ಮಂಗಳೂರು: ಮಂಗಳೂರಿನ ಮೆಡಿಕಲ್ ಕಾಲೇಜುಗಳಲ್ಲಿ ಬೆಳಕಿಗೆ ಬಂದಿರುವ ಗಾಂಜಾ ಡ್ರಗ್ಸ್ ದಂಧೆಯಲ್ಲಿ (Drugs Mafia) ಕೇವಲ ಮಾದಕ ಲೋಕ ಮಾತ್ರವಲ್ಲ, ಲಿವಿಂಗ್ ಟುಗೆದರ್, ಸೆಕ್ಸ್ ಮತ್ತು ಗರ್ಲ್‌ಫ್ರೆಂಡ್‌ಗಳನ್ನು ನಶೆಗೆ ಎಳೆಯುವ ಕರಾಳ ಲೋಕವೂ ಬೆಳಕಿಗೆ ಬಂದಿದೆ.
ಮಂಗಳೂರು ಪೊಲೀಸರು ಗಾಂಜಾ ಬಲೆಯಲ್ಲಿ ಬಿದ್ದಿದ್ದ, ಪೆಡ್ಲರ್‌ಗಳಾಗಿ ಕೆಲಸ ಮಾಡುತ್ತಿದ್ದ ನಾಲ್ವರು ವೈದ್ಯಕೀಯ ವಿದ್ಯಾರ್ಥಿನಿಯರು, ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ವೈದ್ಯರು ಸೇರಿದಂತೆ ೧೦ ಜನರನ್ನು ಬಂಧಿಸಿದ್ದಾರೆ. ಇವರು ಕೆಎಂಸಿ ಅತ್ತಾವರ, ಕೆ.ಎಂ.ಸಿ ಮಣಿಪಾಲ, ಯೇನೆಪೋಯಾ ದೇರಳಕಟ್ಟೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವೈದ್ಯರಾಗಿದ್ದಾರೆ. ಹತ್ತು ಮಂದಿಯಲ್ಲಿ ಇಬ್ಬರು ಗಾಂಜಾ ಪೆಡ್ಲರ್‌ಗಳು.
ಬಂಧಿತರು ಇವರು
ಬಂಧಿತ ವಿದ್ಯಾರ್ಥಿನಿಯರು: ಡಾ. ನದಿಯಾ ಸಿರಾಜ್(24), ಡಾ.ವರ್ಷಿಣಿ ಪ್ರತಿ(26), ಡಾ.ರಿಯಾ ಚಡ್ಡ(22), ಡಾ.ಹೀರಾ ಬಸಿನ್(23).
ಬಂಧಿತ ವೈದ್ಯರು: ಡಾ.ಸಮೀರ್(32), ಮಣಿಮಾರನ್ ಮುತ್ತು(28)
ವೈದ್ಯ ವಿದ್ಯಾರ್ಥಿಗಳು: ಡಾ. ಭಾನು ದಹಿಯಾ(27), ಡಾ.ಕ್ಷಿತಿಜ್ ಗುಪ್ತ(23) ಬಂಧನ
ಬಂಧಿತ ಇತರರು: ಸ್ಥಳೀಯ ಮಹಮ್ಮದ್ ರವೂಪ್ ಅಲಿಯಾಸ್ ಗೌಸ್(34), ಇಂಗ್ಲೆಂಡ್ ಮೂಲದ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ.
ಬಂಧಿತ ಹತ್ತು ಮಂದಿಯನ್ನು ತಡರಾತ್ರಿವರೆಗೂ ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಈ ವೇಳೆ ಆರೋಪಿಗಳು ಇನ್ನೂ ಹಲವರ ಹೆಸರುಗಳನ್ನು ಹೇಳಿದ್ದು, ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ.
ವೈದ್ಯರು, ವೈದ್ಯ ವಿದ್ಯಾರ್ಥಿಗಳು ಮತ್ತು ಪೆಡ್ಲರ್ ಆಗಿರುವ ನೀಲ್ ಇನ್ನೂ ಹಲವರು ತಮ್ಮ ಜಾಲದಲ್ಲಿರುವುದಾಗಿ ಹೇಳಿದ್ದಾರೆ. ನೀಲ್ ಇನ್ನೂ ಮೂರ್ನಾಲ್ಕು ಕಾಲೇಜುಗಳ ಹೆಸರು ಹೇಳಿರುವುದು ಮಂಗಳೂರಿನ ಶೈಕ್ಷಣಿಕ ಲೋಕದಲ್ಲಿ ಆತಂಕವನ್ನು ಸೃಷ್ಟಿಸಿದೆ.
ಲಿವಿಂಗ್ ಟುಗೆದರ್ ದಾರಿ!
ಈಗ ಬಂಧನಕ್ಕೆ ಒಳಗಾಗಿರುವ ವೈದ್ಯಕೀಯ ವಿದ್ಯಾರ್ಥಿನಿಯರು ಮಾದಕ ನಶೆಗೆ ಬೀಳಲು ಮುಖ್ಯ ಕಾರಣ ಅವರು ಲಿವಿಂಗ್ ಟುಗೆದರ್ ಸಂಬಂಧವನ್ನು ಹೊಂದಿರುವುದು ಎಂದು ತನಿಖೆ ವೇಳೆ ಬಯಲಾಗಿದೆ. ಇವರಲ್ಲಿ ಹೆಚ್ಚಿನವರು ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿದ್ದು, ಇಲ್ಲಿ ತಮಗೆ ಪರಿಚಯವಾಗುವ ಯುವಕರ ಜತೆ ಲಿವಿಂಗ್ ಟುಗೆದರ್ ಅಂತ ಒಂದೇ ರೂಮಿನಲ್ಲಿ ಇರುತ್ತಾರೆ. ಇಲ್ಲಿ ಸೆಕ್ಸ್ ಮತ್ತು ಮಾದಕ ನಶೆಯ ಲೋಕಗಳು ತೆರೆದುಕೊಳ್ಳುತ್ತವೆ.
ಒಮ್ಮೆ ಈ ಜಾಲಕ್ಕೆ ಪ್ರವೇಶ ಮಾಡಿದವರಿಗೆ ಹಿಂದೆ ಬರಲು ಸಾಧ್ಯವಾಗದೆ ಹುಡುಗರು ಹೇಳಿದಂತೆ ಕೇಳಿಕೊಂಡಿರಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಹೀಗಾಗಿ ಅವರು ಶಾಶ್ವತವಾಗಿ ಅವರ ಗುಲಾಮರಂತೆ ಇರಬೇಕಾಗುತ್ತದೆ.
ಲಿವಿಂಗ್ ಟುಗೆದರ್ ಲೋಕ ಹಲವು ವಿದ್ಯಾರ್ಥಿನಿಯರನ್ನು ನೇರವಾಗಿ ಮತ್ತಿನ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಮತ್ತಿನ ಲೋಕದಲ್ಲಿ ಅವರು ಹೇಗೆ ವರ್ತಿಸುತ್ತಾರೆ ಎನ್ನುವುದೇ ಗೊತ್ತಾಗದ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳಲಾಗಿದೆ.
ಮಂಗಳೂರಿನ ಹಲವು ಅಪಾರ್ಟ್ಮೆಂಟ್‌ಗಳಲ್ಲಿ ಲಿವಿಂಗ್ ಟುಗೆದರ್ ಹೆಸರಿನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಜತೆಯಾಗಿ ವಾಸ ಮಾಡುತ್ತಿದ್ದು, ಅಲ್ಲಿ ಬಾಯ್ ಫ್ರೆಂಡ್ ಗಳಿಂದ ಗಾಂಜಾ ರುಚಿ ಸವಿಯುತ್ತಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ವೈದ್ಯರು ಕೂಡಾ ಆಗಷ್ಟೇ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಬಂದಿದ್ದವರಾಗಿದ್ದು ಮೊದಲೇ ಸ್ವಲ್ಪ ಮಟ್ಟಿಗೆ ಚಟ ಹೊಂದಿದವರು ಈಗ ಮತ್ತೆ ದಾಸರಾಗುತ್ತಾರೆ ಎಂದು ತಿಳಿದುಬಂದಿದೆ.
ಇದೀಗ ಬಂಧಿತರಿಂದ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Drugs Menace | ಮಾದಕ ನಶೆಯಲ್ಲಿ ಸಿಲುಕಿದ ಚಿತ್ರನಟ, ಮ್ಯಾನೇಜರ್ ಅರೆಸ್ಟ್, 12.5 ಲಕ್ಷ ಮೌಲ್ಯದ ಗಾಂಜಾ ವಶ