ಮಂಗಳೂರು: ಮನೆಯಲ್ಲಿ ಹೆತ್ತವರು, ಶಾಲೆಗಳಲ್ಲಿ ಶಿಕ್ಷಕರು, ಸಮಾಜದಲ್ಲಿ ಪೊಲೀಸರು ಮಕ್ಕಳನ್ನು ಹಾದಿ ತಪ್ಪದಂತೆ ನೋಡಿಕೊಳ್ಳುವ ರಕ್ಷಕರಾಗಿ ಕೆಲಸ ಮಾಡಿದರೂ ಸಮಾಜವಿದ್ರೋಹಿ ಶಕ್ತಿಗಳು (Drugs Mafia) ಅವರ ಕಣ್ಣಿಗೆ ಮಣ್ಣೆರಚಿ ಮಕ್ಕಳನ್ನು ಡ್ರಗ್ಸ್ ಕಡೆಗೆ ಎಳೆಯುವ ಪ್ರಯತ್ನಗಳನ್ನು (Drug Peddlers) ಮಾಡುತ್ತಲೇ ಇರುತ್ತಾರೆ. ಅಂಥಹುದೊಂದು ಭಯಾನಕ ವ್ಯೂಹ ಮಂಗಳೂರಿನಲ್ಲಿ ಪತ್ತೆಯಾಗಿದೆ.
ಮಕ್ಕಳಿಗೆ ಚಾಕೊಲೇಟ್ ರೂಪದಲ್ಲಿ ಮಾದಕ ದ್ರವ್ಯಗಳನ್ನು ಉಣಿಸುವ ಈ ಜಾಲ, ಯುವಕರನ್ನೂ ಅದೇ ರೀತಿಯಲ್ಲಿ ಬುಟ್ಟಿಗೆ ಹಾಕಿಕೊಂಡಿದೆ. ಇದು ಭಾಂಗ್ ಚಾಕೊಲೇಟ್ (Bhang Chocolate). ಭಾಂಗ್ ಎಂಬ ಮಾದಕ ದ್ರವ್ಯವನ್ನು ಸೇರಿಸಿ ಮಾಡಿದ ಪೆಪ್ಪರ್ ಮಿಂಟ್‌ನಂಥ ಚಾಕೊಲೇಟ್. ಅತ್ಯಂತ ರುಚಿಕರವಾಗಿರುವ ಈ ಚಾಕೊಲೇಟನ್ನು ಮಕ್ಕಳು ಬೆನ್ನು ಬಿಡದೆ ತಿನ್ನುವ ಚಾಳಿಯನ್ನು ಮೈಗೂಡಿಸಿಕೊಳ್ಳುತ್ತಿರುವ ಅಂಶ ಬೆಳಕಿಗೆ ಬಂದಿದೆ. ರುಚಿಕರ ಚಾಕೊಲೇಟ್ ಮೂಲಕ ಅವರನ್ನು ನಿಧಾನಕ್ಕೆ ಮಾದಕ ಲೋಕಕ್ಕೆ ಎಳೆಯುವ ಈ ದುಷ್ಟ ತಂತ್ರವೀಗ ಬಯಲಾಗಿದೆ. ಇದನ್ನು ಬೆನ್ನಟ್ಟಿ ಹೋದ ಮಂಗಳೂರು ಪೊಲೀಸರಿಗೆ ಆತಂಕ ಹುಟ್ಟಿಸುವ ವಿಚಾರಗಳು ತೆರೆದುಕೊಂಡವು.
108 ಕೆಜಿ ಭಾಂಗ್ ಚಾಕಲೇಟ್ ವಶಕ್ಕೆ
ಮಂಗಳೂರಿನಲ್ಲಿ ಅಂಗಡಿಗಳಲ್ಲಿ ಈ ರೀತಿ ಪದೇಪದೆ ತಿನ್ನಬೇಕು ಅನಿಸುವ ಚಾಕೊಲೇಟ್ ಮಾರಾಟ ಜೋರಾಗಿದೆ ಎಂಬ ಅಂಶ ತಿಳಿಯುತ್ತಲೇ ಪೊಲೀಸರು ನೂರಾರು ಅಂಗಡಿಗಳಿಗೆ ದಾಳಿ ಮಾಡಿದ್ದಾರೆ. ಅಲ್ಲೆಲ್ಲ ಸಾಮಾನ್ಯ ಚಾಕೊಲೇಟ್‌ಗಳಂತೆ ಇವುಗಳ ಮಾರಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹಲವು ಕಡೆ ನಡೆಸಿದ ದಾಳಿಯಲ್ಲಿ ಇದುವರೆಗೆ ಪತ್ತೆಯಾಗಿರುವ ಚಾಕೊಲೇಟ್‌ನ ಪ್ರಮಾಣ 108 ಕೆಜಿ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ (Mangalore police Commissioner Kuldeep Jain) ಅವರೇ ತಿಳಿಸಿದ್ದಾರೆ.
ಕುಲದೀಪ್ ಜೈನ್ ಅವರು ಹೇಳಿದ್ದೇನು?
ಮಂಗಳೂರಿನ ಕೆಲವು ಅಂಗಡಿಗಳಲ್ಲಿ ಮತ್ತು ಬರಿಸುವ ಚಾಕಲೇಟ್‌ಗಳ ಮಾರಾಟ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದನ್ನು ಆಧರಿಸಿ ನೂರಕ್ಕೂ ಹೆಚ್ಚು ಅಂಗಡಿಗಳಲ್ಲಿ ಶೋಧ ಕಾರ್ಯ ನಡೆಸಿ 108 ಕೆಜಿ ಬಾಂಗ್ ವಶಕ್ಕೆ ಪಡೆದಿದ್ದೇವೆ ಎಂದು ಕುಲದೀಪ್ ಜೈನ್ ತಿಳಿಸಿದರು.
ಭಾಂಗ್ ಚಾಕಲೇಟನ್ನು ಎಫ್ ಎಸ್ ಎಲ್ ವರದಿಗಾಗಿ ಕಳುಹಿಸಿದ್ದೇವೆ. ಈ ಚಾಕಲೇಟ್ ನಲ್ಲಿ ಮಾದಕ ದ್ರವ್ಯ ಖಂಡಿತಾ ಇದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅವರು ಹೇಳಿದರು.
ಉತ್ತರ ಪ್ರದೇಶದಿಂದ ಬರುತ್ತಿತ್ತು ಬಾಂಗ್ ಚಾಕಲೇಟ್
ಈ ಭಾಂಗ್ ಮಿಶ್ರಿತ ಚಾಕಲೇಟ್‌ಗಳನ್ನು ಉತ್ತರ ಪ್ರದೇಶದಿಂದ ತರಿಸಲಾಗುತ್ತಿದೆ ಎಂದು ಅಂಗಡಿಗಳ ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ಚಾಕಲೇಟ್ ಮಾರಾಟ ಮಾಡಿದ ಆರೋಪಿಗಳಿಗೆ ನೋಟಿಸ್ ನೀಡಿದ್ದೇವೆ. ವರದಿ ಬಂದ ಮೇಲೆ ಎನ್ ಡಿ ಪಿ ಎಸ್ ಪ್ರಕರಣ ದಾಖಲು ಮಾಡಲಿದ್ದೇವೆ ಎಂದು ಅವರು ವಿವರಿಸಿದರು.
ಪಾನ್ ಬೀಡಾ ಅಂಗಡಿಗಳಲ್ಲಿ ಹೆಚ್ಚು ಮಾರಾಟ
ಈ ಭಾಂಗ್ ಮಿಶ್ರಿತ ಚಾಕಲೇಟ್‌ಗಳನ್ನು ಆರೋಪಿಗಳು ಪಾನ್ ಬೀಡಾ ಅಂಗಡಿಗಳಲ್ಲಿ ಹೆಚ್ಚು ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲಿ ಒಮ್ಮೆ ತಿಂದವರು ಚೆನ್ನಾಗಿದೆ ಎಂದು ಮತ್ತೆ ಮತ್ತೆ ಬರುತ್ತಿದ್ದರು. ಇದರಿಂದ ಡಿಮ್ಯಾಂಡ್ ಹೆಚ್ಚಾಗುತ್ತಿದ್ದಂತೆಯೇ ತರಿಸಿಕೊಳ್ಳುವ ಪ್ರಮಾಣವೂ ಹೆಚ್ಚಾಗುತ್ತಿತ್ತು.
ಇದನ್ನೂ ಓದಿ: Terrorists in Bengaluru: ಹಿಂದೂ- ಮುಸ್ಲಿಂ ಗಲಭೆ ಸೃಷ್ಟಿಗೆ ಉಗ್ರರ ಸ್ಕೆಚ್, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹ!
ಪೊಲೀಸರಿಗೆ ಮಾಹಿತಿ ಕೊಟ್ಟಿದ್ದೇ ಮಕ್ಕಳು
ಭಾಂಗ್ ಮಿಶ್ರಿತ ಚಾಕಲೇಟ್‌ಗಳ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇ ವಿದ್ಯಾರ್ಥಿಗಳು ಎಂಬ ಕುತೂಹಲಕಾರಿ ಮತ್ತು ಆಶಾದಾಯಕ ಅಂಶವನ್ನು ಅವರು ವಿವರಿಸಿದರು.
ನಗರದಲ್ಲಿ ಡ್ರಗ್ಸ್ ವಿಚಾರದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಗಾರ ಮಾಡುತ್ತಿದ್ದೇವೆ. ಸಾಮಾಜಿಕ ಕಾಳಜಿ, ಇಂಥ ದುಷ್ಚಟಗಳು ಯಾರಿಗಾದರೂ ಇದ್ದರೆ ಮಾಹಿತಿ ಕೊಡಿ ಎಂದು ಹೇಳುತ್ತಿದ್ದೆವು. ಇದರಿಂದ ಪ್ರೇರಿತರಾದ ವಿದ್ಯಾರ್ಥಿಗಳಿಂದಲೇ ಈ ಬಾಂಗ್ ಚಾಕಲೇಟ್ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಕುಲದೀಪ್ ಜೈನ್ ಹೇಳಿದ್ದಾರೆ.
ವಿದ್ಯಾರ್ಥಿಗಳು ನೀಡಿದ ಮಾಹಿತಿ ಆಧಾರದ ಮೇಲೆ ನಗರದ ನೂರಕ್ಕೂ ಅಧಿಕ ಅಂಗಡಿಗಳಿಗೆ ಪರಿಶೀಲನೆ ಮಾಡಿದ್ದೇವೆ ಎಂದು ತಿಳಿಸಿದ ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಅವರು ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುತ್ತೇವೆ ಎಂದರು.