ಮಂಗಳೂರು: ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು (Drugs Mafia) ಸಾಗಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್‌ಗಳನ್ನು (Drug Peddlers) ಮಂಗಳೂರು ಸಿಸಿಬಿ ಪೊಲೀಸರು (Mangalore CCB Police) ಬಂಧಿಸಿದ್ದಾರೆ. ಅವರ ಬಳಿ ಪಿಸ್ತೂಲು, ಸಜೀವ ಗುಂಡುಗಳು ಕೂಡಾ ಪತ್ತೆಯಾಗಿದ್ದು, ಇದೊಂದು ದೊಡ್ಡ ಜಾಲವಾಗಿರುವ ಶಂಕೆ ವ್ಯಕ್ತವಾಗಿದೆ.
ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಂಗಳೂರಿನ ಉಳ್ಳಾಲ ತಾಲೂಕು ವ್ಯಾಪ್ತಿಯ ಪಿಲಿಕೂರು ಎಂಬಲ್ಲಿ ಪರಂಗಿಪೇಟೆಯ ನಿಯಾಜ್ (28), ತಲಪಾಡಿಯ ನಿಶಾದ್ (31) ಹಾಗೂ ಪಡೀಲ್‌ನ ರಝೀನ್ (24) ಎಂಬವರನ್ನು ಬಂಧಿಸಲಾಗಿದೆ. ಈ ವಿಚಾರವನ್ನು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ (Mangalore police Commissioner Kuldeep Jain) ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೂವರು ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಾಟ ಮಾಡುತ್ತಿದ್ದರು. ಅವರ ಕೈಯಿಂದ 180 ಗ್ರಾಂ ತೂಕದ 9 ಲಕ್ಷ ಮೌಲ್ಯದ ಎಂಡಿಎಂಎ ಮಾದಕವಸ್ತು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ನಾಲ್ಕು ಮೊಬೈಲ್ ಫೋನ್, ನಗದು, ಪಿಸ್ತೂಲ್, ಸಜೀವ ಗುಂಡುಗಳು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ವಸ್ತುಗಳ ಒಟ್ಟು ಮೌಲ್ಯ 27 ಲಕ್ಷ ರೂ. ಆಗಬಹುದು ಎಂದು ವಿವರಿಸಿದರು.
ಪೊಲೀಸರ ಮೇಲೂ ಹಲ್ಲೆ ಮಾಡಿದ್ದರು
ಈ ಡ್ರಗ್ ಪೆಡ್ಲರ್‌ಗಳು ಸಾಮಾನ್ಯದವರೇನೂ ಅಲ್ಲ. ಆರೋಪಿ ನಿಯಾಜ್ ವಿರುದ್ಧ ಉರ್ವ, ಕೊಣಾಜೆ ಠಾಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳೂ ಇವೆ. ಇದರ ಜತೆಗೆ ಕೊಲೆ ಯತ್ನ, ದರೋಡೆ, ಮಾದಕ ವಸ್ತು ಮಾರಾಟದ ಕೇಸುಗಳಿವೆ ಎಂದು ಹೇಳಲಾಗಿದೆ.
ತಮ್ಮ ಅಕ್ರಮದ ವಿರುದ್ಧ ಮಾಹಿತಿ ನೀಡುವವರನ್ನು ಬೆದರಿಸಲು ಪಿಸ್ತೂಲ್ ಇಟ್ಟುಕೊಂಡಿದ್ದರು ಎಂದು ಹೇಳಲಾಗಿದೆ.
ಮಂಗಳೂರಿನಲ್ಲಿ 108 ಕೆಜಿ ಬಾಂಗ್ ಚಾಕಲೇಟ್ ವಶಕ್ಕೆ
ಇದೇ ವೇಳೆ ಮಂಗಳೂರಿನಲ್ಲಿ ಮತ್ತು ಬರಿಸುವ ಬಾಂಗ್ ಚಾಕಲೇಟ್ ಪೂರೈಕೆ ಮಾಡುವ ಜಾಲವೊಂದು ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದ್ದು ಸುಮಾರು 108 ಕೆಜಿ ಬಾಂಬ್ ಚಾಕಲೇಟ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಮಂಗಳೂರಿನ ಕೆಲವು ಅಂಗಡಿಗಳಲ್ಲಿ ಮತ್ತು ಬರಿಸುವ ಚಾಕಲೇಟ್‌ಗಳ ಮಾರಾಟ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದನ್ನು ಆಧರಿಸಿ ನೂರಕ್ಕೂ ಹೆಚ್ಚು ಅಂಗಡಿಗಳಲ್ಲಿ ಶೋಧ ಕಾರ್ಯ ನಡೆಸಿ 108 ಕೆಜಿ ಬಾಂಗ್ ವಶಕ್ಕೆ ಪಡೆದಿದ್ದೇವೆ ಎಂದು ಕುಲದೀಪ್ ಜೈನ್ ತಿಳಿಸಿದರು.
ಬಾಂಗ್ ಚಾಕಲೇಟನ್ನು ಎಫ್ ಎಸ್ ಎಲ್ ವರದಿಗಾಗಿ ಕಳುಹಿಸಿದ್ದೇವೆ. ಈ ಚಾಕಲೇಟ್ ನಲ್ಲಿ ಮಾದಕ ದ್ರವ್ಯ ಖಂಡಿತಾ ಇದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅವರು ಹೇಳಿದರು.
ಉತ್ತರ ಪ್ರದೇಶದಿಂದ ಬರುತ್ತಿತ್ತು ಬಾಂಗ್ ಚಾಕಲೇಟ್
ಈ ಬಾಂಗ್ ಮಿಶ್ರಿತ ಚಾಕಲೇಟ್‌ಗಳನ್ನು ಉತ್ತರ ಪ್ರದೇಶದಿಂದ ತರಿಸಲಾಗುತ್ತಿದೆ ಎಂದು ಅಂಗಡಿಗಳ ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ಚಾಕಲೇಟ್ ಮಾರಾಟ ಮಾಡಿದ ಆರೋಪಿಗಳಿಗೆ ನೋಟಿಸ್ ನೀಡಿದ್ದೇವೆ. ವರದಿ ಬಂದ ಮೇಲೆ ಎನ್ ಡಿ ಪಿ ಎಸ್ ಪ್ರಕರಣ ದಾಖಲು ಮಾಡಲಿದ್ದೇವೆ ಎಂದು ಅವರು ವಿವರಿಸಿದರು.
ಪಾನ್ ಬೀಡಾ ಅಂಗಡಿಗಳಲ್ಲಿ ಹೆಚ್ಚು ಮಾರಾಟ
ಈ ಬಾಂಗ್ ಮಿಶ್ರಿತ ಚಾಕಲೇಟ್‌ಗಳನ್ನು ಆರೋಪಿಗಳು ಪಾನ್ ಬೀಡಾ ಅಂಗಡಿಗಳಲ್ಲಿ ಹೆಚ್ಚು ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲಿ ಒಮ್ಮೆ ತಿಂದವರು ಚೆನ್ನಾಗಿದೆ ಎಂದು ಮತ್ತೆ ಮತ್ತೆ ಬರುತ್ತಿದ್ದರು. ಇದರಿಂದ ಡಿಮ್ಯಾಂಡ್ ಹೆಚ್ಚಾಗುತ್ತಿದ್ದಂತೆಯೇ ತರಿಸಿಕೊಳ್ಳುವ ಪ್ರಮಾಣವೂ ಹೆಚ್ಚಾಗುತ್ತಿತ್ತು.
ಪೊಲೀಸರಿಗೆ ಮಾಹಿತಿ ಕೊಟ್ಟಿದ್ದೇ ಮಕ್ಕಳು
ಬಾಂಗ್ ಮಿಶ್ರಿತ ಚಾಕಲೇಟ್‌ಗಳ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇ ವಿದ್ಯಾರ್ಥಿಗಳು ಎಂಬ ಕುತೂಹಲಕಾರಿ ಮತ್ತು ಆಶಾದಾಯಕ ಅಂಶವನ್ನು ಅವರು ವಿವರಿಸಿದರು.
ನಗರದಲ್ಲಿ ಡ್ರಗ್ಸ್ ವಿಚಾರದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಗಾರ ಮಾಡುತ್ತಿದ್ದೇವೆ. ಸಾಮಾಜಿಕ ಕಾಳಜಿ, ಇಂಥ ದುಷ್ಚಟಗಳು ಯಾರಿಗಾದರೂ ಇದ್ದರೆ ಮಾಹಿತಿ ಕೊಡಿ ಎಂದು ಹೇಳುತ್ತಿದ್ದೆವು. ಇದರಿಂದ ಪ್ರೇರಿತರಾದ ವಿದ್ಯಾರ್ಥಿಗಳಿಂದಲೇ ಈ ಬಾಂಗ್ ಚಾಕಲೇಟ್ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಕುಲದೀಪ್ ಜೈನ್ ಹೇಳಿದ್ದಾರೆ.
ವಿದ್ಯಾರ್ಥಿಗಳು ನೀಡಿದ ಮಾಹಿತಿ ಆಧಾರದ ಮೇಲೆ ನಗರದ ನೂರಕ್ಕೂ ಅಧಿಕ ಅಂಗಡಿಗಳಿಗೆ ಪರಿಶೀಲನೆ ಮಾಡಿದ್ದೇವೆ ಎಂದು ತಿಳಿಸಿದ ಪೊಲೀಸ್ ಕಮೀಷನರ್ ಕುಲದೀಪ್ ಜೈನ್ ಅವರು ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುತ್ತೇವೆ ಎಂದರು.
ಮೂವರು ಬಜರಂಗ ದಳ ಕಾರ್ಯಕರ್ತರ ಗಡಿಪಾರಿಗೆ ನೋಟಿಸ್
ಮಂಗಳೂರಿನ ಮೂವರು ಭಜರಂಗದಳ ಕಾರ್ಯಕರ್ತರಿಗೆ ಗಡೀಪಾರು ಸಂಬಂಧ ನೋಟೀಸ್ ನೀಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕುಲದೀಪ್ ಜೈನ್ ಅವರು, ʻʻನಮ್ಮ ನಗರದಲ್ಲಿ ಪದೇಪದೆ ಕ್ರೈಂನಲ್ಲಿ ಭಾಗಿಯಾದವರ ಮೇಲೆ ಕ್ರಮ ಆಗಿದೆ. ಮತ್ತೆ ಮತ್ತೆ ಕ್ರೈಂ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಕೆಲಸ ಆಗುತ್ತಿದೆ. ಅವರು ನಮಗೆ ಆರೋಪಿಗಳಷ್ಟೇ, ಅವರು ಯಾವ ಸಂಘಟನೆ ಅನ್ನೋದು ನಮಗೆ ಬೇಡʼʼ ಎಂದರು.
ʻʻಮೂವರು ಮಾತ್ರ ಅಲ್ಲ, ಅದಕ್ಕೂ ಹೆಚ್ಚು ಜನರಿಗೆ ನೋಟೀಸ್ ಮಾಡಲಾಗಿದೆ. ನೈತಿಕ ಪೊಲೀಸ್ ಗಿರಿ ಸಂಬಂಧಿಸಿ ಮೂವರ ಮೇಲೆ ಠಾಣೆಯಿಂದ ಪ್ರಸ್ತಾವನೆ ಬಂದಿದೆ. ಅವರನ್ನು ಗಡೀಪಾರು ಮಾಡಲು ಠಾಣಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು. ಹೀಗಾಗಿ ಅವರಿಗೆ ನೋಟೀಸ್ ಮಾಡಿದ್ದೇವೆ, ಗಡಿಪಾರು ಪ್ರಕ್ರಿಯೆ ಆಗಲಿದೆ. ರೌಡಿ ಶೀಟ್ ತೆರೆಯೋದು ಅಥವಾ ಗೂಂಡಾ ಕಾಯ್ದೆ ಹಾಕುವ ಕೆಲಸವೂ ಆಗ್ತಿದೆ. ನಿರಂತರ ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸುವವರನ್ನು ಗುರುತಿಸಿದ್ದೇವೆʼʼ ಎಂದು ಕಮಿಷನರ್ ಕುಲದೀಪ್ ಜೈನ್ ಹೇಳಿದರು.
ಇದನ್ನೂ ಓದಿ: Terrorists in Bengaluru: ಹಿಂದೂ- ಮುಸ್ಲಿಂ ಗಲಭೆ ಸೃಷ್ಟಿಗೆ ಉಗ್ರರ ಸ್ಕೆಚ್, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹ!