Site icon Vistara News

ಹಲೋ ಸಚಿವರೇ: ಸಾರಿಗೆ ಇಲಾಖೆಯಲ್ಲಿ ಶೀಘ್ರ ನೇಮಕಾತಿ, ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿಗೆ ಕಡಿವಾಣ: ಸಚಿವ ರಾಮಲಿಂಗಾ ರೆಡ್ಡಿ

Ramalinga Reddy in Hello Minister Vistara news Phone in

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವುದು, ಬೆಂಗಳೂರಿನಲ್ಲಿ ಕಾಡುತ್ತಿರುವ ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿಗೆ ಕಡಿವಾಣ, ಲೋಕಲ್‌ ಬಸ್‌ ಆಗಿದ್ದರೂ ನಿಲ್ದಾಣಗಳಲ್ಲಿ ನಿಲ್ಲಸದೇ ಸಂಚಾರ ಮಾಡುವ ಬಸ್‌ಗಳಿದ್ದರೆ ನಂಬರ್‌ ಸಹಿತ ತಮಗೆ ಪತ್ರ, ದೂರವಾಣಿ ಕರೆ ಇಲ್ಲವೇ ವಾಟ್ಸಪ್‌ ಮೂಲಕ ದೂರು ನೀಡುವುದು, ಬಸ್ಸೇ ಹೋಗದ ಗ್ರಾಮಗಳಿಗೆ ಸೌಕರ್ಯ ನೀಡುವ ಭರವಸೆ, ಸಾರಿಗೆ ಇಲಾಖೆಯಲ್ಲಿ ಹಣದ ಅನಗತ್ಯ ಸೋರಿಕೆಗೆ ಪರಿಹಾರ ಸೇರಿದಂತೆ ಶಕ್ತಿ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅವರು ವಿಸ್ತಾರ ನ್ಯೂಸ್‌ನ “ಹಲೋ ಸಚಿವರೇ” ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜನರ ಹಲವು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.

ವಿಸ್ತಾರ ನ್ಯೂಸ್‌ “ಹಲೋ ಸಚಿವರೇ” ನೇರ ಫೋನ್‌ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಾರಿಗೆ ಇಲಾಖೆಯನ್ನು ಇನ್ನಷ್ಟು ಮೇಲ್ಮಟ್ಟಕ್ಕೆ ತರಲು ತಾವು ಶ್ರಮ ಹಾಕುತ್ತಿರುವುದಾಗಿ ಹೇಳಿದರು. ಅಲ್ಲದೆ, ಸಾರಿಗೆ ಇಲಾಖೆಯಲ್ಲಿ ಶೀಘ್ರ ನೇಮಕಾತಿಗೆ ಚಾಲನೆ ನೀಡುವುದಾಗಿ ಹೇಳಿದರು.

ವಿಸ್ತಾರ ನ್ಯೂಸ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾ ರೆಡ್ಡಿ

ಸಾರಿಗೆ ಇಲಾಖೆಯಲ್ಲಿ ಒಟ್ಟು 1.20 ಸಾವಿರ ಜನ ಸಿಬ್ಬಂದಿ ಇದ್ದಾರೆ. ಇವರಲ್ಲಿ ಒಟ್ಟು 15 ಸಾವಿರ ಸಿಬ್ಬಂದಿ ನಿವೃತ್ತರಾಗಿದ್ದಾರೆ. ಕಂಡಕ್ಟರ್‌, ಮೆಕ್ಯಾನಿಕ್‌ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ. ಯಾವುದೇ ಹುದ್ದೆಗಳು ಖಾಲಿ ಇದ್ದರೂ ನಮಗೆ ಸಮರ್ಪಕ ಸೇವೆ ನೀಡುವುದು ಕಷ್ಟವಾಗುತ್ತದೆ. ಹೀಗಾಗಿ ಸಿಬ್ಬಂದಿ ನೇಮಕಾತಿಯನ್ನು ಮಾಡಿಕೊಳ್ಳಲೇಬೇಕು. ಕೊರೊನಾ ಕಾರಣಕ್ಕೆ ನೇಮಕ ಪ್ರಕ್ರಿಯೆ ನಿಂತು ಹೋಗಿತ್ತು. ಆದರೆ, ಇನ್ನು ಇದಕ್ಕೆ ವೇಗ ನೀಡಲಾಗುವುದು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಇದನ್ನೂ ಓದಿ:Congress Protest: ಅನ್ನಭಾಗ್ಯ ಯೋಜನೆಗೆ ಅಕ್ಕಿ ಪೂರೈಸಲು ಆಗ್ರಹ; ಕೇಂದ್ರದ ವಿರುದ್ಧ ಹಲವೆಡೆ ಕಾಂಗ್ರೆಸ್‌ ಪ್ರತಿಭಟನೆ

ವಿಸ್ತಾರ ನ್ಯೂಸ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾ ರೆಡ್ಡಿ

ಲಾಭದಲ್ಲಿರುವುದು ಶೇ. 23 ಬಸ್!

‌ಸಾರಿಗೆ ಇಲಾಖೆಯ ಲಾಭ-ನಷ್ಟಗಳ ಲೆಕ್ಕಾಚಾರವನ್ನು ಬಿಚ್ಚಿಟ್ಟ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಪ್ರಸ್ತುತ ಸಂಚಾರ ಮಾಡುತ್ತಿರುವ ಒಟ್ಟು ಬಸ್‌ಗಳಲ್ಲಿ ಶೇಕಡಾ 23ರಷ್ಟೇ ಲಾಭ ಮಾಡುತ್ತಲಿದೆ. ಶೇ. 40ರಷ್ಟು ಬಸ್‌ಗಳು “ನೋ ಪ್ರಾಫಿಟ್‌ ನೋ ಲಾಸ್‌” ಎಂಬಂತಿದೆ. ಇನ್ನು ಶೇಕಡಾ 37ರಷ್ಟು ಬಸ್‌ಗಳು ನಷ್ಟದಲ್ಲಿ ಸಂಚಾರ ಮಾಡುತ್ತಿವೆ. ಆದರೆ, ನಾವು ಇಲ್ಲಿ ನಷ್ಟದ ಬಗ್ಗೆ ನೋಡಲು ಆಗುವುದಿಲ್ಲ. ಬಸ್‌ ಸೇವೆ ಎಂಬುದು ನಾಗರಿಕರಿಗೆ ನೀಡಬೇಕಾದ ಅಗತ್ಯ ಸೇವೆಗಳಲ್ಲಿ ಒಂದಾಗಿದೆ. ಹೀಗಾಗಿ ಹತ್ತು ಜನರಿದ್ದರೂ ಅಂತಹ ಕಡೆ ನಾವು ಬಸ್‌ ಅನ್ನು ಓಡಿಸಲೇಬೇಕು ಎಂದು ತಿಳಿಸಿದರು.

ವಿಸ್ತಾರ ನ್ಯೂಸ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾ ರೆಡ್ಡಿ

ವೈಟ್‌ ಬೋರ್ಡ್‌ ಬೈಕ್‌ ಟ್ಯಾಕ್ಸಿ ಮೇಲೆ ಕ್ರಮ

ಬೆಂಗಳೂರಿನಲ್ಲಿ ವೈಟ್‌ ಬೋರ್ಡ್‌ ಬೈಕ್‌ ಟ್ಯಾಕ್ಸಿ ಹಾವಳಿ ಹೆಚ್ಚಾಗಿದ್ದು, ದುಡಿದು ತಿನ್ನುವ ಆಟೋ ಚಾಲಕರಿಗೆ ತೀವ್ರ ಸಮಸ್ಯೆಗಳಾಗುತ್ತಿವೆ. ಯಾರೆಂದರೆ ಅವರು ಬೈಕ್‌ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ, ಸರ್ಕಾರಕ್ಕೆ ತೆರಿಗೆ ಕಟ್ಟುವ ನಮ್ಮ ಪಾಡೇನು? ಇದರ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಟೋ ಚಾಲಕರೊಬ್ಬರು ಕರೆ ಮಾಡಿ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ, ವೈಟ್‌ ಬೋರ್ಡ್‌ ಟ್ಯಾಕ್ಸಿ ಬಗ್ಗೆ ಸುಪ್ರೀಂ ಕೋರ್ಟ್‌ ಆದೇಶವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ನಾವು ಕ್ರಮ ಕೈಗೊಳ್ಳುತ್ತೇವೆ. ನಾನು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.

ಶಟಲ್‌ ಬಸ್‌ ನಿಲ್ಲಿಸದಿದ್ದರೆ ನನಗೆ ದೂರು ಕೊಡಿ

ಶಟಲ್‌ ಬಸ್‌ ಆಗಿದ್ದೂ ನಿಲ್ದಾಣಗಳಲ್ಲಿ ನಿಲ್ಲಸದೇ ಹೋಗುವುದು ಕಾನೂನು ಉಲ್ಲಂಘನೆ. ಹಾಗೆ ಮಾಡುವಂತೆ ಇಲ್ಲ. ಒಂದು ವೇಳೆ ಈ ರೀತಿಯ ಪ್ರಕರಣಗಳು ಕಂಡು ಬಂದರೆ ಸಾರ್ವಜನಿಕರು ಯಾರೇ ಆದರೂ, ಆ ಸಾರಿಗೆ ಬಸ್‌ ನಂಬರ್‌ ಸಹಿತ ದೂರನ್ನು ತಮಗೆ ಪತ್ರ ಬರೆಯಿರಿ. ಅಂಥವರ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತೇನೆ. ಅಲ್ಲದೆ, ಮುಂದೆ ಈ ರೀತಿಯಾಗದಂತೆ ಅವರಿಗೆ ಎಚ್ಚರಿಕೆಯನ್ನೂ ನೀಡಲಾಗುವುದು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಕರ್ನಾಟಕ ಸಾರಿಗೆಗೆ ದೇಶದಲ್ಲಿಯೇ ಉತ್ತಮ ಹೆಸರು

ಕರ್ನಾಟಕ ರಸ್ತೆ ಸಾರಿಗೆಯು ದೇಶದಲ್ಲಿಯೇ ಉತ್ತಮ ಹೆಸರು ಪಡೆದುಕೊಂಡಿದೆ. ಇಲ್ಲಿ ಅತ್ಯುತ್ತಮ ಸೇವೆಯನ್ನು ನೀಡಲಾಗುತ್ತಿದೆ. ಇದು ಜನರಿಗೋಸ್ಕರ ಇರುವ ಸಂಸ್ಥೆ ಎಂದು ಜನ ಹಾಗೂ ಸಿಬ್ಬಂದಿ ಅರ್ಥ ಮಾಡಿಕೊಳ್ಳಬೇಕು. ಶಕ್ತಿ ಯೋಜನೆಯು ಇನ್ನೂ 5 ವರ್ಷ ಜಾರಿಯಲ್ಲಿರುತ್ತದೆ. ಹಾಗಾಗಿ ಜನರೂ ಪ್ಲ್ಯಾನ್‌ ಮಾಡಿ ಸಂಚಾರ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಉದ್ಯೋಗಸ್ಥರಿಗೆ, ಹಿರಿಯ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಸರ್ಕಾರದ ಶಕ್ತಿ ಕಾರ್ಯಕ್ರಮ ಯಶಸ್ವಿಯಾಗಿದೆ. ಆದರೆ, ಈಗಿನ ಬೆಳವಣಿಗೆ ಪ್ರಕಾರ ಸ್ವಲ್ಪ ಬದಲಾವಣೆಯನ್ನು ಸರ್ಕಾರವೂ ಮಾಡಿಕೊಳ್ಳಬೇಕು. ಜನರೂ ಸಹ ಸಹಕಾರವನ್ನು ನೀಡಬೇಕು ಎಂದು ಹೇಳಿದರು.

ಲಾಭ-ನಷ್ಟ ನೋಡುವ ಇಲಾಖೆ ಸಾರಿಗೆಯಲ್ಲ

ನಮ್ಮದು ಸಾರಿಗೆ ಇಲಾಖೆ ನೇರವಾಗಿ ಜನರಿಗೆ ಸಂಬಂಧಪಟ್ಟಿದ್ದಾಗಿದೆ. ಇದು ಲಾಭ ಇರಲಿ, ನಷ್ಟ ಇರಲಿ ನಾವು ಬಸ್‌ ಸಂಚಾರವನ್ನು ನಡೆಸಲೇಬೇಕು. ಯಾವುದೇ ಕಾರಣಕ್ಕೂ ನಾವಿಲ್ಲಿ ಲಾಭದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಕೆಲವು ಹಳ್ಳಿಗಳಲ್ಲಿ ಜನ ಬರಲಿ, ಬಿಡಲಿ ನಾವು ಸಂಚಾರ ಮಾಡುತ್ತೇವೆ. ಈ ಹಿಂದೆ 200 ಕೋಟಿ ರೂಪಾಯಿಯಷ್ಟು ನಷ್ಟ ಆಗುತ್ತಿತ್ತು. ಕೊರೊನಾ ಸಮಯದಲ್ಲಿ ನಾಲ್ಕೂವರೆ ಸಾವಿರ ಕೋಟಿ ರೂಪಾಯಿ ನಷ್ಟ ಆಗಿದೆ. ಆದರೆ, ಈ ಸೇವೆಗೆ ನಷ್ಟವೊಂದೇ ಮುಖ್ಯವಾಗುವುದಿಲ್ಲ. ಉದಾಹರಣೆಗೆ ಹೇಳುವುದಾದರೆ, ವಿದ್ಯೆಗಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ. ಆದರೆ, ಇದರಲ್ಲಿ ನಾವು ಲಾಭ, ನಷ್ಟವನ್ನು ಲೆಕ್ಕ ಹಾಕಲು ಆಗದು. ಅದೇ ರೀತಿ ಸಾರಿಗೆ ಇಲಾಖೆಯದ್ದೂ ಆಗಿದೆ. ಹೀಗಾಗಿ ನಾವು ನಷ್ಟದ ಪ್ರಮಾಣವನ್ನು ನೋಡುವುದಿಲ್ಲ ಎಂದು ಇಲಾಖೆಯ ಕಾರ್ಯವೈಖರಿಯನ್ನು ಸಚಿವ ರಾಮಲಿಂಗಾ ರೆಡ್ಡಿ ವಿವರಿಸಿದರು.

15-20 ದಿನದಲ್ಲಿ ಬಸ್‌ ರಶ್‌ ತಗ್ಗಲಿದೆ

ಶಕ್ತಿ ಕಾರ್ಯಕ್ರಮವನ್ನು ಹೊಸದಾಗಿ ಪ್ರಾರಂಭ ಮಾಡಿದ್ದೇವೆ. ಹೀಗಾಗಿ ಮಹಿಳೆಯರಲ್ಲಿ ಉತ್ಸಾಹ ಇರುತ್ತದೆ. ಈಗ ರಶ್‌ ಆಗುತ್ತಿರುವುದು ಕೆಲವು ದಿನಗಳ ಮಟ್ಟಿಗೆ ಮಾತ್ರವೇ ಆಗಿದೆ. ಈಗ ಮಹಿಳೆಯರು ಧರ್ಮಸ್ಥಳ, ಕುಕ್ಕೆ ಸೇರಿದಂತೆ ಇನ್ನಿತರ ಪುಣ್ಯ ಕ್ಷೇತ್ರ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇನ್ನು 15ರಿಂದ 20 ದಿನದಲ್ಲಿ ಎಲ್ಲವೂ ಸರಿಯಾಗಲಿದೆ. ಯಥಾಸ್ಥಿತಿಗೆ ಸಂಚಾರ ಬರಲಿದೆ. ಜತೆಗೆ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸುತ್ತೇವೆ. ಇನ್ನೂ 5 ವರ್ಷ ಶಕ್ತಿ ಯೋಜನೆ ಇರುತ್ತದೆ. ಹೀಗಾಗಿ ಯಾರೂ ಅವಸರಪಡುವುದು ಬೇಡ. ಎಲ್ಲರೂ ಶಿಸ್ತಿನಿಂದ ಹೋಗಬೇಕು. ಮಹಿಳೆಯರು ಸಾವಧಾನವಾಗಿ ಹೋಗಿ ಎಂದು ಸಚಿವ ರಾಮಲಿಂಗಾ ರೆಡ್ಡಿ ಮನವಿ ಮಾಡಿದರು.

ಇದನ್ನೂ ಓದಿ: Congress Guarantee: ಸ್ವಲ್ಪ ಗಂಭೀರವಾಗಿರಿ, ರಾಜ್ಯದ ಮರ್ಯಾದೆ ತೆಗೀಬೇಡಿ: ಸಚಿವ ಜಾರಕಿಹೊಳಿಗೆ ಪ್ರಲ್ಹಾದ್‌ ಜೋಶಿ ಬುದ್ಧಿವಾದ

ಶಕ್ತಿ ಯೋಜನೆ ಹುಟ್ಟಿದ್ದು ಮಂಗಳೂರಿನಲ್ಲಿ!

ಮಂಗಳೂರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮೀನುಗಾರ ಮಹಿಳೆಯರು ಬಸ್‌ ಉಚಿತ ಸೇವೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹೀಗಾಗಿ ನಾವು ಪಕ್ಷದ ನಾಯಕರ ಜತೆ ಚರ್ಚೆ ಮಾಡಿ ಪ್ರಣಾಳಿಕೆಯಲ್ಲಿ ಸೇರಿಸಿದೆವು. ಈ ಹಿನ್ನೆಲೆಯಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದಿದೆ ಎಂದು ಯೋಜನೆ ಜಾರಿಗೆ ತಂದಿರುವ ಹಿಂದಿನ ಉದ್ದೇಶ ಮತ್ತು ಕಾರಣವನ್ನು ಸಚಿವ ರಾಮಲಿಂಗಾ ರೆಡ್ಡಿ ವಿವರಿಸಿದರು.

ಬರುವ ಆದಾಯವೂ ಬಾರದೇ ಇದ್ದರೆ?

ಈಗಾಗಲೇ ಸಾರಿಗೆ ಇಲಾಖೆ ನಷ್ಟದಲ್ಲಿದೆ. ಈ ಸಮಯದಲ್ಲಿ ಶಕ್ತಿ ಯೋಜನೆಯಿಂದ ಬರುವ ಆದಾಯಕ್ಕೂ ಖೋತಾ ಆಗಿದೆ. ಮತ್ತಷ್ಟು ನಷ್ಟದಲ್ಲಿ ಸಾರಿಗೆ ಇಲಾಖೆಯನ್ನು ಹೇಗೆ ನಡೆಸುತ್ತೀರಿ ಎಂದು ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಮಲಿಂಗಾ ರೆಡ್ಡಿ, ಶಕ್ತಿ ಯೋಜನೆಯನ್ನು ಜಾರಿ ಮಾಡುವುದು ಸರ್ಕಾರದ ಬದ್ಧತೆಯಾಗಿದೆ. ಹೀಗಾಗಿ ಸರ್ಕಾರವೇ ಈ ಹಣವನ್ನು ಭರಿಸಲಿದೆ. ಈ ಕಾರಣಕ್ಕಾಗಿ ನಮ್ಮ ಸಂಸ್ಥೆಗಳಿಗೆ ನಷ್ಟವಾಗಲಾರದು. ಈಗ ಇಲಾಖೆಯು 4 ಸಾವಿರ ಕೋಟಿ ರೂಪಾಯಿ ನಷ್ಟದಲ್ಲಿದೆ. ಈ ಎಲ್ಲ ಹಣವನ್ನು ಸರ್ಕಾರ ಪಾವತಿ ಮಾಡುತ್ತದೆ ಎಂದು ಉತ್ತರಿಸಿದರು.

ಎಲ್ಲ ಪ್ರಶ್ನೆಗಳಿಗೂ ಸಾವಧಾನವಾಗಿ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ

ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರವು ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯ ಅನುಕೂಲ-ಅನಾನುಕೂಲಗಳೇನು? ಸಮಸ್ಯೆ ಏನು? ಸರ್ಕಾರಿ ಸಾರಿಗೆ ವ್ಯವಸ್ಥೆ ಸುಧಾರಣೆಗೆ ನಿಮ್ಮ ಸಲಹೆ ಸೂಚನೆಗಳೇನು? ಸಾರಿಗೆ ಸಿಬ್ಬಂದಿಯ ಬೇಡಿಕೆಗಳೇನು? ಸರ್ಕಾರಿ ಬಸ್‌ಗಳು ಇರದ ಹಳ್ಳಿಗಳು ಸೇರಿದಂತೆ ಹತ್ತು ಹಲವು ಪ್ರಶ್ನೆಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ವಿಸ್ತಾರ ನ್ಯೂಸ್‌ ಮೂಲಕ ಉತ್ತರಿಸಿದರು. ಜನತೆಗೆ ಸೂಕ್ತ ಪರಿಹಾರವನ್ನೂ ಹೇಳಿದರು.

ಸರ್ಕಾರ-ಜನರ ಮಧ್ಯೆ ವಿಸ್ತಾರ ನ್ಯೂಸ್‌ ಕೊಂಡಿ: ಹರಿಪ್ರಕಾಶ್‌ ಕೋಣೆಮನೆ

ಜನಪರ ನಿಲುವಿನ ಭಾಗವಾಗಿ ಸರ್ಕಾರವನ್ನು ನಾವು ಜನರ ಬಳಿಗೆ ಕೊಂಡೊಯ್ಯುವ ಕೆಲಸವನ್ನು ಮಾಡುತ್ತಿದ್ದೇವೆ. ಈ ಮೂಲಕ ಸರ್ಕಾರ ಹಾಗೂ ಜನರನ್ನು ಬೆಸೆಯುವ ಕೊಂಡಿಯಾಗಿ ವಿಸ್ತಾರ ನ್ಯೂಸ್‌ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಮಂಗಳವಾರ ಒಂದೊಂದು ಇಲಾಖೆ ಸಚಿವರ ಫೋನ್‌ ಇನ್‌ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದ್ದೇವೆ ಎಂದು ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ದೂರು – ದುಮ್ಮಾನ; ಸಚಿವರಿಂದ ಪರಿಹಾರ

ಈ ನಡುವೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಫೋನ್‌ ಕರೆ ಮೂಲಕ ಹಲವರು ಗಮನ ಸೆಳೆದಿದ್ದಾರೆ. ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಪ್ರಶ್ನೆಗಳ ಪ್ರಮುಖ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.

ಉಚಿತ ಬಸ್‌ ಬಗ್ಗೆ ವೃದ್ಧರೊಬ್ಬರ ಮನವಿ

ವೃದ್ಧರಿಗೆ ಬೇಕು ಉಚಿತ ಬಸ್‌ ಪ್ರಯಾಣ

ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ನೀಡಿರುವುದು ಉತ್ತಮ ಸಂಗತಿಯಾಗಿದೆ. ಅದೇ ರೀತಿಯಾಗಿ ಹಿರಿಯ ನಾಗರಿಕರಿಗೂ ಉಚಿತ ಪ್ರಯಾಣ ನೀಡಿ ಎಂದು ನಾಗರಿಕರೊಬ್ಬರು ಸಚಿವರ ಬಳಿ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗಾ ರೆಡ್ಡಿ, ಈಗಾಗಲೇ ಹಿರಿಯ ನಾಗರಿಕರಿಗೆ ಶೇಕಡಾ 25ರಷ್ಟು ರಿಯಾಯಿತಿಯನ್ನು ನೀಡಲಾಗಿದೆ ಎಂದು ಉತ್ತರಿಸಿದರು.

ಇದನ್ನೂ ಓದಿ: D ಕೋಡ್‌ ಅಂಕಣ: ಬಿಜೆಪಿ ಮೇ ಇತನಾ ಸನ್ನಾಟಾ ಕ್ಯೂ ಹೈ ಭಾಯ್‌?

ಖಾಸಗಿ ಬಸ್‌ ಬಗ್ಗೆ ಸಚಿವರು ಹೇಳಿದ್ದೇನು?

ಖಾಸಗಿ ಬಸ್‌ ಇದ್ದ ಕಡೆ ಏನ್‌ ಕಥೆ?

ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳಿವೆ. ಈ ಭಾಗದಲ್ಲಿ ಅನುಕೂಲ ಆಗುತ್ತಿಲ್ಲ ಎಂದು ಸಾರ್ವಜನಿಕರೊಬ್ಬರು ಸಚಿವರ ಗಮನ ಸೆಳೆದರು. ಇದಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವು ಕಡೆ ಖಾಸಗಿ ಬಸ್‌ಗಳು ಜಾಸ್ತಿ ಇದೆ. ಅಲ್ಲಿಯ ಸ್ಥಿತಿ ಬಗ್ಗೆ ಗಮನಹರಿಸಲಾಗುವುದು. ಆದರೆ, ಅಲ್ಲಿ ಈಗ ಖಾಸಗಿ ಬಸ್‌ಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ನಾವು ಅವುಗಳ ಹಿತದೃಷ್ಟಿಯನ್ನು ಇಟ್ಟುಕೊಂಡು ಕ್ರಮ ಕೈಗೊಳ್ಳಬೇಕು. ಹೀಗಾಗಿ ನಿಮ್ಮ ಸಲಹೆಯನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇವೆ ಎಂದು ಹೇಳಿದರು.

ಹೆಂಡ್ತಿ ಮತ್ತು ಚಿತ್ರಾನ್ನ- ಗಂಡ ಹೇಳಿದ್ದೇನು? ಇಲ್ಲಿದೆ ವಿಡಿಯೊ!

ಚಿತ್ರಾನ್ನ ತಿಂದುಕೊಂಡು ಬಿದ್ದಿರಿ ಅನ್ನುತ್ತಾಳೆ ನನ್‌ ಹೆಂಡ್ತಿ!

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ನನ್ನ ಹೆಂಡತಿಗೆ ಶಕ್ತಿ ಬಂದು ಬಿಟ್ಟಿದೆ. ಬೆಳಗ್ಗೆ ಎದ್ದವಳು ಚಿತ್ರಾನ್ನ ಮಾಡಿಟ್ಟು, ಇದನ್ನೇ ರಾತ್ರಿವರೆಗೂ ತಿಂದು ಮನೆಯಲ್ಲೇ ಬಿದ್ದಿರಿ ಎಂದು ಹೋಗುತ್ತಾಳೆ. ನಾವು ಏನು ಮಾಡುವುದು ಸರ್?‌ ಎಂದು ಬೆಂಗಳೂರಿನ ನಾಗರಬಾವಿಯ ನಾಗರಾಜ್‌ ಎಂಬುವವರು ಪ್ರಶ್ನೆ ಮಾಡಿದರು. ಅಲ್ಲದೆ, ನನ್ನ ಹೆಂಡತಿಗೆ ಎಷ್ಟು ಹೇಳಿದರೂ ಕೇಳುತ್ತಿಲ್ಲ. ನಾನು ಇಂದು ನಮ್ಮಮ್ಮನ ಮನೆಗೆ ಹೋಗುತ್ತೇನೆ, ತಂಗಿ ಮನೆಗೆ ಹೋಗುತ್ತೇನೆ, ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಹೇಳಿ ಪ್ರತಿ ದಿನ ಒಂದೊಂದು ಕಡೆಗೆ ಹೋಗುತ್ತಾಳೆ. ಪರಿಸ್ಥಿತಿ ಹೀಗಾದರೆ ನಮ್ಮ ಊಟಕ್ಕೆ ಏನು ಮಾಡುವುದು? ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವರು, ಈಗ ಹೊಸತಾಗಿ ಯೋಜನೆ ಜಾರಿಯಲ್ಲಿರುವುದರಿಂದ ಮಹಿಳೆಯರಿಗೆ ಹುರುಪು ಇರುತ್ತದೆ. ಇನ್ನು ಸ್ವಲ್ಪ ದಿನದಲ್ಲಿಯೇ ಎಲ್ಲವೂ ಸರಿ ಆಗುತ್ತದೆ ಎಂದು ಉತ್ತರಿಸಿದರು.

ಬಸ್‌ನಿಂದ ಮಾಲಿನ್ಯ ಆಗುತ್ತಿದೆ!

ಬೆಂಗಳೂರಿನ ಭಾಸ್ಕರ ರೆಡ್ಡಿ ಎಂಬುವವರು ಕರೆ ಮಾಡಿ ಸಾರಿಗೆ ಬಸ್‌ನಿಂದ ಬಹಳವೇ ಮಾಲಿನ್ಯ ಆಗುತ್ತಿದೆ. ಬಸ್‌ಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು, ಬಸ್‌ಗಳು ತುಂಬಾ ಹೊಗೆ ಬಿಡುತ್ತವೆ. ಇದಕ್ಕೆ ಸೂಕ್ತ ಕ್ರಮ ವಹಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗಾ ರೆಡ್ಡಿ, ಬೆಂಗಳೂರಿನಲ್ಲಿ 70 ಲಕ್ಷಕ್ಕೂ ಮಿಗಿಲಾಗಿ ವಾಹನಗಳು ಇವೆ. ಆದರೆ, ಸಾರಿಗೆ ಬಸ್‌ ಇರುವುದು ಕೇವಲ 4ರಿಂದ 6 ಸಾವಿರ ಮಾತ್ರ. ಆ ಬಸ್‌ಗಳಲ್ಲಿ ಕೆಲವು ಹಳೆಯದಾಗಿದ್ದು, ಹೊಗೆ ಜಾಸ್ತಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಇದನ್ನು ಕಡಿಮೆ ಮಾಡಲು ಹೊಸ ಬಸ್‌ಗಳನ್ನು ಖರೀದಿ ಮಾಡುತ್ತೇವೆ ಎಂದು ಹೇಳಿದರು.

ಆಟೋ ಬಗ್ಗೆ ಸಚಿವರ ಮಾತು

ಎಲೆಕ್ಟ್ರಿಕ್‌ ಬಸ್‌ ಸೇವೆ ನೀಡಲು ಮುಂದೆ ಬನ್ನಿ

ಬಸ್‌ಗಳಿಂದ ಹೊಗೆ ಬರುವ ವಿಚಾರವಾಗಿ ಎಲೆಕ್ಟ್ರಿಕಲ್‌ ಬಸ್‌ ಬಗ್ಗೆ ಈ ವೇಳೆ ಚರ್ಚೆ ನಡೆಯಿತು. ಆಗ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ, ಎಲೆಕ್ಟ್ರಿಕ್‌ ಬಸ್‌ಗಳಿಗೆ ಕೇಂದ್ರ ಸರ್ಕಾರ 50 ಲಕ್ಷ ರೂಪಾಯಿ ಸಬ್ಸಿಡಿಯನ್ನು ಕೊಡುತ್ತದೆ. ಇದನ್ನು ಖಾಸಗಿ ಕಂಪನಿಗೆ ನೀಡಿದ್ದು, ಅವರೇ ನಿರ್ವಹಣೆಯನ್ನು ಮಾಡುತ್ತಾರೆ. ಹೀಗಾಗಿ ಯಾರಾದರೂ ಬಂದು ಈ ಸೇವೆ ನೀಡಲು ಮುಂದಾದರೆ ಕೇಂದ್ರ ಸರ್ಕಾರ ಅನುದಾನ ನೀಡಲಿದೆ. ಈ ಬಗ್ಗೆ ಆಸಕ್ತರು ಮುಂದೆ ಬರಬಹುದು ಎಂದು ಹೇಳಿದರು.

ಇದನ್ನೂ ಓದಿ:Viral News: ನಿಮ್ಮ ಕಿರುಕುಳ, ಒತ್ತಡ ನಿಭಾಯಿಸುವ ಮಂತ್ರ ಕಲಿಯಲು ರಜೆ ಕೊಡಿ: ಪೊಲೀಸ್‌ ಅಧಿಕಾರಿ ಪತ್ರ!

ಶಕ್ತಿ ಯೋಜನೆ 5 ವರ್ಷ ನಾನ್‌ ಸ್ಟಾಪ್

ಬಸ್‌ನಲ್ಲಿ ನೂಕುನುಗ್ಗಲು ಇರುವುದರಿಂದ ಹಿರಿಯ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ.‌ ಕತ್ತು ನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇವೆ. ರಶ್‌ ಇರುವುದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಮಹಿಳೆಯೊಬ್ಬರು ಪರಿಸ್ಥಿತಿಯನ್ನು ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗಾ ರೆಡ್ಡಿ, ಮುಂದಿನ ದಿನಗಳಲ್ಲಿ ನಾವು ಈ ಬಗ್ಗೆ ಗಮನ ಹರಿಸುತ್ತೇವೆ. ನಾವು ಈ ಯೋಜನೆಯನ್ನು ಗ್ಯಾರಂಟಿ ಅಡಿ ಘೋಷಣೆ ಮಾಡಿದ್ದೇವೆ. ಹೀಗಾಗಿ ಈ ಐದು ವರ್ಷ ಯೋಜನೆಯನ್ನು ನಿಲ್ಲಿಸಲು ಆಗದು. ಹಾಗಾಗಿ ಜನರಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗುವುದು. ಅಲ್ಲದೆ, ಇನ್ನು ಸ್ವಲ್ಪ ದಿನದಲ್ಲಿ ದಟ್ಟನೆ ತಗ್ಗಲಿದೆ ಎಂದು ಭರವಸೆ ನೀಡಿದರು.

Exit mobile version