ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ(Rain News) ಜಮೀನುಗಳಿಗೆ ನೀರು ನುಗ್ಗಿ ವಿವಿಧೆಡೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ. ಕಟಾವಿಗೆ ಬಂದು ನಿಂತ ತರಕಾರಿ, ಹೂವು ಸೇರಿ ವಿವಿಧ ಬೆಳೆಗಳು ನೀರುಪಾಲಾಗಿರುವುದರಿಂದ ಫಸಲು ನಷ್ಟ ಭೀತಿ ಎದುರಾಗಿದ್ದು, ರೈತರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.
ನಷ್ಟದಲ್ಲಿ ಕಲ್ಲಂಗಡಿ ಬೆಳೆಗಾರರು
ಭಾರಿ ಮಳೆಯಿಂದಾಗಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ಹುಲಿಕುಂಟೆ ಗ್ರಾಮದಲ್ಲಿ ಮಲ್ಚಿಂಗ್ ಪೇಪರ್ ವಿಧಾನದಲ್ಲಿ ಬೆಳೆದ ಕಲ್ಲಂಗಡಿ ಬೆಳೆ ಸಂಪೂರ್ಣವಾಗಿ ಜಲಾವೃತವಾಗಿರುವುದರಿಂದ ರೈತ ಆತಂಕಕ್ಕೆ ಒಳಗಾಗಿದ್ದಾರೆ.
ನಾಲ್ಕು ಎಕರೆ ಭೂಮಿಯಲ್ಲಿ ₹2.5 ಲಕ್ಷ ವ್ಯಯಿಸಿ ಕಲ್ಲಂಗಡಿ ಬೆಳೆ ಬೆಳೆದಿದ್ದೆವು. ಹೂವು ಮತ್ತು ಕಾಯಿ ಕಟ್ಟುವ ಹಂತದಲ್ಲಿ ಸುರಿದ ಸತತ ಮಳೆಯಿಂದ ಜಮೀನಿನಲ್ಲಿ ನೀರು ನಿಂತು ಬೆಳೆ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತ ನೀಲಕಂಠಪ್ಪ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ | Heavy Rain | ಮಳೆಯ ರಭಸಕ್ಕೆ ಸರ್ಕಾರಿ ಶಾಲೆಯ ಚಾವಣಿ ಕುಸಿತ, ಪಂಚಾಯಿತಿ ಕಟ್ಟದ ನೆಲಸಮ
ಕಲ್ಲಂಗಡಿ ಬೆಳೆಯಲ್ಲಿ ಅಧಿಕ ಆದಾಯ ಪಡೆಯುವ ಸಲುವಾಗಿ ಮಲ್ಚಿಂಗ್ ಪೇಪರ್ ಹಾಗೂ ಹನಿ ನೀರಾವರಿ ಪದ್ಧತಿಯಲ್ಲಿ ವಿವೆಂಟಾ ತಳಿಯ ಬೀಜ ತರಿಸಿ ನಾಟಿ ಮಾಡಿಸಲಾಗಿತ್ತು. ಬೇಸಾಯ, ಕೂಲಿ, ರಸಗೊಬ್ಬರ ಹಾಗೂ ಔಷಧಕ್ಕೆ ಸೇರಿ ಬೆಳೆಗೆ ಒಟ್ಟು ₹ 2.5 ಲಕ್ಷ ಖರ್ಚಾಗಿತ್ತು. ಕನಿಷ್ಠ ₹5 ಲಕ್ಷದಿಂದ ₹6 ಲಕ್ಷ ಆದಾಯದ ನಿರೀಕ್ಷೆ ಇತ್ತು. ಆದರೆ ಈಗ ಎಲ್ಲವೂ ಹಾಳಾಗಿದೆ’ ಎಂದು ಅವರು ವಿವರಿಸಿದರು.
₹35 ಲಕ್ಷದ ವೆಚ್ಚದ ಕಲ್ಲಂಗಡಿ ನಷ್ಟ: 5-6 ದಿನಗಳ ಕಾಲ ನಿರಂತರವಾಗಿ ಮಳೆ ಸುರಿದು ಪರಿಣಾಮವಾಗಿ ತಾಲೂಕಿನಲ್ಲಿ ಬೆಳೆದ 45 ಹೆಕ್ಟೇರ್ ಪ್ರದೇಶದ ಕಲ್ಲಂಗಡಿ ಬೆಳೆಯಲ್ಲಿ 20 ಎಕರೆ ಜಮೀನಿನಲ್ಲಿ ಮಳೆ ನೀರು ತುಂಬಿಕೊಂಡಿದೆ. ಇದರಿಂದ ₹ 35 ಲಕ್ಷಕ್ಕೂ ಹೆಚ್ಚು ವೆಚ್ಚದ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ. ವಿರೂಪಾಕ್ಷಪ್ಪ ತಿಳಿಸಿದ್ದಾರೆ.
ಬೆಳೆಯಲ್ಲಿ ಮಳೆನೀರು ತುಂಬಿರುವ ಕಾರಣ ಕಲ್ಲಂಗಡಿ ಕೊಳೆಯುವ ಹಂತ ತಲುಪಿದೆ. ಸಾಲ ಮಾಡಿ ಬೆಳೆ ಬೆಳೆದಿದ್ದು, ನೀರು ಪಾಲಾಗಿದೆ. ಮುಂದಿನ ದಾರಿಯೇ ತೋರುತ್ತಿಲ್ಲ ಎಂದು ರೈತ ವೀರಣ್ಣ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಹೀಗೆ ಮಳೆ ಮುಂದುವರಿದರೆ ಈಗಾಗಲೇ ಬಿತ್ತನೆ ಮಾಡಿರುವ ಶೇಂಗಾ ಬೆಳೆಯು ಸಹ ನಷ್ಟವಾಗುವ ಸಂಭವವಿದೆ. ಇದಕ್ಕೆ ಸರ್ಕಾರ ಈಗಾಗಲೇ ತೋಟಗಾರಿಕೆ ಬೆಲೆ ಹಾಗೂ ಇತರ ಬೆಳೆ ನಷ್ಟ ಹೊಂದಿರುವ ರೈತರಿಗೆ ನಷ್ಟದ ಪರಿಹಾರವನ್ನು ನೀಡಬೇಕು ಎಂದು ರೈತ ಮುಖಂಡ ರೆಡ್ಡಿ ಹಳ್ಳಿ ವೀರಣ್ಣ ಒತ್ತಾಯಿಸಿದ್ದಾರೆ.
ತರಕಾರಿ ಕಣಜ’ಕ್ಕೆ ಪ್ರವಾಹದ ಭೀತಿ
ಬಳ್ಳಾರಿ ಜಿಲ್ಲೆಯ ತರಕಾರಿ ಕಣಜಕ್ಕೆ ಪ್ರವಾಹದ ಭೀತಿ ಎದುರಾಗಿದೆ. ತಾರಾನಗರ ಜಲಾಶಯದಿಂದ ಏಕಾಏಕಿ ಹಳ್ಳಕ್ಕೆ ಬಿಡುವ ಹಿನ್ನೆಲೆಯಲ್ಲಿ ನೀರೇ ಕುರೇಕುಪ್ಪ, ಬಸಾಪುರ, ತಾಳೂರು ಗ್ರಾಮಗಳ ತರಕಾರಿ ಬೆಳೆಯುವ ರೈತರಿಗೆ ಶಾಪವಾಗಿ ಪರಿಣಮಿಸಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆಸಿರುವ ತರಕಾರಿ ನೀರು ಪಾಲಾಗಿ ಆತಂಕಗೊಂಡಿದ್ದಾರೆ. ಮಳೆಯ ನೀರಿಗಿಂತ ಜಲಾಶಯದಿಂದ ಅನಿರೀಕ್ಷಿತವಾಗಿ ಬಿಡುವ ನೀರು ರೈತರನ್ನು ಪ್ರತಿಬಾರಿಯು ಆತಂಕಕ್ಕೆ ತಳ್ಳುತ್ತಿದೆ.
ಕುರೇಕುಪ್ಪದಲ್ಲಿ ಹೆಚ್ಚಾಗಿ ತರಕಾರಿ ಬೆಳೆಯುವುದರಿಂದ ಇದನ್ನು ಅಖಂಡ ಬಳ್ಳಾರಿ ಜಿಲ್ಲೆಯ ತರಕಾರಿ ಕಣಜ ಎಂದು ಕರೆಯುತ್ತಾರೆ. ಇಲ್ಲಿ ಬೆಳೆದ ತರಕಾರಿ ಬಳ್ಳಾರಿ ಮತ್ತು ಹೊಸಪೇಟೆ ಮಾರುಕಟ್ಟೆಗೆ ಹೋಗುತ್ತದೆ. ಆದರೆ ಜಲಾಶಯದಿಂದ ಯಾವುದು ಸೂಚನೆ ಇಲ್ಲದೆ ನೀರು ಬಿಡುವುದು ರೈತರನ್ನು ಆತಂಕಕ್ಕೆ ತಳ್ಳಿದೆ. ಈ ಬಾರಿ ಜಲಾಶಯದಿಂದ ಹಳ್ಳಕ್ಕೆ ಬಿಟ್ಟಿರುವ ನೀರಿನಿಂದಾಗಿ ಕುರೇಕುಪ್ಪದ ಜಮೀನಿನಲ್ಲಿ ಬೆಳೆದಿರುವ ಹೂಕೋಸು, ಹೀರೇಕಾಯಿ, ತುಪ್ರೆಕಾಯಿ, ಚೌಳೇ ಕಾಯಿ, ಬೆಂಡೇಕಾಯಿ, ಈರುಳ್ಳಿ, ಟೊಮೊಟೋ, ಮೆಣಸಿನಕಾಯಿ ಸೇರಿ ಸುಮಾರು 400 ಎಕರೆ ಪ್ರದೇಶದಲ್ಲಿ ಬೆಳೆದ ತರಿಕಾರಿ ಬೆಳೆ ಹಾನಿಗೊಳಗಾಗಿದೆ.
ನೆಲಕಚ್ಚಿದ ನೂರಾರು ಎಕರೆ ಗೋವಿನಜೋಳ
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದಾಗಿ, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ, ಸೋಮಲಾಪುರ ಗ್ರಾಮದಲ್ಲಿ ನೂರಾರು ಎಕರೆ ಗೋವಿನಜೋಳ ಗಾಳಿ ಮಳೆಗೆ ನೆಲಕಚ್ಚಿದೆ. ಹಲವು ಕಡೆಗಳಲ್ಲಿ ಹೊಲದಲ್ಲಿ ನೀರು ನಿಂತಿದ್ದು, ಬೆಳೆ ಹಾಳಾಗಿದೆ.
ಇದನ್ನೂ ಓದಿ | ಕೊಡಗಿನಲ್ಲಿ ಮುಂದುವರಿದ ವರುಣನ ಅಬ್ಬರ, ರಾಜ್ಯದಲ್ಲಿ ಇನ್ನೂ 4 ದಿನ ಭಾರಿ ಮಳೆಯ ನಿರೀಕ್ಷೆ