ನವದೆಹಲಿ: ಕರ್ನಾಟಕದಲ್ಲಿ ಬರಗಾಲದ (Drought In Karnataka) ಹಿನ್ನೆಲೆಯಲ್ಲಿ ಬರ ಪರಿಹಾರ ನೀಡುವ ಕುರಿತು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ನಿಧಿಯಲ್ಲಿ ಕರ್ನಾಟಕಕ್ಕೆ ಕೂಡಲೇ ಪರಿಹಾರ (Drought Relief) ನೀಡುವಂತೆ ಕೇಂದ್ರ ಸರ್ಕಾರಕ್ಕೆ (Central Government) ಆದೇಶಿಸಬೇಕು ಎಂಬ ಕುರಿತು ಕರ್ನಾಟಕ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. “ಒಂದು ವಾರದಲ್ಲಿಯೇ ಬರ ಪರಿಹಾರ ನೀಡುವ ಕುರಿತು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ” ಎಂಬುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
“ಒಂದು ವಾರದಲ್ಲಿ ಬರ ಪರಿಹಾರದ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ, ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯವು ಒಂದು ವಾರ ಸಮಯಾವಕಾಶ ನೀಡಬೇಕು” ಎಂದು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದರು. ಕೇಂದ್ರ ಸರ್ಕಾರದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಏಪ್ರಿಲ್ 29ಕ್ಕೆ ವಿಚಾರಣೆ ಮುಂದೂಡಿತು. ಇದರೊಂದಿಗೆ ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಕರ್ನಾಟಕ ಸರ್ಕಾರಕ್ಕೆ ಭಾರಿ ಮುನ್ನಡೆಯಾದಂತಾಗಿದೆ.
Centre informs Supreme Court that something will happen before next Monday (April 29) on the matter relating to Karnataka State's plea seeking financial assistance for drought relief.
— ANI (@ANI) April 22, 2024
Supreme Court adjourns hearing till April 29 pic.twitter.com/GH4TlrWXJE
ಕರ್ನಾಟಕಕ್ಕೆ ಬರ ಪರಿಹಾರ ವಿತರಣೆ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ತೀವ್ರ ಜಟಾಪಟಿ ಉಂಟಾಗಿದೆ. ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ತೆರಿಗೆ ಪಾಲು ನೀಡದ ಕೇಂದ್ರ ಸರ್ಕಾರವು ಬರ ಪರಿಹಾರವನ್ನೂ ನೀಡದೆ ಅನ್ಯಾಯ ಮಾಡುತ್ತಿದೆ. ಇನ್ನಾದರೂ ಬರ ಪರಿಹಾರ ನೀಡಬೇಕು ಎಂಬುದಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಆಗ್ರಹಿಸಿತ್ತು. ಕೊನೆಗೆ ನಮಗೆ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂಬುದಾಗಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಸರ್ಕಾರದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಪಾಲಿಸಬೇಕು ಎಂದಿತ್ತು. “ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಪಾಲಿಸಬೇಕು. ಎರಡು ವಾರಗಳಲ್ಲಿ ಬರ ಪರಿಹಾರದ ಕುರಿತು ಉತ್ತರ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಎಂದಿಗೂ ಸ್ಪರ್ಧೆ ಇರಬಾರದು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು. ಇತ್ತೀಚೆಗೆ ಹಲವು ರಾಜ್ಯ ಸರ್ಕಾರಗಳು ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಿವೆ. ಇಂತಹ ಬೆಳವಣಿಗೆಗಳು ಸರಿಯಲ್ಲ” ಎಂದು ತಿಳಿಸಿತ್ತು.
ಇದನ್ನೂ ಓದಿ: Lok Sabha Election 2024: ಬರ ಪರಿಹಾರ ಕೊಡುವಂತೆ ಕೇಂದ್ರಕ್ಕೆ ಸೂಚನೆ ಕೊಡಿ; ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮೊರೆ