Site icon Vistara News

ಗಣಿನಾಡಿನಲ್ಲಿ ಮಾವಿನ ಹಣ್ಣಿನ ದರ್ಬಾರ್: ಮೂರು ದಿನದ ಮೇಳಕ್ಕೆ ಚಾಲನೆ

ಸಚಿವ ಶ್ರೀರಾಮುಲು

ಬಳ್ಳಾರಿ: ಬಿಸಿಲುನಾಡು ಬಳ್ಳಾರಿಯಲ್ಲಿ ಹಣ್ಣುಗಳ ರಾಜನ ದರ್ಬಾರು ನಡೆಯುತ್ತಿದೆ. ತಹಸಿಲ್ದಾರ ಕಚೇರಿಯಲ್ಲಿ ಮಾವಿನ ಹಣ್ಣಿಗೆ ಜನರು ಮಾರು ಹೋಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಹಣ್ಣಿನ ರಾಜ ಮಾವಿನ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಮೂರು ದಿನಗಳ ಕಾಲ ಈ ಮೇಳ ನಡೆಯುತ್ತಿದೆ. ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಮೇಳಕ್ಕೆ ಆಗಮಿಸಿ ಮಾವು ಖರೀದಿಸಿ ಸವಿಯುವ ಮೂಲಕ ಚಾಲನೆ ನೀಡಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಿಸಾನ್ ಭಾಗಿದಾರಿ ಪ್ರಾಥಮಿಕ ಹಮಾರಿ ಆಂದೋಲನದ ಆಶಯದಂತೆ ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ಸ್ ಸಹಯೋಗದಲ್ಲಿ ಮಾವಿನ ಮೇಳದ ಆಯೋಜನೆ ಮಾಡಲಾಗಿದೆ. ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಈ ಮೇಳ ಆಯೋಜಿಸಿದೆ.

ಮೇಳದಲ್ಲಿ ನಾನಾ ತಳಿಯ ಮಾವುಗಳನ್ನು ಒಂದೇ ಸೂರಿನಲ್ಲಿ ಖರೀದಿಸಬಹುದು. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವಿದೆ. ಹೆಚ್ಚಿನ ಸಂಖ್ಯೆಯ ಗ್ರಾಹಕರು ಭಾಗವಹಿಸಿ ಆರೋಗ್ಯಕರವಾದ ಬಗೆ-ಬಗೆಯ ಮಾವಿನ ಹಣ್ಣು ಸವಿಯಬಹುದು ಎಂದು ಸಚಿವ ಶ್ರೀರಾಮುಲು ಮಾತನಾಡಿದರು..

300ಕ್ಕೂ ಹೆಚ್ಚು ತಳಿಗಳ ಪ್ರದರ್ಶನ
ದೇಶಾದ್ಯಂತ ಹಾಗೂ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಸುಮಾರು 300ಕ್ಕೂ ಹೆಚ್ಚು ತಳಿಯ ಮಾವುಗಳನ್ನು ಇಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.

ರೈತರು ನೇರವಾಗಿ ಮಾರಾಟ ಮಾಡಲು 35 ಮಳಿಗೆಗಳು ಸಿದ್ದವಾಗಿದೆ. ಮಲ್ಲಿಕಾ, ಮಲಗೋವ, ರಸಪುರಿ, ದಶೆಹರಿ, ಬೆನೆಶನ್ ಯಾಕೃತಿ, ರತ್ನ, ನಾಜೂಕಪಸಂದ, ಕೊಬ್ಬರಿಮಾವು ಸೇರಿದಂತೆ ವಿವಿಧ ಬಗೆಯ ತಳಿಯ ಮಾವು ಮೇಳದಲ್ಲಿ ಗಮನ ಸೆಳೆಯುತ್ತಿವೆ.

ಈ ಮೇಳದಲ್ಲಿ ಶುದ್ಧ ಆರ್ಗ್ಯಾನಿಕ್‌ ಮಾವಿನ ಹಣ್ಣುಗಳು ಸಹ ಲಭ್ಯ ಇರುವುದರಿಂದ ಸಾರ್ವಜನಿಕರು ಇಲ್ಲಿಯ ಹಣ್ಣು ಖರೀದಿಸಲು ಮುಗಿಬಿದ್ದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮೇ 27ರಿಂದ ಜೂನ್‌ 13ರ ತನಕ ಮಾವು ಮತ್ತು ಹಲಸು ಮಾರಾಟ ಮೇಳ

Exit mobile version