Site icon Vistara News

Earthquake in Karnataka | ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಭರವಸೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಹಾಸನ, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳ ಹಲವು ಭಾಗಗಳಲ್ಲಿ ಗುರುವಾರ ಬೆಳಗಿನ ಜಾವ ಲಘು ಭೂಕಂಪನ (Earthquake in Karnataka) ಸಂಭವಿಸಿದ್ದು, ಈ ಬಗ್ಗೆ ಯಾವುದೇ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಗುರುವಾರ ಬೆಳಗಿನ ಜಾವ ರಾಜ್ಯದಲ್ಲಿ ಹಲವೆಡೆ ಭೂಮಿ ಕಂಪಿಸಿದ್ದು ಜನತೆಯ ಆತಂಕಕ್ಕೆ ಕಾರಣವಾಗಿತ್ತು. ಹಾಸನ ಜಿಲ್ಲೆಯ ಹೊಳೆನರಸೀಪುರದ ಬಳಿ ಈ ಭೂಕಂಪನದ ಕೇಂದ್ರ ಬಿಂದುವಾಗಿತ್ತು. ಹೀಗಾಗಿ ಸುತ್ತಲಿರುವ ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಹಲವು ಗ್ರಾಮಗಳಲ್ಲೂ ಭೂಕಂಪನದ ಅನುಭವವಾಗಿತ್ತು. ಇದರಿಂದ ಜನರು ಆತಂಕಗೊಂಡಿದ್ದರು. ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಭೂಮಿ ಕಂಪಿಸಿದ್ದು, ನಂತರ ನೈಸರ್ಗಿಕ ವಿಕೋಪ ಸಂಬವಿಸಿತ್ತು. ಹೀಗಾಗಿ ಈ ಬಾರಿಯೂ ಜನರು ಆತಂಕಕ್ಕೊಳಗಾಗಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಇದೊಂದು ಸಣ್ಣ ಪ್ರಮಾಣದ ಕಂಪನ. ಕೇಂದ್ರ ಬಿಂದು ಸ್ಥಳದಿಂದ ಸುತ್ತ 40-50 ಕಿ.ಮೀ ದೂರದವರೆಗೆ ಈ ಕಂಪನದ ಅನುಭವ ಕಂಡುಬರುವುದು ಸಹಜ. ಭೂಕಂಪನದ ತೀವ್ರತೆಯ ಆಧಾರದ ಮೇಲೆ ಪ್ರದೇಶಗಳನ್ನು ವಿವಿಧ ಭೂಕಂಪನ ವಲಯಗಳನ್ನಾಗಿ ವರ್ಗೀಕರಿಸಲಾಗಿದೆ. ಒಟ್ಟು 5 ಭೂಕಂಪನ ವಲಯಗಳಿಲವೆ. ಅತಿ ಹೆಚ್ಚು ತೀವ್ರತೆಯ ಪ್ರದೇಶವನ್ನ್ನು ಭೂಕಂಪನ ವಲಯ-5(Seismic Zone 5) ಎಂದು ಹೇಳಲಾಗುತ್ತದೆ. ಅತಿ ಕಡಿಮೆ ತೀವ್ರತೆಯ ಪ್ರದೇಶವನ್ನು ಭೂಕಂಪನ ವಲಯ-1 ಎಂದು ಪರಿಗಣಿಸಲಾಗಿದೆ. ಈ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದರೂ ಪ್ರಮಾಣ ಅತಿ ಕಡಿಮೆ ಹಾಗೂ ಇದರಿಂದ ಯಾವುದೇ ಹಾನಿ ಉಂಟಾಗುವುದಿಲ್ಲ.

ಅದೇ ರೀತಿ ಗುರುವಾರ ಬೆಳಗ್ಗೆ ಕರ್ನಾಟಕದಲ್ಲಿ ಭೂಕಂಪನ ಸಂಭವಿಸಿದ ಹಾಸನ ಜಿಲ್ಲೆಯು ಭೂಕಂಪನ ವಲಯ-2(Seismic Zone 2)ಕ್ಕೆ ಸೇರುತ್ತದೆ. ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗುವುದಿಲ್ಲ ಎಂದು ಇಲಾಖೆ ಭರವಸೆ ನೀಡಿದೆ. ಹೀಗಾಗಿ ಜನರು ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಇದನ್ನೂ ಓದಿ: Earthquake in Karnataka | ರಾಜ್ಯದ ಹಲವೆಡೆ ಕಂಪಿಸಿದ ಭೂಮಿ, ಆತಂಕಗೊಂಡ ಜನ

Exit mobile version