ಮಂಗಳೂರು: ಕರ್ನಾಟಕದ ವಾಣಿಜ್ಯ, ಶೈಕ್ಷಣಿಕ ರಾಜಧಾನಿ ಎಂದೇ ಹೆಸರಾದ ಮಂಗಳೂರು ಮಾದಕ ದ್ರವ್ಯ ಜಾಲದಲ್ಲಿ (Drugs Mafia) ಮುಳುಗಿ ಉಡ್ತಾ ಮಂಗಳೂರು ಆಗುವ ಅಪಾಯಕಾರಿ ಸನ್ನಿವೇಶ ಎದುರಾಗಿದೆ. ಮಂಗಳೂರು ಪೊಲೀಸರು ಬುಧವಾರ ಬೃಹತ್ ಗಾಂಜಾ ದಂಧೆಯನ್ನು ಬೇಧಿಸಿದ್ದಾರೆ. ಇದರಲ್ಲಿ ಮಂಗಳೂರಿನ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರು ಮತ್ತು ವೈದ್ಯರು ಕೂಡಾ ಭಾಗಿಯಾಗಿರುವುದು ಆತಂಕಕಾರಿಯಾಗಿದೆ.
ನಾಲ್ವರು ವೈದ್ಯಕೀಯ ವಿದ್ಯಾರ್ಥಿನಿಯರು, ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ವೈದ್ಯರು ಸೇರಿದಂತೆ ೧೦ ಜನರನ್ನು ಬಂಧಿಸಲಾಗಿದೆ. ಇವರು ಕೆಎಂಸಿ ಅತ್ತಾವರ, ಕೆ.ಎಂ.ಸಿ ಮಣಿಪಾಲ, ಯೇನೆಪೋಯಾ ದೇರಳಕಟ್ಟೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವೈದ್ಯರಾಗಿದ್ದಾರೆ. ಇವರಲ್ಲಿ ಇಬ್ಬರು ಗಾಂಜಾ ಪೆಡ್ಲರ್‌ಗಳು.
ಬಂಧಿತರು ಇವರು
ಬಂಧಿತ ವಿದ್ಯಾರ್ಥಿನಿಯರು: ಡಾ. ನದಿಯಾ ಸಿರಾಜ್(24), ಡಾ.ವರ್ಷಿಣಿ ಪ್ರತಿ(26), ಡಾ.ರಿಯಾ ಚಡ್ಡ(22), ಡಾ.ಹೀರಾ ಬಸಿನ್(23).
ಬಂಧಿತ ವೈದ್ಯರು: ಡಾ.ಸಮೀರ್(32), ಮಣಿಮಾರನ್ ಮುತ್ತು(28)
ವೈದ್ಯ ವಿದ್ಯಾರ್ಥಿಗಳು: ಡಾ. ಭಾನು ದಹಿಯಾ(27), ಡಾ.ಕ್ಷಿತಿಜ್ ಗುಪ್ತ(23) ಬಂಧನ
ಬಂಧಿತ ಇತರರು: ಸ್ಥಳೀಯ ಮಹಮ್ಮದ್ ರವೂಪ್ ಅಲಿಯಾಸ್ ಗೌಸ್(34), ಇಂಗ್ಲೆಂಡ್ ಮೂಲದ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ.
ಕಾರ್ಯಾಚರಣೆ ಹೇಗೆ?
ಮಂಗಳೂರು, ಮಣಿಪಾಲದಲ್ಲಿ ಡ್ರಗ್ಸ್ ದಂಧೆ ಇರುವುದು ಬಹು ಹಿಂದಿನಿಂದಲೇ ಜಾಹೀರಾಗಿದೆ. ಈಗಾಗಲೇ ಹಲವು ಬಾರಿ ಬಂಧನವೂ ನಡೆದಿದೆ. ಆದರೆ, ಇದೇ ಮೊದಲ ಬಾರಿಗೆ ವೈದ್ಯರು ಕೂಡಾ ಈ ದಂಧೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಜತೆಗೆ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಡ್ರಗ್ಸ್ ದಂಧೆಯಲ್ಲಿ ಸಿಲುಕಿರುವುದು ಆತಂಕವನ್ನು ಹೆಚ್ಚಿಸಿದೆ.
ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ಮೂಲದ ಗಾಂಜಾ ಪೆಡ್ಲರ್ ನೀಲ್ ಕಿಶೋರಿ ಲಾಲ್ ರಾಮ್ ಜೀ(38) ಎಂಬಾತನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು. ಆತನ ವಿಚಾರಣೆಯನ್ನು ನಡೆಸುವ ವೇಳೆಗೆ ಮಂಗಳೂರಿನ ಡ್ರಗ್ಸ್ ಜಾಲದ ಇನ್ನಷ್ಟು ವಿಚಾರಗಳು ಬೆಳಕಿಗೆ ಬಂದವು.
ಆತ ನೀಡಿದ ಮಾಹಿತಿಯಂತೆ ಮಂಗಳೂರು ಮತ್ತು ಮಣಿಪಾಲದ ಮೆಡಿಕಲ್ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು, ವೈದ್ಯರು ಗಾಂಜಾ ದಾಸರಾಗಿರುವುದು ಬೆಳಕಿಗೆ ಬಂತು. ಪೊಲೀಸರು ಅವರ ಚಟುವಟಿಕೆಗಳನ್ನು ಗಮನಿಸಿ ಅವರನ್ನು ಸೆರೆ ಹಿಡಿದಿದ್ದಾರೆ. ಇವರು ತಾವು ಸ್ವತಃ ಗಾಂಜಾ ದಾಸರಾಗಿರುವುದಲ್ಲದೆ, ಬೇರೆಯವರಿಗೂ ಪೂರೈಕೆ ಮಾಡುವ ದಂಧೆ ನಡೆಸುತ್ತಿರುವ ಶಂಕೆಗಳಿವೆ.
ಏನೆಲ್ಲ ವಶಕ್ಕೆ?
ಬಂಧಿತರಿಂದ ಎರಡು ಕೆ.ಜಿ ಗಾಂಜಾ, ಒಂದು ನಕಲಿ ಪಿಸ್ತೂಲ್, ಡ್ರಾಗರ್ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ | Bengaluru Drugs Case | ಡ್ರಗ್ಸ್ ಕೇಸ್‌ನಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್, ಬಿಆರ್‌ಎಸ್ ಎಂಎಲ್‌ಎಗೆ ಇ.ಡಿ ನೋಟಿಸ್