Site icon Vistara News

Drought in Karnataka : ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್‌ ಬೆಳೆ ಹಾನಿ; 6 ಸಾವಿರ ಕೋಟಿಗಾಗಿ ಕೇಂದ್ರಕ್ಕೆ ಮೊರೆ

Revenue Minister Krishna ByreGowda infront of Vidhanasoudha

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಸಮರ್ಪಕ ಮಳೆ (Rain News) ಇಲ್ಲದೆ ತೀವ್ರ ಬರಗಾಲದಿಂದ (Drought in Karnataka) ಒಟ್ಟಾರೆಯಾಗಿ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ತೋಟಗಾರಿಕೆ ಪ್ರದೇಶದಲ್ಲಿ (Horticulture Area) ಎರಡು ಲಕ್ಷ ಹೆಕ್ಟೇರ್ ಬೆಳೆ ಹಾನಿ ಸೇರಿ ಈ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ (Horticulture Department) ಮಾಹಿತಿ ನೀಡಿದೆ. ಒಟ್ಟಾರೆಯಾಗಿ 42 ಲಕ್ಷ ಹೆಕ್ಟೇರ್‌ ಬೆಳೆಹಾನಿಯಾಗಿದೆ. ಈ ಸಂಬಂಧ 6 ಸಾವಿರ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಎನ್‌ಡಿಆರ್‌ಎಫ್‌ (NDRF Fund) ಅಡಿಯಲ್ಲಿ ನಮಗೆ ಇಷ್ಟು ಹಣವನ್ನು ಕೊಡಬಹುದು. ಕುಡಿಯುವ ನೀರು, ಬೆಳೆ ಪರಿಹಾರಕ್ಕೆ ಅನುದಾನ ನೀಡುವಂತೆ ಮನವಿ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna ByreGowda) ಹೇಳಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, 195 ತಾಲೂಕುಗಳಲ್ಲಿ ಬರ ಘೋಷಣೆ ಆಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರಕ್ಕೆ (Central Government) ವರದಿ ಕೊಡುವ ಸಂಬಂಧ ಸಭೆ ನಡೆಸಿದ್ದೇವೆ. ಕಳೆದ ವಾರ ಕ್ಯಾಬಿನೆಟ್ ಸಬ್ ಕಮಿಟಿ ಸಭೆ ಮಾಡಿದ್ದೆವು. ಕೃಷಿ, ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಕೇಳಿದ್ದೆವು. ಈ ಸಂಬಂಧ ಒಂದು ಜ್ಞಾಪನಾ ಪತ್ರ (ಮೆಮೋರಂಡಮ್) ‌ಸಿದ್ಧಪಡಿಸಿದ್ದೇವೆ. ಶೇಕಡಾ 70ರಷ್ಟು ಕೆಲಸ ಮುಗಿದಿದೆ. ಕೆಲ ಬದಲಾವಣೆ ಬೇಕು ಎಂದು ಕೇಳಿದ್ದವು. ಹಲವು ಜಿಲ್ಲೆಗಳಿಂದ ಇಂತಹ ಕೂಗು ಕೇಳಿ ಬಂದಿತ್ತು ಎಂದು ಹೇಳಿದರು.

ಇನ್ನು 15 ತಾಲೂಕುಗಳನ್ನು ಬರಪಟ್ಟಿಗೆ ಸೇರಿಸುತ್ತೇವೆ

ಇನ್ನೂ 45 ತಾಲೂಕುಗಳನ್ನು ಬರ ತಾಲೂಕುಗಳ ವ್ಯಾಪ್ತಿಯಲ್ಲಿ ನಾವು ಸೇರಿಸಿಲ್ಲ. ಅದರಲ್ಲಿ ಹತ್ತು ಹದಿನೈದು ತಾಲೂಕುಗಳನ್ನು ನಾವು ಸೇರಿಸಬೇಕಿದೆ. ಯಾವ ತಾಲೂಕುಗಳಲ್ಲಿ ಮಳೆ ಬರಲಿಲ್ಲವೋ ಅಂತಹ ತಾಲೂಕುಗಳಲ್ಲಿ ಮತ್ತೆ ಸರ್ವೆ ಮಾಡಿಸಿ ಮುಂದಿನ ತಿಂಗಳಿನ ಒಳಗೆ ಅದನ್ನು ಸಹ ಸೇರಿಸುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಹಸಿರು ಬರ ಎಂದು ನಮೂದು

ಬೇರೆ ರಾಜ್ಯಗಳಲ್ಲಿ ಬರ ಇದ್ದರೂ ನಮ್ಮ ರಾಜ್ಯದಲ್ಲಿ ಮೊದಲು ಬರ ಘೋಷಣೆ ಮಾಡಿದ್ದೇವೆ. ಕೇಂದ್ರಕ್ಕೆ ಕಾಲ ಕಾಲಕ್ಕೆ ಮಾಹಿತಿ ನೀಡಿದ್ದೇವೆ. ಹಸಿರು ಬರ ಅಂತ ಸೇರಿಸಿದ್ದೇವೆ. ಹಸಿರು ಇದ್ದರೂ ಬೆಳೆ ಆಗುತ್ತಿಲ್ಲ. ಏಕೆಂದರೆ ಕಾಯಿ ಕಟ್ಟುವಾಗ ಮಳೆ ಬಾರದೇ ಬೆಳೆ ಆಗಿಲ್ಲ. ವೈಜ್ಞಾನಿಕ ವರದಿ ಕೊಡುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಹಸಿರು ಇದ್ದರೂ ಈ ಬಾರಿ ಬೆಳೆ ಆಗಿಲ್ಲ. ಕೇಂದ್ರದವರು ಸ್ಯಾಟಲೈಟ್ ಇಮೇಜ್‌ ನೋಡಿ ತೀರ್ಮಾನಕ್ಕೆ ಬರಬಾರದು ಅಂತ ಈ ರಿಪೋರ್ಟ್ ಕಳುಹಿಸುತ್ತಿದ್ದೇವೆ. ಸಂಪುಟದ ಒಪ್ಪಿಗೆ ಪಡೆದು ಕೇಂದ್ರಕ್ಕೆ ವರದಿಯನ್ನು ಕಳುಹಿಸಿ ಕೊಡುತ್ತೇವೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ಈ ಮೊದಲು 20% ಮಳೆ ಕೊರತೆ ಇದ್ದರೆ ಬರ ಅಂತ ಘೋಷಣೆ ಮಾಡಬಹುದಿತ್ತು. ಈಗ ಶೇಕಡಾ 60ರಷ್ಟು ಮಳೆ ಕೊರತೆ ಇರಬೇಕು ಅಂತ ಹೊಸ ರೂಲ್ಸ್ ಮಾಡಲಾಗಿದೆ. ಮೂರು ವಾರ ಮಳೆ ಬಾರದೇ ಕೊನೆಯ ಒಂದು ದಿನ ಮಳೆ ಬಂದರೂ ಬರ ಅಂತ ಘೋಷಣೆ ಮಾಡಲು ಆಗಲ್ಲ. ಸ್ಯಾಟಲೈಟ್ ಇಮೇಜ್ ಮೂಲಕ ಬರ ಘೋಷಣೆ ಮಾಡುವುದು ಸರಿಯಲ್ಲ. ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಕೆಲ ಬದಲಾವಣೆ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರಕ್ಕೆ ಹಾಗಾಗಿ ಸಿಎಂ ಪತ್ರ ಬರೆದಿದ್ದಾರೆ. ಅಧಿಕಾರಿಗಳಿಗೆ ಪತ್ರದ ಮುಖೇನ ತಿಳಿಸಿ ಎಂದು ಕೇಂದ್ರದವರು ಹೇಳಿದ್ದಾರೆ. ಆ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ಇದನ್ನೂ ಓದಿ: Hookah Bar : ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ: ಸಚಿವ ದಿನೇಶ್ ಗುಂಡೂರಾವ್

ಅಕ್ಟೋಬರ್ ಕೊನೆಯವರೆಗೂ ನಮಗೆ ಬರಗಾಲ ತಾಲೂಕುಗಳ ಸೇರ್ಪಡೆಗೆ ಅವಕಾಶ ಇದೆ. ಹದಿನೈದರಿಂದ 20 ತಾಲೂಕುಗಳ ಶಾಸಕರಿಂದ ನಮಗೆ ಒತ್ತಾಯ ಇದೆ. ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಶಾಸಕರು ಮನವಿ ಮಾಡಿದ್ದಾರೆ. ಅವುಗಳನ್ನು ಸೇರ್ಪಡೆ ಮಾಡಲು ಸಿಎಂ ನಮಗೆ ಹೇಳಿದ್ದಾರೆ. ಆ ಕೆಲಸ ಮಾಡುತ್ತಿದ್ದೇವೆ. ಬಯಲುಸೀಮೆ ತಾಲೂಕುಗಳು ಜಾಸ್ತಿ ಇವೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಅಡ್ಡಿ ಆಗುತ್ತಿವೆ. ಇನ್ನೂ ಹದಿನೈದು ತಾಲೂಕುಗಳನ್ನು ಸೇರಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Exit mobile version