ಮಂಗಳೂರು: ಮಂಗಳೂರು, ಮಣಿಪಾಲದ ಮೆಡಿಕಲ್ ಕಾಲೇಜುಗಳಲ್ಲಿ ಪತ್ತೆಯಾದ ಡ್ರಗ್ಸ್ ದಂಧೆ (Drugs mafia) ಇನ್ನಷ್ಟು ಕಾಲೇಜುಗಳಿಗೆ ವಿಸ್ತರಣೆಯಾಗಿರುವುದು ಬಯಲಿಗೆ ಬಂದಿದ್ದು, ಬುಧವಾರ ಬಂಧನವಾದ ೧೦ ಜನರಿಗೆ ಹೆಚ್ಚುವರಿಯಾಗಿ ಇನ್ನೂ ಮೂವರನ್ನು ಬಂಧಿಸಲಾಗಿದೆ. ಹೊಸದಾಗಿ ಬಂಧಿತರಾದವರಲ್ಲಿ ಒಬ್ಬ ಎಂ.ಡಿ. ವಿದ್ಯಾರ್ಥಿಯೂ ಇದ್ದಾನೆ.
ಮಂಗಳೂರು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬುಧವಾರ ನಾಲ್ವರು ವೈದ್ಯಕೀಯ ವಿದ್ಯಾರ್ಥಿನಿಯರು, ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ವೈದ್ಯರು ಸೇರಿದಂತೆ ೧೦ ಜನರನ್ನು ಬಂಧಿಸಲಾಗಿತ್ತು. ಬಂಧಿತರು ಕೆಎಂಸಿ ಅತ್ತಾವರ, ಕೆ.ಎಂ.ಸಿ ಮಣಿಪಾಲ, ಯೇನೆಪೋಯಾ ದೇರಳಕಟ್ಟೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವೈದ್ಯರಾಗಿದ್ದಾರೆ. ಹತ್ತು ಮಂದಿಯಲ್ಲಿ ಇಬ್ಬರು ಗಾಂಜಾ ಪೆಡ್ಲರ್‌ಗಳು. ಇದೀಗ ಮಂಗಳೂರಿನ ಇತರ ಕಾಲೇಜುಗಳ ಮೇಲೂ ಪೊಲೀಸರು ಕಣ್ಣಿಟ್ಟಿಟ್ಟು, ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇದೀಗ ತನಿಖೆ ಕರಾವಳಿ ಕಾಲೇಜಿಗೆ ವಿಸ್ತರಣೆಯಾಗಿದ್ದು, ಅಲ್ಲಿ ಇಬ್ಬರು ಸಿಕ್ಕಿಬಿದ್ದಿದ್ದಾರೆ.
ಮಂಗಳೂರಿನ ಕೆಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಈ ನಡುವೆ,
ಡಾ.ಹರ್ಷಕುಮಾರ್ ವಿ.ಎಸ್ ಎಂಬ ಇನ್ನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಕೆಎಂಸಿ ಮೆಡಿಕಲ್ ಕಾಲೇಜಿನಲ್ಲಿ ಪೆಥಾಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸುತ್ತಿದ್ಧಾನೆ. ತುಮಕೂರು ಮೂಲದ ಈತ ಅಂತಿಮ ವರ್ಷದ ವಿದ್ಯಾರ್ಥಿ.
ಮತ್ತೊಂದು ಕಾಲೇಜಿನಲ್ಲಿ ಕಾರ್ಯಾಚರಣೆ
ಮಂಗಳೂರಿನ ಕರಾವಳಿ ಕಾಲೇಜಿನಲ್ಲೂ ಗಾಂಜಾ ಘಾಟು ಕಾಣಿಸಿಕೊಂಡಿದ್ದು, ಇಲ್ಲಿನ ಡಿ ಫಾರ್ಮ್ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ. ಕೊಚ್ಚಿನ ಮೂಲದ ಅಡೋನ್ ದೇವ್ ಬಂಧಿತ ವಿದ್ಯಾರ್ಥಿ. ಇವನ ಜತೆಗೆ ಇನ್ನೂ ಒಬ್ಬನನ್ನು ಸೆರೆ ಹಿಡಿಯಲಾಗಿದೆ. ಒಟ್ಟಾರೆಯಾಗಿ ಹೊಸ ಕಾರ್ಯಾಚರಣೆಯಲ್ಲಿ ಮೂವರು ಬಲೆಗೆ ಬಿದ್ದಿದ್ದಾರೆ.
ಮೊದಲ ದಿನ ಸಿಕ್ಕಿಬಿದ್ದವರು ಇವರು
ಬಂಧಿತ ವಿದ್ಯಾರ್ಥಿನಿಯರು: ಡಾ. ನದಿಯಾ ಸಿರಾಜ್(24), ಡಾ.ವರ್ಷಿಣಿ ಪ್ರತಿ(26), ಡಾ.ರಿಯಾ ಚಡ್ಡ(22), ಡಾ.ಹೀರಾ ಬಸಿನ್(23).
ಬಂಧಿತ ವೈದ್ಯರು: ಡಾ.ಸಮೀರ್(32), ಮಣಿಮಾರನ್ ಮುತ್ತು(28)
ವೈದ್ಯ ವಿದ್ಯಾರ್ಥಿಗಳು: ಡಾ. ಭಾನು ದಹಿಯಾ(27), ಡಾ.ಕ್ಷಿತಿಜ್ ಗುಪ್ತ(23) ಬಂಧನ
ಬಂಧಿತ ಇತರರು: ಸ್ಥಳೀಯ ಮಹಮ್ಮದ್ ರವೂಪ್ ಅಲಿಯಾಸ್ ಗೌಸ್(34), ಇಂಗ್ಲೆಂಡ್ ಮೂಲದ ಪೆಡ್ಲರ್ ನೀಲ್ ಕಿಶೋರಿಲಾಲ್ ರಾಮ್ ಜೀ.
ಇದನ್ನೂ ಓದಿ | Drugs Mafia | ಇದು ಬರೀ ಮಾದಕ ಲೋಕವಲ್ಲ, ಲಿವಿಂಗ್ ಟುಗೆದರ್, ಸೆಕ್ಸ್ ಬೆರೆತ ವೈದ್ಯ ವಿದ್ಯಾರ್ಥಿಗಳ ಕರಾಳ ಲೋಕ