Site icon Vistara News

Dress Code : ದೇವೀರಮ್ಮನ ಬೆಟ್ಟದಲ್ಲಿ ಡ್ರೆಸ್‌ ಕೋಡ್‌ ಜಾರಿ; ಸ್ಕರ್ಟ್‌, ಮಿಡಿ, ಸ್ಲೀವ್‌ಲೆಸ್‌, ಬರ್ಮುಡಾ ಹಾಕುವಂತಿಲ್ಲ!

Deveeramma

ಚಿಕ್ಕಮಗಳೂರು: ಜಿಲ್ಲೆಯ ಜನಪ್ರಿಯ ಮತ್ತು ಕಾರಣಿಕ ಕ್ಷೇತ್ರವಾದ ಬಿಂಡಿಗ ದೇವೀರಮ್ಮನ ದೇಗುಲದಲ್ಲಿ (Bindiga Deveeramma temple) ಡ್ರೆಸ್ ಕೋಡ್ ಆದೇಶ (Dress Code) ಜಾರಿಯಾಗಿದೆ. ಇಲ್ಲಿ ಆಧುನಿಕ ದಿರಸು ಧರಿಸಿ ಬಂದವರಿಗೆ ಇನ್ನು ಮುಂದೆ ಪ್ರವೇಶವಿಲ್ಲ. ದೇವಾಲಯಕ್ಕೆ ಹೋಗಬೇಕು ಎಂದರೆ ಸಾಂಪ್ರದಾಯಿಕ ಉಡುಗೆಯಲ್ಲಿ (Traditional Dress) ಆಗಮಿಸುವುದು ಕಡ್ಡಾಯ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಆದೇಶ ಜಾರಿ ಮಾಡಿದೆ.

ಚಿಕ್ಕಮಗಳೂರಿನ ದೇವೀರಮ್ಮ ಬೆಟ್ಟದ ದೇವಾಲಯ

ರಾಜ್ಯದ ಹಲವಾರು ದೇವಾಲಯಗಳಲ್ಲಿ ಈಗಾಗಲೇ ವಸ್ತ್ರಸಂಹಿತೆ ಜಾರಿಯಾಗಿದೆ. ದೇಗುಲ ಪ್ರವೇಶ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಇರಬೇಕು ಎಂದು ಕಡ್ಡಾಯ ಮಾಡಲಾಗಿದೆ.

ಚಿಕ್ಕಮಗಳೂರು (Chikkamagaluru News) ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ಗ್ರಾಮದಲ್ಲಿ ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ 3 ಸಾವಿರ ಅಡಿ ಎತ್ತರದ ಬೆಟ್ಟವೇ ದೇವೀರಮ್ಮ ಬೆಟ್ಟ (Deveeramma Betta). ಇಲ್ಲಿನ ದೇವಿಯನ್ನು ಬಿಂಡಿಗ ದೇವೀರಮ್ಮ ಎಂತಲೂ ಕರೆಯುತ್ತಾರೆ. ಈ ದೇವಸ್ಥಾನಕ್ಕೆ ರಾಜ್ಯ ಮಾತ್ರವಲ್ಲ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಾರೆ.

ದೀಪಾವಳಿ ಸಂದರ್ಭದಲ್ಲಿ ಜನಸಾಗರ

ಬೆಟ್ಟದ ಮೇಲೆ ಇರುವ ಈ ದೇವಸ್ಥಾನಕ್ಕೆ ಸಾಗಬೇಕಾದರೆ ಕಡಿದಾದ ದಾರಿಯಲ್ಲಿ ನಡೆದುಕೊಂಡೇ ಹೋಗಬೇಕು. ಚಾರಣಿಗರು ಮತ್ತು ಕೆಲವು ಭಕ್ತರು ಆಗಾಗ ಇಲ್ಲಿಗೆ ಹೋಗುತ್ತಾರಾದರೂ ದೀಪಾವಳಿ ಸಂದರ್ಭವೇ ದೇವರ ದರ್ಶನಕ್ಕೆ ವಿಶೇಷ ದಿನ. ದೀಪಾವಳಿಯ ಎರಡನೇ ದಿನ ಇಲ್ಲಿ ಬಾಗಿಲು ತೆರೆಯುತ್ತಿದ್ದು ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಮಕ್ಕಳಿಂದ-ವೃದ್ಧರವರೆಗೂ ಬೆಟ್ಟ ಹತ್ತಿ ಬೆಟ್ಟದ ತಾಯಿಗೆ ಕೈಮುಗಿಯುತ್ತಾರೆ.

ಈ ದೇವಸ್ಥಾನದಲ್ಲಿ ಈಗ ವಸ್ತ್ರ ಸಂಹಿತೆಯನ್ನು ಜಾರಿ ಮಾಡಲಾಗಿದೆ. ಇಲ್ಲಿಗೆ ಬರುವ ಭಕ್ತರು ಸ್ಕರ್ಟ್, ಮಿಡಿ, ಸ್ಲೀವ್ ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯಕ್ಕೆ ಬರುವಂತಿಲ್ಲ. ಹಾಫ್‌ ಪ್ಯಾಂಟ್‌, ಬರ್ಮುಡಾಗಳಿಗೂ ಅವಕಾಶವಿಲ್ಲ. ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್‌ಗೂ ನಿಷೇಧ ವಿಧಿಸಲಾಗಿದೆ.

ಈ ಬೆಟ್ಟಕ್ಕೆ ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ಬರುವುದು ಹೆಚ್ಚಾಗಿದೆ. ಅವರಲ್ಲಿ ಪ್ರೇಮಿಗಳೂ ಇರುತ್ತಾರೆ. ಯಾರು ಬೇಕಾದರೂ ಬರಲಿ, ಅಸಭ್ಯವಾಗಿ ದಿರಸು ಧರಿಸಲು ಮತ್ತು ಅಸಭ್ಯವಾಗಿ ವರ್ತಿಸಲು ಅವಕಾಶವಿಲ್ಲ ಎನ್ನುವುದು ಆಡಳಿತ ಮಂಡಳಿ ಸೂಚನೆ ನೀಡಿದೆ. ಯಾರೇ ಬಂದರೂ ಸಾಂಪ್ರದಾಯಿಕ ಉಡುಗೆಯಲ್ಲೇ ಬರಬೇಕೆಂದು ಸೂಚನೆ ನೀಡಲಾಗಿದೆ.

ಏನೇನು ನಿರ್ಬಂಧ?

ಇದೇ ವೇಳೆ ದೇವಾಯದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್, ರೀಲ್ಸ್ ಗೆ ಅವಕಾಶವಿಲ್ಲ ಎಂದು ಕೂಡಾ ಸ್ಪಷ್ಟಪಡಿಸಲಾಗಿದೆ.

ಕುಸಿಯುತ್ತಿದೆ ಮುಳ್ಳಯ್ಯನಗಿರಿ ಕಿರುಸೇತುವೆ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಅಗಲಕಾನ್ ಬಳಿ ಮುಳ್ಳಯ್ಯನಗಿರಿ ಕಿರು ಸೇತುವೆ ಸ್ವಲ್ಪ ಸ್ವಲ್ಪವೇ ಕುಸಿಯುತ್ತಿರುವುದನ್ನು ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ರಸ್ತೆಯಲ್ಲೂ ಬಿರುಕು ಮೂಡಿದ್ದು ಸೇತುವೆ ಕುಸಿಯುವ ಭೀತಿ ಎದುರಾಗಿದೆ.

ಮುಳ್ಳಯ್ಯನಗಿರಿ ರಸ್ತೆ ಬಿರುಕು

ಮುಳ್ಳಯ್ಯನಗಿರಿಗೆ ಹೋಗುವ ನೂರಾರು ಪ್ರವಾಸಿಗರು ವಾಹನಗಳು, ಗ್ರಾಮಸ್ಥರು ಓಡಾಡುವ ರಸ್ತೆ ಇದಾಗಿದ್ದು, ಮಳೆಯ ನೀರು, ಸೇತುವೆಯ ಮೇಲೆ ಹರಿದು ಅವಾಂತರ ಸೃಷ್ಟಿಯಾಗಿದೆ.

ಸೇತುವೆ ಕುಸಿಯೋ ಭೀತಿ ನಡುವೆಯೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎನ್ನುವುದು ಸಾರ್ವಜನಿಕರ ದೂರು.

ಇದನ್ನೂ ಓದಿ: Dress code in temple | ಮುರ್ಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಕಡ್ಡಾಯಕ್ಕೆ ಹಿಂದು ಸಂಘಟನೆಗಳ ಮನವಿ

Exit mobile version