Site icon Vistara News

ವಿಸ್ತಾರ ಸಂಪಾದಕೀಯ: ವಿಷ ಜಲ ಸೇವನೆ ದುರಂತದ ನಿಗೂಢತೆ ಬಿಡಿಸಿ, ಸುರಕ್ಷಿತ ನೀರು ಕುಡಿಸಿ

Water

ಚಿತ್ರದುರ್ಗ ಜಿಲ್ಲೆಯ ಕವಾಡಿಗರಹಟ್ಟಿ ವಿಷ ಜಲ ದುರಂತ ಪ್ರಕರಣ ಆರು ಜೀವಗಳನ್ನು ಬಲಿ ಪಡೆದುಕೊಂಡಿದೆ. ಇನ್ನೂ ಜಗದ ಬೆಳಕು ನೋಡದ, ತಾಯಿಯ ಗರ್ಭದಲ್ಲೇ ಬೆಚ್ಚಗಿದ್ದ ಎಂಟು ತಿಂಗಳ ಭ್ರೂಣ ಶಿಶು ಕೂಡ ಪ್ರಾಣ ಕಳೆದುಕೊಂಡಿದೆ. ಯಾರದೋ ತಪ್ಪಿಗೆ ನಿಷ್ಪಾಪಿ ಜೀವವೊಂದು ಉಸಿರುಚೆಲ್ಲಿದಂತಾಗಿದೆ. ಭಾನುವಾರ ರಾತ್ರಿ ಕವಾಡಿಗರಹಟ್ಟಿಯ ಟ್ಯಾಂಕ್‌ನಿಂದ ಬಿಟ್ಟ ನೀರನ್ನು ಸೇವಿಸಿ 160ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಈ ಮೊದಲೇ ಹಟ್ಟಿಯ ನಿವಾಸಿಗಳಾದ ಮಂಜುಳಾ, ರಘು, ಪ್ರವೀಣ, ರುದ್ರಪ್ಪ ಮತ್ತು ಪಾರ್ವತಮ್ಮ ಎಂಬ ಐವರು ಪ್ರಾಣ ಕಳೆದುಕೊಂಡಿದ್ದರು. ಆಗಸ್ಟ್‌ 12ರಂದು ಹೆರಿಗೆಗೆ ದಿನ ನಿಗದಿಯಾಗಿದ್ದ ಮಗುವಿನ ಪುಟ್ಟ ಹೃದಯ ಎಷ್ಟು ಎಚ್ಚರಿಕೆ ವಹಿಸಿದರೂ ಉಳಿಯದೆ ಸ್ತಬ್ಧವಾಗಿರುವುದು, ದುರಂತದ ತೀವ್ರತೆಗೆ ಸಾಕ್ಷಿಯಾಗಿದೆ.

ಇಷ್ಟೊಂದು ಭಯಾನಕ ದುರಂತ ಸಂಭವಿಸಿರುವುದು ಒಂದು; ಈ ದುರಂತವನ್ನು ಸರ್ಕಾರ, ಸ್ಥಳೀಯಾಡಳಿತ ಗಂಭೀರವಾಗಿ ಪರಗಣಿಸದೇ ಇರುವುದು ಇನ್ನೊಂದು ದುರಂತ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಈ ಪ್ರಕರಣದ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸುತ್ತಿವೆ ಎನ್ನುವುದು ಸ್ಥಳೀಯರ ಆರೋಪ. ಇದರಲ್ಲಿ ನಿಜವಿರಬಹುದು ಎಂದು ಶಂಕಿಸುವಂತೆ ಘಟನೆಗಳು ನಡೆಯುತ್ತಿವೆ. ನೀರು ಕುಡಿದ ಮಂದಿ ಅಸ್ವಸ್ಥರಾಗಲು ಕಾರಣ ಅದರಲ್ಲಿ ಕಾಲರಾ ರೋಗ ಹರಡುವ ವೈರಸ್‌ ಇದ್ದಿದ್ದು ಎಂಬ ವರದಿ ಬಂದಿದೆ ಎಂದು ಸಹಾಯಕ ಕಮೀಷನರ್‌ ಕಾರ್ತಿಕ್‌ ಹೇಳಿದ್ದರು. ಆದರೆ, ಕಾಲರಾ ಅಂಶ ಕಂಡುಬಂದಿದ್ದು ಎಂಟು ಮಂದಿಯಲ್ಲಿ ಐವರಲ್ಲಿ ಮಾತ್ರ. ಜಿಲ್ಲಾ ಸರ್ವೇಕ್ಷಣಾ ಘಟಕದ ವರದಿಯಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಎಂಬ ವರದಿ ಬಂದಿದೆ. ಆದರೆ FSL ವರದಿಯಲ್ಲಿ ಯಾವುದೇ ವಿಷಕಾರಿ ಅಂಶ ಇಲ್ಲ ಎಂದು ಹೇಳಲಾಗಿದೆ. ಹೀಗೆ ಒಂದೊಂದು ವರದಿ ಒಂದೊಂದು ಕಥೆ ಹೇಳುತ್ತಿದೆ. ಹಾಗಿದ್ದರೆ ನಿಜಕ್ಕೂ ಈ ರೀತಿ ಸಾವು ಸಂಭವಿಸಲು ಕಾರಣವೇನು ಎನ್ನುವ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ.

ಇನ್ನು ಆಡಳಿತಗಾರರ ನಿರ್ಲಕ್ಷ್ಯ; ಇಷ್ಟು ದೊಡ್ಡ ದುರಂತ ನಡೆದರೂ ಚಿತ್ರದುರ್ಗ ಶಾಸಕರು ಆ ಕಡೆ ತಲೆ ಹಾಕದಿದ್ದು, ನಾಲ್ಕನೇ ದಿನ ಬಂದಿದ್ದಾರೆ. ಇದರ ನಡುವೆ ಆ ಪ್ರದೇಶದ ಕೌನ್ಸಿಲರ್‌ ಜಯಣ್ಣ ಘಟನೆ ನಡೆದಂದಿನಿಂದ ನಾಪತ್ತೆಯಾಗಿರುವುದು ಕೂಡ ಸಂಶಯ ಮೂಡಿಸಿದೆ. ಪಕ್ಕದಲ್ಲೇ ಇರುವ ಲಿಂಗಾಯತರ ವಸತಿ ಪ್ರದೇಶಕ್ಕೆ ಸರಿಯಾದ ನೀರು ಹೋಗುತ್ತಿದ್ದು, ಎಸ್‌ಟಿ ಸಮುದಾಯ ವಾಸಿಸುತ್ತಿರುವ ಕವಾಡಿಗರ ಹಟ್ಟಿಗೆ ಈ ರೀತಿಯ ಕಲುಷಿತ ವಿಷಪೂರಿತ ನೀರು ಬಂದಿದ್ದು ಹೇಗೆ ಎಂಬುದು ಅನುಮಾನಾಸ್ಪದ. ಪ್ರಕರಣದ ಪ್ರಮುಖ ಕೊಂಡಿಯಾಗಿರಬಹುದಾದ ನೀರಗಂಟಿಯೂ ನಾಪತ್ತೆಯಾಗಿದ್ದಾನೆ. ಇದೊಂದು ಜಾತಿವೈಷಮ್ಯದಿಂದ ನಡೆದ ಕೃತ್ಯ ಎಂದು ಸಾರ್ವಜನಿಕರು ಸಾರಿ ಸಾರಿ ಹೇಳುತ್ತಿದ್ದರೂ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಆ ನಿಟ್ಟಿನಲ್ಲಿ ಮುಂದುವರಿಯದಿರುವುದು ಕೂಡ ಸಂಶಯಾಸ್ಪದವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರ ಪಂಪ್‌ ಆಪರೇಟರ್‌ ಸೇರಿ ಐವರನ್ನು ಸಸ್ಪೆಂಡ್‌ ಮಾಡಿದೆ. ಆದರೆ ಇದು ಸಾಲದು. ಪ್ರಕರಣದ ಪ್ರಧಾನ ಆರೋಪಿಗಳು ಪತ್ತೆಯಾಗಬೇಕು. ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಊರ ಜನ ಕುಡಿಯುವ ನೀರಿಗೆ ವಿಷ ಬೆರೆಸುವ ಪಾತಕ ಕೃತ್ಯವನ್ನು ಕ್ಷಮಿಸುವುದಾದರೂ ಹೇಗೆ ಸಾಧ್ಯ?

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಹರಿಯಾಣ ಕೋಮುಗಲಭೆ ಹಿಂದಿನ ಕಿಡಿಗೇಡಿಗಳನ್ನು ಮಟ್ಟ ಹಾಕಬೇಕು

ಒಂದು ವೇಳೆ ಇದು ಮನುಷ್ಯ ಕೈವಾಡವಲ್ಲದೆ ಸಹಜವಾಗಿ ಕಲುಷಿತಗೊಂಡ ನೀರು ಎಂದಾಗಿದ್ದರೆ, ಆಗ ಸ್ಥಳೀಯಾಡಳಿತ ಮತ್ತು ಸಂಬಂಧಪಟ್ಟವರು ಹೊಣೆ ಹೊರಬೇಕಾಗುತ್ತದೆ. ಚಿತ್ರದುರ್ಗ, ರಾಯಚೂರು ಸೇರಿದಂತೆ ಬಯಸು ಸೀಮೆಯ ಅನೇಕ ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆಯಾದರೂ ಇಂಥ ಕಲುಷಿತ ನೀರಿನ ವಿತರಣೆ ಹಾಗೂ ಜನ ಅಸ್ವಸ್ಥಗೊಳ್ಳುವ ಪ್ರಕರಣಗಳು ನಡೆಯುತ್ತಲೇ ಇವೆ. ಸುರಕ್ಷಿತ ಕುಡಿಯುವ ನೀರು ಪೂರೈಸಬೇಕಾದುದು ಸರ್ಕಾರದ ಕರ್ತವ್ಯ. ಅದು ಜನತೆ ಸರ್ಕಾರದಿಂದ ನಿರೀಕ್ಷಿಸುವ ಮೂಲಭೂತ ಅಗತ್ಯಗಳಲ್ಲಿ ಒಂದು. ಇಷ್ಟನ್ನು ಮಾಡದಿದ್ದರೆ ಸರ್ಕಾರ ಇದ್ದೂ ಪ್ರಯೋಜನವಿಲ್ಲ ಎಂದಾಗುತ್ತದೆ. ಆದ್ದರಿಂದ ಈ ಪ್ರಕರಣದ ಆಮೂಲಾಗ್ರ ತನಿಖೆಯ ಜತೆಗೆ, ರಾಜ್ಯದ ಇತರ ಕಡೆಯೂ ಕುಡಿಯುವ ನೀರಿನ ಸುರಕ್ಷತೆಯ ಕಡೆಗೂ ಆದ್ಯ ಗಮನ ಕೊಡಬೇಕಾಗಿದೆ.

Exit mobile version