ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka election 2023) ಮತದಾನ ಹಿನ್ನೆಲೆಯಲ್ಲಿ ಇಂದು ಸಂಜೆ 6 ಗಂಟೆಯಿಂದ ಇನ್ನು ಮೂರು ದಿನ ಮದ್ಯ ಮಾರಾಟ (Dry Day) ನಿಲ್ಲಿಸಲಾಗುತ್ತಿದೆ. ಮತದಾರರಿಗೆ ಆಮಿಷ, ಮದ್ಯದ ಅಮಲಿನಲ್ಲಿ ಹುಚ್ಚಾಟ ಮುಂತಾದವನ್ನು ತಡೆಯಲು ಇದನ್ನು ಜಾರಿಗೆ ತರಲಾಗಿದೆ.
ರಾಜಧಾನಿ ಹಾಗೂ ರಾಜ್ಯದ ಎಲ್ಲೆಡೆ ಪೂರ್ತಿ ʼಡ್ರೈ ಡೇಸ್ʼ ಆಚರಿಸಲು ಚುನಾವಣಾ ಆಯೋಗ ಖಡಕ್ ಆದೇಶ ನೀಡಿದೆ. ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾಧಿಕಾರಿಗಳಿಂದ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ಹೋಗಿದ್ದು, ಎಲ್ಲ ಮದ್ಯದಂಗಡಿಗಳನ್ನು ಇಂದು ಸಂಜೆಯಿಂದ ಮುಚ್ಚಲು ಆದೇಶಿಸಲಾಗಿದೆ.
ಇಂದು ಸಂಜೆ 6 ಗಂಟೆಯಿಂದ ಮೇ 11ರ ಬೆಳಗ್ಗೆ 6 ಗಂಟೆಯವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ. ಮೇ 8, 9, 10ರಂದು ಡ್ರೈ ಡೇ ಆಚರಿಸಲು ಪಬ್ ಆ್ಯಂಡ್ ಬಾರ್ ಮಾಲೀಕರಿಗೆ ನೋಟಿಸ್ ಹೋಗಿದೆ. ಅಲ್ಲದೇ ಮತ ಎಣಿಕೆಗೂ ಸಮಸ್ಯೆಯಾಗದಂತೆ ಮೇ 13ರ ಬೆಳಗ್ಗೆ 6 ಗಂಟೆಯಿಂದ ಮೇ 14ರ ಬೆಳಗ್ಗೆ 6 ಗಂಟೆವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಇಂದು ಸಂಜೆ 6 ಗಂಟೆಯ ನಂತರ ಎಲ್ಲಾ ಮದ್ಯದಂಗಡಿಗಳು ಕ್ಲೋಸ್ ಆಗಲಿದ್ದು, ಮತದಾರರಿಗೆ ಆಮಿಷವೊಡ್ಡಲು ಮದ್ಯ ಒಯ್ಯುವವರಿಗೆ ಸಂಕಷ್ಟ ಉಂಟಾಗಿದೆ. ಅಧಿಕಾರಿಗಳ ಅದೇಶ ಮೀರಿ ಮದ್ಯದಂಗಡಿ ತೆರೆದರೆ ಕೇಸ್ ಬೀಳಲಿದೆ. ಹೀಗಾಗಿ ಇಂದು ಸಂಜೆಯೊಳಗೆ ಮದ್ಯದಂಗಡಿಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ಆಗುವ ಸಾಧ್ಯತೆ ಕಾಣಿಸಿದೆ. ಇದೇ ವೇಳೆ ನೋಡಿಕೊಂಡು ಮದ್ಯದಂಗಡಿಯವರೂ ಲಿಕ್ಕರ್ ಬೆಲೆ ಏರಿಸಿದ್ದಾರೆ. ಬಿಯರ್ ಬೆಲೆ 15ರಿಂದ 20%ದಷ್ಟು ಏರಿದೆ ಎನ್ನಲಾಗಿದೆ.
ಇದನ್ನೂ ಓದಿ: Illicit liquor : ಅಕ್ರಮ ಮದ್ಯ ಮಾರಾಟಗಾರನಿಗೆ ಮಹಿಳಾ ದಿನದಂದು ಪೊರಕೆ ಸೇವೆ ಮಾಡಿದ ಮಹಿಳೆಯರು