Site icon Vistara News

Earthquake in Karnataka | ರಾಜ್ಯದ ಹಲವೆಡೆ ಕಂಪಿಸಿದ ಭೂಮಿ, ಆತಂಕಗೊಂಡ ಜನ

earthquake in karnataka

ಹಾಸನ: ರಾಜ್ಯದ ಹಲವೆಡೆ ಗುರುವಾರ ಬೆಳಗಿನ ಜಾವ ಭೂಕಂಪನ (Earthquake in Karnataka) ಸಂಭವಿಸಿದೆ. ಹಾಸನ ಜಿಲ್ಲೆ ಈ ಭೂಕಂಪನ ಕೇಂದ್ರ ಬಿಂದುವಾಗಿದ್ದು, ಮಂಡ್ಯ ಹಾಗೂ ಕೊಡಗು ಜಿಲ್ಲೆಯಲ್ಲೂ ಇದರ ಪರಿಣಾಮ ಕಂಡಿಬಂದಿದೆ. ಇದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಬೆಳಗ್ಗೆ ಕಂಪನದ ಅನುಭವವಾದಾಗ ನಿದ್ರೆಯಲ್ಲಿದ್ದ ಬಹಳಷ್ಟು ಜನ ಇದ್ದಕ್ಕಿದ್ದಂತೆ ಎದ್ದು ಮನೆಯಿಂದ ಹೊರಗೋಡಿ ಬಂದರು. ಅದರಲ್ಲೂ ಹಲವರು ಮಕ್ಕಳನ್ನು ಎತ್ತಿಕೊಂಡು ಆತಂಕದಿಂದ ಹೊರಗೋಡಿ ಬಂದಿದ್ದು ಕಂಡುಬಂತು.

ಗುರುವಾರ ಮುಂಜಾನೆ 4.30ರ ಹೊತ್ತಿಗೆ ಭೂಮಿ ಕಂಪಿಸಿದ್ದು ದಾಖಲಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುದ್ದನಹಳ್ಳಿ, ಅರಕಲಗೂಡು ಪಟ್ಟಣ, ಹನೆಮಾರನಹಳ್ಳಿ, ಕಾರಳ್ಳಿ ಹಾಗೂ ಆಂಕನಹಳ್ಳಿಯಲ್ಲಿ ಭೂಕಂಪನ ಸಂಭವಿಸಿದೆ. ಹಾಸನ‌‌ ಜಿಲ್ಲೆಯ ಹೊಳೆನರಸೀಪುರದಿಂದ 16 ಕಿಲೋ ಮೀಟರ್ ದಕ್ಷಿಣಕ್ಕೆ ಕಂಪನದ ಕೇಂದ್ರಬಿಂದು. ಹೀಗಾಗಿ ಹಾಸನ ಸೇರಿದಂತೆ ಹಾಸನಕ್ಕೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಭೂ ಕಂಪನವಾಗಿದೆ. ನಿದ್ರೆಯಲ್ಲಿದ್ದವರಿಗೆ ಲಘು ಕಂಪನ ಶಾಕ್‌ ನೀಡಿತು. ರಿಕ್ಟರ್‌ ಮಾಪನದಲ್ಲಿ ಈ ಲಘು ಭೂಕಂಪನದ ತೀವ್ರತೆ ೩.೪ ಇತ್ತು. ಭೂಮಿಯ ೫ ಕಿ.ಮೀ ಅಡಿಯಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು.

ಹಾಸನವಲ್ಲದೆ ಇನ್ನೆಲ್ಲಿ ಭೂಕಂಪನ?

ಕೊಡಗು: ಕೊಡಗು ಜಿಲ್ಲೆಯ ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್ ಹಾಗೂ ನೇಗಳ್ಳೆ ಗ್ರಾಮದಲ್ಲಿ ಭೂ ಕಂಪಿಸಿದೆ. ಅಲ್ಲದೆ, ಮಡಿಕೇರಿ ತಾಲೂಕಿನ ದೇವಸ್ತೂರು, ಮಡಿಕೇರಿ ನಗರದಲ್ಲೂ ಸಣ್ಣ ಪ್ರಮಾಣದ ಕಂಪನ ಕಂಡಿಬಂದಿದೆ.

ಕಳೆದ ವರ್ಷದ ಮಳೆಗಾಲದ ಆರಂಭದಲ್ಲಿ ಕೂಡ ಕೊಡಗು ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು. ಅಲ್ಲದೆ, 2018 ಹಾಗೂ 2019ರಲ್ಲಿಯೂ ಹೀಗಾಗಿತ್ತು. ನಂತರ ಪ್ರಾಕೃತಿಕ ವಿಕೋಪ ಸಂಭವಿಸಿತ್ತು. ಇದರಿಂದ ಕೊಡಗು ಜಿಲ್ಲೆಯ ಜನತೆ ಸಾಕಷ್ಟು ನಷ್ಟ ಅನುಭವಿಸಬೇಕಾಗಿತ್ತು. ಅನೇಕ ಜೀವಹಾನಿಯೂ ಉಂಟಾಗಿತ್ತು. ಈಗ ಈ ವರ್ಷ ಮತ್ತೊಮ್ಮೆ ಈ ರೀತಿಯ ಭೂಮಿ ಕಂಪನದ ಘಟನೆ ಸಂಭವಿಸಿದ್ದು ಕೊಡಗು ಜನ ಆತಂಕಗೊಂಡಿದ್ದಾರೆ.

ಮಂಡ್ಯ: ಮಂಡ್ಯದ ಕೆಲವು ಪ್ರದೇಶಗಳಲ್ಲಿಯೂ ಭೂಮಿ ಕಂಪಿಸಿದ ಅನುಭವ ಕಂಡುಬಂದಿದೆ. ಕೆ.ಆರ್ ಪೇಟೆ ತಾಲೂಕಿನ ಮಾದಾಪುರ, ಗೊಂದಿಹಳ್ಳಿ, ಚಿನ್ನೇನಹಳ್ಳಿ, ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಗುರುವಾರ ಮುಂಜಾನೆ 4:30 ರಿಂದ 5 ಗಂಟೆಯ ಅವಧಿಯಲ್ಲಿ ಭಾರಿ ಶಬ್ದದ ಜತೆಗೆ ಭೂಮಿ ಕಂಪಿಸಿದ್ದು ಇಲ್ಲಿಯ ಜನತೆಗೆ ಅನುಭವಕ್ಕೆ ಬಂದಿದೆ. ಇದರಿಂದ ಆತಂಕಗೊಂಡ ಜನರು ಕೂಡಲೇ ಮನೆ ಬಿಟ್ಟು ಹೊರಬಂದಿದ್ದಾರೆ. ಸುಮಾರು ಮೂರು ನಿಮಿಷಗಳ ಕಾಲ ಭೂಮಿ ಕಂಪಿಸಿದ ಅನುಭವ ಕಂಡುಬಂದಿದೆ.

ಇದನ್ನೂ ಓದಿ: ಹಾಸನ ಜಿಲ್ಲೆಯ ಹಲವೆಡೆ ಲಘು ಭೂಕಂಪ, 3.4 ತೀವ್ರತೆ, ಜನತೆಯಲ್ಲಿ ಆತಂಕ

Exit mobile version