ಗದಗ: ಸ್ವಾತಂತ್ರ್ಯ ದಿನಾಚರಣೆಯ (Independence day) ಸಂಭ್ರಮದ ನಡುವೆಯೇ ರಜೆಯ ದಿನ ದನದ ಮೈತೊಳೆಯಲೆಂದು ಹೋಗಿ ಕೆರೆಯ ನೀರಿನಲ್ಲಿ ಮುಳುಗಿದ್ದ (Drowned in Pond) ಇಬ್ಬರು ಬಾಲಕರ ಮೃತದೇಹಗಳನ್ನು (two Boys dead) ಮೇಲೆತ್ತಲಾಗಿದೆ.
ಗದಗನ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಂಡದಲ್ಲಿ ಮಹ್ಮದ್ ಅಮನ್ ಹುಬ್ಬಳ್ಳಿ (12) ಹಾಗೂ ಸಂತೋಷ್ ಕುಂಬಾರ (14) ಎಂಬ ಬಾಲಕರು ನೀರುಪಾಲಾದವರು. ಮಂಗಳವಾರ ಮಧ್ಯಾಹ್ನದ ಹೊತ್ತು ಮಹಿಳೆಯೊಬ್ಬರು ದನಗಳ ಮೈತೊಳೆಯಲು ಕೃಷಿ ಹೊಂಡಕ್ಕೆ ತೆರಳಿದ್ದರು. ಆಗ ಅಮನ್, ಸಂತೋಷ್ ಮತ್ತು ಇನ್ನೊಬ್ಬ ಹುಡುಗ ಕೂಡಾ ಅವರ ಜತೆಗೆ ತೆರಳಿದ್ದರು.
ಈ ವೇಳೆ ಯಾರೋ ಒಬ್ಬ ಬಾಲಕ ನೀರಿಗೆ ಬಿದ್ದು ಮುಳುಗೇಳುತ್ತಿದ್ದ. ಅವನನ್ನು ರಕ್ಷಿಸಲೆಂದು ಮಹಿಳೆ ಮತ್ತು ಇತರ ಇಬ್ಬರು ನೀರಿಗೆ ಹಾರಿದ್ದಾರೆ. ಆದರೆ ನಾಲ್ಕೂ ಮಂದಿ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾರೆ. ಈ ವೇಳೆ ಆ ಭಾಗದಲ್ಲಿದ್ದ ಕೆಲವರು ಓಡಿ ಹೋಗಿ ಮಹಿಳೆ ಮತ್ತು ಒಬ್ಬ ಬಾಲಕನನ್ನು ರಕ್ಷಿಸಲಾಯಿತು. ಆದರೆ, ಇನ್ನಿಬ್ಬರ ಶವವೂ ಸಿಕ್ಕಿರಲೇ ಇಲ್ಲ.
ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸೇರಿ ಮಧ್ಯಾಹ್ನದಿಂದ ಸಂಜೆಯವರೆಗೂ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿಯ ಸಾಹಸದ ಫಲವಾಗಿ ತಡರಾತ್ರಿಯ ಹೊತ್ತು ಇಬ್ಬರು ಬಾಲಕರಲ್ಲಿ ಒಬ್ಬನಾದ ಸಂತೋಷ್ ಕುಂಬಾರn (14) ಮೃತದೇಹ ಪತ್ತೆಯಾಗಿದೆ. ಬುಧವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರಿಸಿದಾಗ ಇನ್ನೊಬ್ಬ ಬಾಲಕ ಶವ ಪತ್ತೆಯಾಗಿದೆ.
ಇದನ್ನೂ ಓದಿ: Youth Drowned : ಮುರ್ಡೇಶ್ವರ ಕಡಲಿನಲ್ಲಿ ಈಜಲುಹೋದ ಒಬ್ಬ ನೀರುಪಾಲು, ಮತ್ತೊಬ್ಬ ಪಾರು
ಕೊಪ್ಪಳ ನಗರದಲ್ಲಿ ನಿಲ್ಲದ ಕಳ್ಳರ ಹಾವಳಿ
ಕೊಪ್ಪಳ: ನಗರದಲ್ಲಿ ಮನೆಗಳಿಗೆ ನುಗ್ಗಿ ಕಳವು ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರ ನಿರ್ಲಕ್ಷ್ಯಕ್ಕೆ ಕಳ್ಳತನ ಕೇಂದ್ರವಾಗುತ್ತಿದೆಯಾ ಎಂಬ ಸಂಶಯ ಮೂಡಿದೆ. ಕಳೆದ ಎರಡು ದಿನಗಳಲ್ಲಿ ಕೊಪ್ಪಳ ನಗರದ ಬಸ್ಟ್ಯಾಂಡ್ ಸಮೀಪವೇ ಇರುವ ಎರಡು ಮನೆಗಳಲ್ಲಿ ಕಳ್ಳತನ ಮಾಡಲಾಗಿದೆ.
ಇಲ್ಲಿನ ರೇಷ್ಮಾ ಎಂಬವರ ಮನೆಯಲ್ಲಿ 5 ಗ್ರಾಂ ಬಂಗಾರ ಕಳ್ಳತನ ಮಾಡಲಾಗಿದ್ದರೆ, ರಂಜಾನಬಿ ಎಂಬವರ ಮನೆಯಲ್ಲಿ 4.5 ತೊಲೆ ಬಂಗಾರ ಕಳ್ಳತನವಾಗಿದೆ. ಈ ಕಳ್ಳರ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ರವಿವಾರ ರಾತ್ರಿ ಒಂದು ಗಂಟೆಗೆ ನಡೆದಿರುವ ಘಟನೆ ಇದಾಗಿದ್ದು, ಇದರಿಂದ ಅಕ್ಕಪಕ್ಕದ ಮನೆಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಕಳೆದ ಎರಡು ತಿಂಗಳಿನಲ್ಲಿ ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಹೆಚ್ಚು ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ.