ಚಿತ್ರದುರ್ಗ: ಇಲ್ಲಿನ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮದಲ್ಲಿ ಈಜಲು ಹೋಗಿದ್ದ ಐವರಲ್ಲಿ ಮೂವರು ನೀರು ಪಾಲಾಗಿರುವ (Drowned in lake) ದುರ್ಘಟನೆ ನಡೆದಿದೆ. ಸಂಜಯ್ (18) ಎಚ್.ಡಿ ಪುರ, ಗೀರೀಶ್ (18) ನಂದನಹೊಸೂರು ಗೊಲ್ಲರಹಟ್ಟಿ, ಮನು (18) ಕಣಿವೆಜೋಗಿಹಳ್ಳಿ ಮೃತ ದುರ್ದೈವಿಗಳು.
ಯುವಕರು ಪಿಯುಸಿ ಪರೀಕ್ಷೆಯನ್ನು ಮುಗಿಸಿ ತಮ್ಮ ಊರಿಗೆ ಬಂದಿದ್ದರು. ರಜೆ ಇದ್ದ ಕಾರಣಕ್ಕೆ ಸ್ನೇಹಿತರೊಂದಿಗೆ ಗುಂಡಿ ಕೆರೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಕೆರೆಯಲ್ಲಿ ತುಂಬಾ ಆಳ ಇರುವುದು ತಿಳಿಯದೇ ಮುಂದಕ್ಕೆ ಈಜಲು ಹೋಗಿದ್ದಾರೆ. ಆದರೆ, ಆಗ ಇವರು ತೀರಾ ಬಳಲಿದ್ದಾರೆ. ಕಾರಣ ದಡ ಸೇರಲು ಸಾಧ್ಯವಾಗದೇ ಐವರಲ್ಲಿ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದು, ವಿಷಯ ತಿಳಿಯುತ್ತಿದ್ದಂತೆ ನೂರಾರು ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಚಿತ್ರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜಲಾಶಯದಲ್ಲಿ ಈಜಲು ಹೋಗಿದ್ದ ವ್ಯಕ್ತಿ ನೀರು ಪಾಲು
ಮುಂಡಗೋಡ: ಜಲಾಶಯದಲ್ಲಿ ಈಜಲು ಹೋಗಿದ್ದ ವ್ಯಕ್ತಿಯೊಬ್ಬರು ನೀರಲ್ಲಿ ಮುಳುಗಿ (Drowned in Water) ಮೃತಪಟ್ಟ ಘಟನೆ ಮಂಗಳವಾರ (ಮಾ.28) ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಜಲಾಶಯದಲ್ಲಿ ಜರುಗಿದೆ.
ನ್ಯಾಸರ್ಗಿ ಗ್ರಾಮದ ಲಕ್ಷ್ಮಣ ಭೀಮಣ್ಣ ಭೋವಿ (44) ಮೃತರು. ಮಂಗಳವಾರ ಮಧ್ಯಾಹ್ನ ಜಲಾಶಯಕ್ಕೆ ಈಜಲು ಇಳಿದಾಗ ಸುಸ್ತಾಗಿದ್ದರಿಂದ ನೀರಿನಲ್ಲಿ ಮುಳುಗಿದ್ದಾರೆ.
ಇದನ್ನೂ ಓದಿ: Ram Navami 2023: ಬೆಂಗಳೂರಲ್ಲಿ ಮಾ.30ರಂದು ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ; ಬಿಬಿಎಂಪಿ ಆದೇಶ
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಜಲಾಶಯದಲ್ಲಿ ಮೃತದೇಹದ ಹುಡುಕಾಟ ನಡೆಸಿದರು. ಆದರೆ, ಶವ ಪತ್ತೆಯಾಗದೇ ಇರುವ ಕಾರಣಕ್ಕೆ ಪಿಎಸ್‌ಐ ನಿಂಗಪ್ಪ ಜಕ್ಕಣ್ಣ ಅವರೇ ಜಲಾಶಯಕ್ಕೆ ಇಳಿದು ಶೋಧಿಸಿ, ಮೃತದೇಹವನ್ನು ಹೊರತೆಗೆದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.