ಬೆಂಗಳೂರು: ಸ್ವಮೂತ್ರ ಪಾನದಿಂದ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು! ಹೀಗೆಂದು ಮೈಸೂರು ವಿವಿಯ ಪದವಿ ತರಗತಿಗೆಂದು ಬರೆಯಲಾದ ʻವೈದ್ಯಕೀಯ ಸಮಾಜಶಾಸ್ತ್ರʼ ಪುಸ್ತಕದ ಅಧ್ಯಾಯದಲ್ಲಿ ಬರೆಯಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದ ಅನ್ವಯ ಈ ಪಠ್ಯ ರೂಪಿಸಲಾಗಿದೆ. ಮೂತ್ರ ಚಿಕಿತ್ಸೆಯುವ ಪ್ರಕೃತಿ ಚಿಕಿತ್ಸೆಯ ಒಂದು ಭಾಗ. ಸ್ವಮೂತ್ರ ಪಾನ, ಮೂತ್ರ ಲೇಪನದಿಂದ ಏಡ್ಸ್, ಕ್ಯಾನ್ಸರ್, ಕಣ್ಣು, ಕಿವಿ, ಹಲ್ಲು, ಚರ್ಮ ರೋಗಗಳನ್ನು ನಿಯಂತ್ರಿಸಬಹುದು ಎಂದು ಈ ಪಠ್ಯದಲ್ಲಿ ಬರೆಯಲಾಗಿದೆ. ಈ ಮಾಹಿತಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದ್ದು, ಹಲವರು ಇದನ್ನು ಆಕ್ಷೇಪಿಸಿದ್ದಾರೆ.
ಪ್ರಕೃತಿಯು ರೋಗ ನಿರೋಧಕ ಶಕ್ತಿಯನ್ನು ಮನುಷ್ಯನಿಗೆ ಆತನ ದೇಹದಲ್ಲೇ ನೀಡಿದೆ. ಆ ಶಕ್ತಿಯೇ ಮೂತ್ರ. ಇದೇ ಕಾರಣಕ್ಕಾಗಿ ಸಹಸ್ರಾರು ವರ್ಷಗಳಿಂದ ಯೋಗಿಗಳು ಮೂತ್ರ ಸೇವಿಸುತ್ತಿದ್ದರು ಎಂದು ಪಠ್ಯದಲ್ಲಿ ವಿವರಿಸಲಾಗಿದೆ.
ಮೈಸೂರು ವಿವಿಯ ಬಿಎ ಕೋರ್ಸ್ 5ನೇ ಸೆಮಿಸ್ಟರ್ ಪಠ್ಯಪುಸ್ತಕ ಇದಾಗಿದೆ. ವೈದ್ಯಕೀಯ ಸಮಾಜಶಾಸ್ತ್ರದ ಈ ಪಠ್ಯ ಪುಸ್ತಕವನ್ನು ಪ್ರೊ.ಕೆ ಭೈರಪ್ಪ ಬರೆದಿದ್ದಾರೆ. ಮೂತ್ರ ಚಿಕಿತ್ಸೆ, ಗೋಮೂತ್ರ ಚಿಕಿತ್ಸೆ, ಶಂಕು ಚಿಕಿತ್ಸೆ, ಚುಟ್ಕಿ ಚಿಕಿತ್ಸೆ, ತೈಲ ಚಿಕಿತ್ಸೆ, ಸಿದ್ಧ ವೈದ್ಯ ಪದ್ಧತಿ, ಜ್ಯೂಸ್ ಚಿಕಿತ್ಸೆ ಇತ್ಯಾದಿಗಳನ್ನು ಇದರಲ್ಲಿ ಪರಿಚಯಿಸಲಾಗಿದೆ.
ಹಲವು ಪ್ರಮುಖರು, ಕೃತಿಗಳ ಉಲ್ಲೇಖ
ಸ್ವಮೂತ್ರ ಪಾನದ ಶ್ರೇಷ್ಠತೆಯನ್ನು ಸಾರಲು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರನ್ನು ಉಲ್ಲೇಖಿಸಲಾಗಿದೆ. ಸಂಸ್ಕೃತ ಸಾಹಿತ್ಯ ನಿಧಿಯಲ್ಲಿರುವ ಶಿವಾಂಬು ಸಂಹಿತೆಯಲ್ಲಿ ಇದರ ಮಾಹಿತಿ ಇದೆ ಎಂದು ಹೇಳಲಾಗಿದೆ. ʻನಿಮ್ಮ ಆರೋಗ್ಯ ರಕ್ಷಣೆಗಾಗಿ ನಿಮ್ಮ ದೇಹವನ್ನೇ ಅವಲಂಬಿಸಿ ಎಂಬ ಉಲ್ಲೇಖ ಬೈಬಲ್‌ನಲ್ಲೂ ಇದೆ. ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ನೀಲ್ ಆರ್ಮ್‌ಸ್ಟ್ರಾಂಗ್ ಬರೆದಿರುವ ವಾಟರ್ ಆಫ್ ಲೈಫ್ ಪುಸ್ತಕದಲ್ಲೂ ಸ್ವಮೂತ್ರ ಪಾನದ ವಿವರಣೆ ಇದೆʼ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.
ಎಐಡಿಎಸ್ಓ ವಿದ್ಯಾರ್ಥಿ ಸಂಘದ ಎಚ್ಚರಿಕೆ
ಈ ನಡುವೆ ಸ್ವಮೂತ್ರ ಪಾನವೇ ಮದ್ದು ಎಂಬುದು ಅತ್ಯಂತ ಅವೈಜ್ಞಾನಿಕ ಮತ್ತು ಮೂರ್ಖತನದ ಪರಮಾವಧಿ ಎಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಹೇಳಿದೆ. ಸ್ವ ಮೂತ್ರಪಾನದಿಂದ ಏಡ್ಸ್, ಕ್ಯಾನ್ಸರ್, ಕಣ್ಣು, ಕಿವಿ, ಹಲ್ಲು, ಹಾಗೂ ಚರ್ಮರೋಗಗಳನ್ನು ನಿಯಂತ್ರಿಸಬಹುದು ಎಂಬುವುದು ಅವೈಜ್ಞಾನಿಕ. ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕದಲ್ಲಿ ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶಗಳನ್ನು ಸೇರಿಸಬೇಕು. ಕೇವಲ ಪ್ರಾಚೀನ ಗ್ರಂಥಗಳನ್ನು ಉಲ್ಲೇಖ ಮಾಡಿ ಈ ರೀತಿ ಪಠ್ಯಗಳನ್ನು ರಚಿಸಲಾಗಿದೆ. ಇದನ್ನು ಈ ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಲಾಗಿದೆ.
ʻʻವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ವೈಜ್ಞಾನಿಕ, ಪ್ರಜಾತಂತ್ರ, ಧರ್ಮ ನಿರಪೇಕ್ಷತ ಶಿಕ್ಷಣವನ್ನು ಒದಗಿಸಿ. ಈ ಕೂಡಲೇ ವಿಶ್ವವಿದ್ಯಾನಿಲಯದ ಪದಾಧಿಕಾರಿಗಳು ಹಾಗೂ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಈ ಅವೈಜ್ಞಾನಿಕ ಪಠ್ಯಕ್ರಮವನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡುತ್ತೇವೆʼʼ ಎಂದು ಎಚ್ಚರಿಸಲಾಗಿದೆ.