ಎದುರಾಗಿಲ್ಲ. ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಎರಡನೇ ವಿಮಾನ ಪತನ
ಚಿತ್ರದುರ್ಗ ಜಿಲ್ಲೆಯಲ್ಲಿ ಡಿಆರ್‌ಡಿಒದ ವಿಮಾನ ಪತನವಾಗುತ್ತಿರುವುದು ಎರಡನೇ ಬಾರಿ ಆಗಿದೆ. 2019ರ ಸೆಪ್ಟೆಂಬರ್‌ನಲ್ಲಿ ಡಿಆರ್‌ಡಿಒದ ರುಸ್ತುಂ 2 ಎಂಬ ಮಾನವರಹಿತ ಲಘು ವಿಮಾನ ಪತನವಾಗಿತ್ತು. ಚಳ್ಳಕೆರೆ ತಾಲೂಕಿನ ಚಿಕ್ಕೇನಹಳ್ಳಿಯಲ್ಲಿ ಪತನಗೊಂಡಿತ್ತು.